Advertisement

ಈ ವರ್ಷ ಬಾಗಿಲು ಮುಚ್ಚಲಿವೆ 63 ಎಂಜಿನಿಯರಿಂಗ್‌ ಶಿಕ್ಷಣ ಸಂಸ್ಥೆಗಳು! 

09:50 AM Jul 30, 2021 | Team Udayavani |

ಎಂಜಿನಿಯರಿಂಗ್‌ ಶಿಕ್ಷಣಕ್ಕೆ ಕಳೆದ ಕೆಲವು ವರ್ಷಗಳಿಂದ ಬೇಡಿಕೆ ಗಮನಾರ್ಹವಾಗಿ ಕುಸಿದಿರುವುದರಿಂದ 2015- 16ರಿಂದೀಚೆಗೆ ದೇಶಾದ್ಯಂತ ಹಲವಾರು ಎಂಜಿನಿಯರಿಂಗ್‌ ಕಾಲೇಜುಗಳು ಮುಚ್ಚಲ್ಪಟ್ಟಿವೆ. ದೇಶದ ಎಂಜಿನಿಯರಿಂಗ್‌ ಸಂಸ್ಥೆಗಳಲ್ಲಿ ಲಭ್ಯವಿರುವ ಒಟ್ಟು ಸೀಟ್‌ಗಳ ಸಂಖ್ಯೆ ಕಳೆದ 10 ವರ್ಷಗಳಲ್ಲಿ ಗಣನೀಯ ಇಳಿಕೆ ಕಂಡಿದೆ.

Advertisement

444 ಎಂಜಿನಿಯರಿಂಗ್‌ ಕಾಲೇಜುಗಳಿಗೆ ಬೀಗ! :

2011- 12ರಿಂದ 2021- 22ರ ವರೆಗೆ ಒಟ್ಟು 444 ಎಂಜಿನಿಯರಿಂಗ್‌ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲು ಅನುಮತಿ ಕೋರಿ ಅಖೀಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ)ಗೆ ಅರ್ಜಿ ಸಲ್ಲಿಕೆಯಾಗಿದ್ದರೆ ಇದೇ ಅವಧಿಯಲ್ಲಿ ಹೊಸದಾಗಿ 1,228 ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಅನುಮತಿ ಕೇಳಿ ಅರ್ಜಿ ಸಲ್ಲಿಸಲಾಗಿದೆ. 2021- 22ರ ಸಾಲಿನಲ್ಲಿ 63 ಎಂಜಿನಿಯರಿಂಗ್‌ ಶಿಕ್ಷಣ ಸಂಸ್ಥೆಗಳು ಮುಚ್ಚಲಿದ್ದರೆ 54 ಸಂಸ್ಥೆಗಳನ್ನು ತೆರೆಯಲು ಎಐಸಿಟಿಇ ಅನುಮತಿ ನೀಡಿದೆ.

ಸೀಟ್‌ಗಳ ಲಭ್ಯತೆಯಲ್ಲಿ ಇಳಿಕೆ! :

ಎಐಸಿಟಿಇ ಯ ಇತ್ತೀಚಿನ ಮಾಹಿತಿ ಪ್ರಕಾರ ಸ್ನಾತಕ, ಸ್ನಾತಕೋತ್ತರ ಮತ್ತು ಡಿಪ್ಲೊಮಾ ಹಂತಗಳಲ್ಲಿ ಎಂಜಿನಿಯರಿಂಗ್‌ ಸೀಟ್‌ಗಳು 23.28 ಲಕ್ಷಕ್ಕೆ ಇಳಿದಿದ್ದು,  ಇದು 10 ವರ್ಷಗಳಲ್ಲಿ ಅತ್ಯಂತ ಕಡಿಮೆಯಾಗಿವೆ. ಸಂಸ್ಥೆಗಳು ಮುಚ್ಚಿದ್ದರಿಂದ ಮತ್ತು ಸಂಸ್ಥೆಗಳ ಪ್ರವೇಶ ಸಾಮರ್ಥ್ಯ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ  ಪ್ರಸಕ್ತ ಸಾಲಿನಲ್ಲಿ ಎಂಜಿನಿಯರಿಂಗ್‌ ಸೀಟ್‌ಗಳು 1.46 ಲಕ್ಷದಷ್ಟು ಇಳಿಕೆಯಾಗಿದೆ.

Advertisement

2014- 15ರಲ್ಲಿ ಎಐಸಿಟಿಇ ಅನುಮೋದಿತ ಸಂಸ್ಥೆಗಳು ಸುಮಾರು 32 ಲಕ್ಷ ಎಂಜಿನಿಯರಿಂಗ್‌ ಸೀಟ್‌ಗಳನ್ನು ಹೊಂದಿದ್ದವು. ಆದರೆ ಕಳೆದ ಏಳು ವರ್ಷಗಳಿಂದೀಚೆಗೆ ಎಂಜಿನಿಯರಿಂಗ್‌ ಸೀಟ್‌ಗಳಿಗೆ ಬೇಡಿಕೆ ಕುಸಿಯಲಾರಂಭಿಸಿದ್ದರಿಂದ ಸೀಟ್‌ಗಳ ಸಂಖ್ಯೆ ಇಳಿಮುಖವಾಗಿದ್ದೇ ಅಲ್ಲದೆ ಕೆಲವಷ್ಟು  ಕಾಲೇಜುಗಳು ಮುಚ್ಚುವಂತಾಯಿತು. ಅಲ್ಲಿಂದೀಚೆಗೆ ಸರಿಸುಮಾರು 400 ಎಂಜಿನಿಯರಿಂಗ್‌ ಕಾಲೇಜುಗಳು ಬಾಗಿಲು ಮುಚ್ಚಿವೆ. ಕೋವಿಡ್‌ ಹಿನ್ನೆಲೆಯಲ್ಲಿ ಕಳೆದ ಶೈಕ್ಷಣಿಕ ವರ್ಷವನ್ನು ಹೊರತುಪಡಿಸಿದಂತೆ 2015-16ರಿಂದೀಚೆಗೆ ಪ್ರತೀ ವರ್ಷ ಕನಿಷ್ಠ 50 ಎಂಜಿನಿಯರಿಂಗ್‌ ಸಂಸ್ಥೆಗಳು ಮುಚ್ಚಲ್ಪಟ್ಟಿವೆ.

ಹೊಸ ಸಂಸ್ಥೆಗಳ ಸ್ಥಾಪನೆಯಲ್ಲೂ ಹಿನ್ನಡೆ :

ಕಳೆದ ಐದು ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಹೊಸ ಎಂಜಿನಿಯರಿಂಗ್‌ ಸಂಸ್ಥೆಗಳು ಸ್ಥಾಪನೆಯಾಗಿವೆ. 2014- 15ರಲ್ಲಿ ಎಐಸಿಟಿಇ ಅನುಮೋದಿತ ಸಂಸ್ಥೆಗಳು ಸುಮಾರು 32 ಲಕ್ಷ ಎಂಜಿನಿಯರಿಂಗ್‌ ಸೀಟ್‌ಗಳನ್ನು ಹೊಂದಿದ್ದವು. ಆದರೆ ಗುಣಮಟ್ಟ ಕುಸಿತದ ಕಾರಣ ಎಂಜಿನಿಯರಿಂಗ್‌ ಕೋರ್ಸ್‌ಗಳಿಗೆ ಬೇಡಿಕೆ ಕಡಿಮೆಯಾದ ಪರಿಣಾಮ ಎಐಸಿಟಿಇ ಸೀಟ್‌ಗಳನ್ನು ಕಡಿತಗೊಳಿಸುತ್ತಾ ಬಂದಿತು.  ಐಐಟಿ- ಹೈದರಾಬಾದ್‌ ಅಧ್ಯಕ್ಷ ಬಿ.ವಿ.ಆರ್‌. ಮೋಹನ್‌ ರೆಡ್ಡಿ ನೇತೃತ್ವದ ಸರಕಾರಿ ಸಮಿತಿಯ ಶಿಫಾರಸಿನ ಮೇರೆಗೆ ಎಐಸಿಟಿಇ ಯು ಎರಡು ವರ್ಷಗಳ ಅವಧಿಗೆ ಹೊಸ ಎಂಜಿನಿಯರಿಂಗ್‌ ಕಾಲೇಜುಗಳ ಆರಂಭಕ್ಕೆ ನಿರ್ಬಂಧ ಹೇರಿ 2019ರಲ್ಲಿ ಆದೇಶ ಹೊರಡಿಸಿತ್ತು. ಆದರೆ ಇದರ ಹೊರತಾಗಿಯೂ ಎಐಸಿಟಿಇ  2021-22ನೇ ಸಾಲಿನಲ್ಲಿ ಹೊಸದಾಗಿ 54 ಎಂಜಿನಿಯರಿಂಗ್‌ ಕಾಲೇಜುಗಳ ಸ್ಥಾಪನೆಗೆ ಅನುಮೋದನೆ ನೀಡಿದೆ. ಈ ಕಾಲೇಜುಗಳು ಹಿಂದುಳಿದ ಜಿಲ್ಲೆಗಳಲ್ಲಿ ಸ್ಥಾಪನೆಗೊಳ್ಳಲಿವೆ ಮಾತ್ರವಲ್ಲದೆ ಈ ಕಾಲೇಜುಗಳನ್ನು ತೆರೆಯಲು ರಾಜ್ಯ ಸರಕಾರಗಳೇ ಆಸಕ್ತಿ ತೋರಿವೆ ಎಂದು ಎಐಸಿಟಿಇ ಮೂಲಗಳು ತಿಳಿಸಿವೆ. ನಿರ್ಬಂಧ ಹೇರುವುದಕ್ಕೂ ಮುನ್ನ ಅಂದರೆ 2017- 18, 2018-19 ಮತ್ತು 2019- 20ರಲ್ಲಿ  ಕ್ರಮವಾಗಿ 143, 158 ಮತ್ತು 153 ಹೊಸ ಸಂಸ್ಥೆಗಳಿಗೆ ಅನುಮೋದನೆ ನೀಡಲಾಗಿತ್ತು.  2016-17ರಲ್ಲಿ 3,291 ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಲಭ್ಯವಿದ್ದ 15.5 ಲಕ್ಷ ಸ್ನಾತಕ ಸೀಟ್‌ಗಳಲ್ಲಿ ಶೇ. 51ರಷ್ಟಕ್ಕೂ ಬೇಡಿಕೆ ಇರಲಿಲ್ಲ.

ಎಂಜಿನಿಯರಿಂಗ್‌ ಶಿಕ್ಷಣ ಸಂಸ್ಥೆ :

ವರ್ಷ  ಹೊಸದಾಗಿ ಪ್ರಾರಂಭ ಮುಚ್ಚಿರುವುದು

2011- 12          314      1

2012- 13          165      9

2013-14           56        20

2014-15           51       18

2015-16           40       53

2016-17           32       70

2017-18           143      73

2018-19           158      58

2019-20           153     53

2020-21           62        26

2021-22           54        63

 

Advertisement

Udayavani is now on Telegram. Click here to join our channel and stay updated with the latest news.

Next