ಲಂಡನ್: ಪ್ರಮುಖ ಆಟಗಾರರಿರದ ಇಂಗ್ಲೆಂಡ್ ತಂಡ ಪಾಕಿಸ್ಥಾನ ವಿರುದ್ಧದ ಎರಡನೇ ಪಂದ್ಯವನ್ನೂ ಗೆದ್ದು ಸರಣಿ ಜಯಿಸಿದೆ. ಇದರೊಂದಿಗೆ ತನ್ನ ನಾಯಕತ್ವದಲ್ಲಿ ಬೆನ್ ಸ್ಟೋಕ್ಸ್ ಮೊದಲ ಸರಣಿಯನ್ನೇ ಗೆದ್ದಿದ್ದಾರೆ.
ಇಲ್ಲಿನ ಐತಿಹಾಸಿಕ ಲಾರ್ಡ್ಸ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ಥಾನ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿತು. ಇಂಗ್ಲೆಂಡ್ ಪರ ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ಡೇವಿಡ್ ಮಲಾನ್ ಮತ್ತು ಕ್ರಾವ್ಲಿ ಇಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಆದರೆ ಫಿಲಿಫ್ ಸಾಲ್ಟ್ (60 ರನ್) ಮತ್ತು ವಿನ್ಸ್ (56 ರನ್) ಅರ್ಧಶತಕ ಸಿಡಿಸಿ ತಂಡವನ್ನು ಆಧರಿಸಿದರು. ಕೊನೆಯಲ್ಲಿ ಗ್ರೆಗರಿ ಉಪಯುಕ್ತ 40 ರನ್ ಗಳಿಸಿದರು.
ಇಂಗ್ಲೆಂಡ್ ತಂಡ 45.2 ಓವರ್ ನಲ್ಲಿ 247 ರನ್ ಗೆ ಆಲ್ ಔಟ್ ಆಯಿತು. ಪಾಕ್ ಪರ ಹಸನ್ ಅಲಿ ಐದು ವಿಕೆಟ್ ಪಡೆದು ಮಿಂಚಿದರು.
ಇದನ್ನೂ ಓದಿ:ಕೊಪ ಅಮೆರಿಕ ಫೈನಲ್: ಬ್ರಝಿಲ್ ವಿರುದ್ಧ ಗೆದ್ದ ಅರ್ಜೆಂಟೀನಾ, ಕೊನೆಗೂ ಕಪ್ ಎತ್ತಿದ ಮೆಸ್ಸಿ
ಬ್ಯಾಟಿಂಗ್ ಆರಂಭಿಸಿದ ಪಾಕಿಸ್ಥಾನ ಸತತ ವಿಕೆಟ್ ಕಳೆದುಕೊಂಡಿತು. 59 ರನ್ ಗಳಿಸಿದ ಸೌದ್ ಶಕೀಲ್ ಅವರದ್ದೆ ಹೆಚ್ಚಿನ ಗಳಿಕೆ. ಕೊನೆಯಲ್ಲಿ ಹಸನ್ ಅಲಿ 31 ರನ್ ಗಳಿಸಿದರು. ಪಾಕಿಸ್ಥಾನ ತಂಡ 195 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲನುಭವಿಸಿತು. ಇಂಗ್ಲೆಂಡ್ ಪರ ಗ್ರೆಗರಿ ಮೂರು ವಿಕೆಟ್ ಕಿತ್ತರೆ, ಸಕಿಬ್ ಮೊಹಮ್ಮದ್, ಓವರ್ಟನ್ ಮತ್ತು ಪಾರ್ಕಿನ್ಸನ್ ತಲಾ ಎರಡು ವಿಕೆಟ್ ಪಡೆದರು.