Advertisement

ಸರ್.ಎಂ ವಿಶ್ವೇಶ್ವರಯ್ಯ ಹುಟ್ಟು ಹಬ್ಬದ ವಿಶೇಷ : ಅಸಾಮಾನ್ಯ ಎಂಜಿನಿಯರ್‌ಗಳ ಯಶೋಗಾಥೆ

11:31 AM Sep 15, 2021 | Team Udayavani |

ಭಾರತ ರತ್ನ ಮೋಕ್ಷಗುಂಡಂ ಸರ್‌ ಎಂ. ವಿಶ್ವೇಶ್ವರಯ್ಯ ಅವರ ಹುಟ್ಟುಹಬ್ಬದ ನೆನಪಿನಲ್ಲಿ ಪ್ರತೀ ವರ್ಷವೂ ಎಂಜಿನಿಯರ್‌ಗಳ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ದೇಶದ ಪ್ರಗತಿಗೆ ಎಂಜಿನಿಯರ್‌ಗಳ ಕೊಡುಗೆ ಅಪಾರ. ಅದರಲ್ಲೂ ಪ್ರತೀ ವರ್ಷ ಭಾರತದಲ್ಲಿ ಕಾಲೇಜುಗಳಿಂದ ಹೊರಬರುವ ಎಂಜಿನಿಯರ್‌ಗಳ ಸಂಖ್ಯೆಯೂ ಅಪಾರ. ಅಂದರೆ ಇಡೀ ಜಗತ್ತಿನಲ್ಲೇ ಎಂಜಿನಿಯರ್‌ಗಳ ಸೃಷ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಇಂಥ ಹೊತ್ತಿನಲ್ಲಿ ದೇಶಕ್ಕೆ ಕೀರ್ತಿ ತಂದ ಮತ್ತು ದೇಶ ಕಟ್ಟಲು ತಮ್ಮದೇ ಆದ ಕಾಣಿಕೆ ನೀಡಿದ ಎಂಜಿನಿಯರ್‌ಗಳನ್ನು ನೆನಪಿಸಿಕೊಳ್ಳದೇ ಇದ್ದರೆ ತಪ್ಪಾದೀತು. 

Advertisement

ಸರ್‌.ಎಂ.ವಿಶ್ವೇಶ್ವರಯ್ಯ :

ಆಧುನಿಕ ಭಾರತದ ಎಂಜಿನಿಯರ್‌ ಎಂದೇ ಖ್ಯಾತರಾಗಿರುವ ಸರ್‌.ಎಂ.ವಿ ಅವರು ದೇಶಕ್ಕೆ ನೀಡಿರುವ ಕೊಡುಗೆ ಅಪಾರ. ಕರ್ನಾಟಕದ ಕೆಆರ್‌ಎಸ್‌ನಲ್ಲಿ ಅಣೆಕಟ್ಟು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇ ಅಲ್ಲದೆ ಹೈದರಾಬಾದ್‌ನಲ್ಲಿನ ಪ್ರವಾಹ ನಿಯಂತ್ರಣ ವ್ಯವಸ್ಥೆ ರೂಪಿಸಿದವರೂ ಸರ್‌.ಎಂ.ವಿ ಅವರೇ. ಜತೆಗೆ ವಿಶಾಖಪಟ್ಟಣ ಬಂದರಿನಲ್ಲಿ ಇರುವ ಸೇಫ್ಗಾರ್ಡ್‌ ಕಟ್ಟಡವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರನ್ನು ಅಣೆಕಟ್ಟುಗಳ ಜನಕ, ಆರ್ಥಿಕ ತಜ್ಞ ಎಂದೆಲ್ಲ ಕರೆಯಲಾಗುತ್ತದೆ. 1955ರಲ್ಲಿ ವಿಶ್ವೇಶ್ವರಯ್ಯ  ಅವರಿಗೆ ಭಾರತ ರತ್ನ  ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಡಾ| ಎ.ಪಿ.ಜೆ. ಅಬ್ದುಲ್‌ ಕಲಾಂ :

ಮಾಜಿ ರಾಷ್ಟ್ರಪತಿಯೂ ಆಗಿರುವ, ಭಾರತದ ರಾಕೆಟ್‌ ಮ್ಯಾನ್‌ ಎಂದೇ ಪರಿಚಿತವಾಗಿರುವ ಡಾ| ಅಬ್ದುಲ್‌ ಕಲಾಂ ಅವರೂ ಮೂಲತಃ ಎಂಜಿನಿಯರ್‌. ಇಸ್ರೋದ ಜನಕ ವಿಕ್ರಂ ಸಾರಾಭಾಯಿ ಅವರ ಕೆಳಗೆ ಕೆಲಸ ಮಾಡಿದ ಅಬ್ದುಲ್‌ ಕಲಾಂ ಅವರು, ಭಾರತದ ಕ್ಷಿಪಣಿ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದರು. ಇವರು ಭಾರತದ ಮೊದಲ ಸೆಟಲೈಟ್‌ ಲಾಂಚ್‌ ವೆಹಿಕಲ್‌ನ ಅಸೈನ್‌ಮೆಂಟ್‌ ನಿರ್ದೇಶಕರಾಗಿದ್ದರು. 1997ರಲ್ಲಿ ಕಲಾಂ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

ಇ.ಶ್ರೀಧರನ್‌ :

ಭಾರತದ ಮೆಟ್ರೋ ಮ್ಯಾನ್‌ ಎಂದೇ ಪರಿಚಿತರಾಗಿರುವ ಇ. ಶ್ರೀಧರನ್‌ ಅವರು, ಮೂಲತಃ ಸಿವಿಲ್‌ ಎಂಜಿನಿಯರ್‌. ಭಾರತದ ಸಾರಿಗೆ ವ್ಯವಸ್ಥೆಯನ್ನು ಆಧುನೀಕರಣ ಮಾಡಿದ ಕೀರ್ತಿಯೂ ಇವರಿಗೇ ಸಲ್ಲುತ್ತದೆ. ಇವರನ್ನು ಮೆಟ್ರೋ ಮ್ಯಾನ್‌ ಎಂದು ಕರೆಯುವ ಮುನ್ನ, ಅವರು ಕೊಂಕಣ್‌ ರೈಲ್ವೇಗೆ ನೀಡಿದ ಕೊಡುಗೆಯನ್ನು ಸ್ಮರಿಸಿಕೊಳ್ಳಲೇಬೇಕು. ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ಸಂಪರ್ಕಿಸುವ ಈ ಕೊಂಕಣ ರೈಲ್ವೇ ಯೋಜನೆಯನ್ನು 8 ವರ್ಷಗಳಲ್ಲೇ ಮುಗಿಸಿದರು. 760 ಕಿ.ಮೀ., 59 ಸ್ಟೇಶನ್‌, 92 ಸುರಂಗ, 2,328 ಸೇತುವೆಗಳನ್ನು ಇಲ್ಲಿ ನಿರ್ಮಿಸಲಾಗಿದೆ. ಹಾಗೆಯೇ ದಿಲ್ಲಿ ಮೆಟ್ರೋ ನಿಗಮಕ್ಕೆ 1995ರಿಂದ 2002ರ ವರೆಗೆ ಅಧ್ಯಕ್ಷರಾಗಿದ್ದರು. ಇವರಿಗೆ 2008ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಸತೀಶ್‌ ಧವನ್‌ :

ಭಾರತದ ಎಕ್ಸ್‌ಪರಿಮೆಂಟಲ್‌ ಫ‌ೂÉéಡ್‌ ಡೈನಾಮಿಕ್ಸ್‌ ರಿಸರ್ಚ್‌ನ ಜನಕ ಎಂದೇ ಖ್ಯಾತರಾಗಿರುವ ಸತೀಶ್‌ ಧವನ್‌ ಅವರು, ದೇಶ ಕಂಡ ಅತ್ಯಂತ ಶ್ರೇಷ್ಠ ವಿಜ್ಞಾನಿ. ಇವರು ಏರೋಸ್ಪೇಸ್‌ ಎಂಜಿನಿಯರ್‌ ಮತ್ತು ಗಣಿತಜ್ಞ. ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ತಮ್ಮದೇ ಆದ ಕೊಡುಗೆ ನೀಡಿರುವ ಇವರು, ಇಸ್ರೋದ ಮೂರನೇ ಅಧ್ಯಕ್ಷರಾಗಿದ್ದರು.

ಸ್ಯಾಮ್‌ ಪಿತ್ರೋಡಾ : ಭಾರತದ ಟೆಲಿಕಾಂ ವಲಯದಲ್ಲಿ ಆಮೂಲಾಗ್ರ ಕೊಡುಗೆ ನೀಡಿರುವ ಸ್ಯಾಮ್‌ ಪಿತ್ರೋಡಾ ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ರಾಜೀವ್‌ ಗಾಂಧಿ ಅವರು ಪ್ರಧಾನಿಯಾಗಿದ್ದ ಕಾಲದಲ್ಲಿ ಟೆಲಿಕಾಂ ವಲಯದಲ್ಲಿ ಕ್ರಾಂತಿಯನ್ನೇ ತಂದರು. ದೇಶದಲ್ಲಿ ಕಂಪ್ಯೂಟರೀಕರಣವನ್ನು ತಂದವರು ಇವರೇ. ಇವರನ್ನು ಭಾರತದ ಕಂಪ್ಯೂಟರ್‌ ಮತ್ತು ಐಟಿ ಕ್ರಾಂತಿಯ ಜನಕ ಎಂದೂ ಕರೆಯಲಾಗುತ್ತದೆ.

ಥಾಮಸ್‌ ಕೈಲತ್‌ :

ನಿಯಂತ್ರಣ ವ್ಯವಸ್ಥೆ ವಲಯದಲ್ಲಿ ದೊಡ್ಡ ಸಾಧನೆಯನ್ನೇ ಮಾಡಿರುವ ಕೈಲತ್‌ ಅವರು, ಮೂಲತಃ ಎಲೆಕ್ಟ್ರಿಕಲ್‌ ಎಂಜಿನಿಯರ್‌, ಇನ್‌ಫಾರ್ಮೇಶನ್‌ ಥಿಯರಿಸ್ಟ್‌, ಕಂಟ್ರೋಲ್‌ ಎಂಜಿನಿಯರ್‌ ಮತ್ತು ಉದ್ಯಮಿಯಾಗಿದ್ದಾರೆ. ಇವರನ್ನು ಕಂಟ್ರೋಲ್‌ ಸಿಸ್ಟಮ್‌ನ ಸಾಧಕ ಎಂದೇ ಕರೆಯಲಾಗುತ್ತದೆ. ಲಿನಿಯರ್‌ ಸಿಸ್ಟಮ್‌ನಲ್ಲೂ ಇವರು ಅಗಾಧ ಸಾಧನೆ ಮಾಡಿದ್ದಾರೆ. 2009ರಲ್ಲಿ ಭಾರತ ಸರಕಾರ‌ ಇವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

ಚೇವಾಂಗ್‌ ನೋರ್ಪೇಲ್‌ :

ಲಡಾಖ್‌ ಜನರಿಗೆ ಕುಡಿಯುವ ನೀರು ಒದಗಿಸಿದ ಸಾಧಕ ಎಂದೇ ಖ್ಯಾತರಾಗಿರುವ ಇವರು, ಇದಕ್ಕಾಗಿ 15 ಕೃತಕ ಗ್ಲೈಸಿಯರ್‌ಗಳನ್ನು ಸೃಷ್ಟಿಸಿದ್ದಾರೆ. ಇದರಿಂದಾಗಿ ಸ್ಥಳೀಯ ಜನರಿಗೆ ಭಾರೀ ಸಹಾಯವಾಗಿದ್ದು, ನಗರಗಳಿಗೆ ವಲಸೆ ಹೋಗುತ್ತಿದ್ದ ಹಳ್ಳಿ ಜನರನ್ನು ಅಲ್ಲೇ ಉಳಿಯುವಂತೆ ಮಾಡಿದ್ದಾರೆ. ಇತ್ತೀಚೆಗಷ್ಟೇ ಇವರನ್ನು ಭಾರತದ ಐಸ್‌ ಮ್ಯಾನ್‌ ಎಂದು ಕರೆಯಲಾಗಿತ್ತು.

ವಿನೋದ್‌ ಧಾಮ್‌ :

ಇಂಟೆಲ್‌ ಕಂಪೆನಿಯ ಪೆಂಟಿಯಮ್‌ ಚಿಪ್‌ಗಳ ಜನಕ ಎಂದೇ ವಿನೋದ್‌ ಧಾಮ್‌ ಖ್ಯಾತರಾಗಿದ್ದಾರೆ. ಮೂಲತಃ ಎಂಜಿನಿಯರ್‌ ಆಗಿರುವ ಇವರು, ವೆಂಚರ್‌ ಕ್ಯಾಪಿಟಲಿಸ್ಟ್‌ ಮತ್ತು ಉದ್ಯಮಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಸ್ವಾತಿ ಮೋಹನ್‌ :

ಅಮೆರಿಕದ ನಾಸಾದ ಮಂಗಳ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಬೆಂಗಳೂರು ಮೂಲದ ಸ್ವಾತಿ ಮೋಹನ್‌ ಅವರು ಮೂಲತಃ ಏರೋಸ್ಪೇಸ್‌ ಎಂಜಿನಿಯರ್‌. ಕ್ಯಾಲಿಫೋರ್ನಿಯಾದಲ್ಲಿರುವ ಪೆಸೆಡೇನಾದಲ್ಲಿ ನಾಸಾದ ಜೆಟ್‌ ಪ್ರೋಪಲ್ಶನ್‌ ಲ್ಯಾಬೋರೇಟರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ಮಂಗಳಯಾನ ಯೋಜನೆಯ ಗೈಡೆನ್ಸ್‌ ಆ್ಯಂಡ್‌ ಕಂಟ್ರೋಲ್‌ ಆಪರೇಶನ್‌ ಲೀಡ್‌ ಆಗಿದ್ದಾರೆ.

ಶಕುಂತಲಾ ಎ. ಭಗತ್‌ :

ದೇಶದ ಮೊದಲ ಮಹಿಳಾ ಸಿವಿಲ್‌ ಎಂಜಿನಿಯರ್‌ ಎಂದೇ ಖ್ಯಾತರಾಗಿರುವ ಶಕುಂತಲಾ ಎ. ಭಗತ್‌ ಅವರು ದೇಶದಲ್ಲಿ ಒಟ್ಟು 69 ಸೇತುವೆಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಷ್ಟೇ ಅಲ್ಲ, ಪರೋಕ್ಷವಾಗಿ 200ಕ್ಕೂ ಹೆಚ್ಚು ಸೇತುವೆಗಳ ನಿರ್ಮಾಣದಲ್ಲಿ ಸಹಾಯ ಮಾಡಿದ್ದಾರೆ.

ಶಿವಾನಿ ಮೀನಾ  :

ದೇಶದ ಮೊದಲ ಉತ್ಖನನ ಎಂಜಿನಿಯರ್‌ ಎಂದು ಖ್ಯಾತರಾಗಿರುವ ಶಿವಾನಿ ಮೀನಾ ಕೋಲ್‌ ಇಂಡಿಯಾ ಮತ್ತು ಸಿಸಿಎಲ್‌ನಲ್ಲಿ  ಕೆಲಸ ಮಾಡುತ್ತಿದ್ದಾರೆ. ಪುರುಷರಿಗಷ್ಟೇ ಸೀಮಿತ ಎಂದೆನಿಸಿದ್ದ ಉತ್ಖನನ ಕ್ಷೇತ್ರಕ್ಕೆ ಕಾಲಿಟ್ಟಿದ್ದು  ಇವರ ಹೆಗ್ಗಳಿಕೆ.

Advertisement

Udayavani is now on Telegram. Click here to join our channel and stay updated with the latest news.

Next