Advertisement

ಕನ್ನಡದಲ್ಲೇ ಎಂಜಿನಿಯರಿಂಗ್‌ ಕೋರ್ಸ್‌!

12:41 AM May 28, 2021 | Team Udayavani |

ಹೊಸದಿಲ್ಲಿ/ಬೆಂಗಳೂರು: ಕನ್ನಡ ಸಹಿತ 7 ಪ್ರಾದೇಶಿಕ ಭಾಷೆಗಳಲ್ಲೂ ಎಂಜಿನಿಯರಿಂಗ್‌ ಶಿಕ್ಷಣ ನೀಡಲು ದೇಶದ ಕಾಲೇಜುಗಳಿಗೆ ಅಖೀಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಅನುಮತಿ ನೀಡಿದೆ. 2020-21ನೇ ಶೈಕ್ಷಣಿಕ ವರ್ಷದಿಂದಲೇ ಕನ್ನಡ, ಹಿಂದಿ, ಬಂಗಾಲಿ, ತೆಲುಗು, ತಮಿಳು, ಗುಜರಾತಿ, ಮಲಯಾಂಳಗಳಲ್ಲೂ  ಕೋರ್ಸ್‌ ಮಾಡಲು ಅವಕಾಶವಿರುತ್ತದೆ.

Advertisement

ವಿಟಿಯು ಸಿದ್ಧತೆ :

ಎಐಸಿಟಿಇಯು ಅನುಮತಿ ನೀಡಿರುವ ಹಿನ್ನೆಲೆ ಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ವು ಕನ್ನಡದಲ್ಲಿ ಎಂಜಿನಿಯರಿಂಗ್‌ ಬೋಧನೆಗೆ ಪಠ್ಯಕ್ರಮ ಸಿದ್ಧಪಡಿಸುತ್ತಿದೆ. ಇದಕ್ಕಾಗಿ ವಿಷಯ ತಜ್ಞರ ಸಮಿತಿ ರಚನೆ ಮಾಡಿದೆ. ಅತೀ ಶೀಘ್ರದಲ್ಲಿ ಕನ್ನಡ ಪಠ್ಯ ಸಿದ್ಧವಾಗಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಗ್ರಾಮೀಣ ಮಕ್ಕಳಿಗೆ ಅನುಕೂಲ :

ತಾಂತ್ರಿಕ ಕೋರ್ಸ್‌ಗಳು ಕನ್ನಡದಲ್ಲಿ ಲಭ್ಯವಾದರೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಆದರೆ ಇದನ್ನು ಕಡ್ಡಾಯ ಮಾಡಲು ಸಾಧ್ಯವಿಲ್ಲ. ತಾಂತ್ರಿಕ ಪದವಿ ಕನ್ನಡದಲ್ಲಿ ಪಡೆದರೂ ಪ್ರಾದೇಶಿಕ ಭಾಷೆಯ ಪಠ್ಯದ ಜತೆಗೆ ಜಾಗತಿಕವಾಗಿ ಅಗತ್ಯವಿರುವ ಭಾಷೆಯಲ್ಲೂ ಅಧ್ಯಯನ, ವಿಷಯ ಜ್ಞಾನ ಹೊಂದಿರುವುದು ಅತೀ ಮುಖ್ಯ ಎಂದು ತಾಂತ್ರಿಕ ವಿಷಯ ತಜ್ಞರೊಬ್ಬರು ಮಾಹಿತಿ ನೀಡಿದ್ದಾರೆ.

Advertisement

ತಾಂತ್ರಿಕ ನಿಘಂಟು :

ಕೆಲವು ತಾಂತ್ರಿಕ ಪದಗಳ ತರ್ಜುಮೆ ಕಷ್ಟ. ಸ್ವಲ್ಪ ಅರ್ಥ ವ್ಯತ್ಯಾಸವಾದರೂ ಕಲಿಕೆಗೆ ಪೂರ್ಣತೆ ಸಿಗುವುದಿಲ್ಲ. ಹೀಗಾಗಿ ಇಂಗ್ಲಿಷ್‌- ಕನ್ನಡ ತಾಂತ್ರಿಕ ನಿಘಂಟನ್ನು ತಯಾರಿಸುತ್ತಿದ್ದೇವೆ. ನಿರ್ದಿಷ್ಟ ನಿಘಂಟಿನ ಆಧಾರದಲ್ಲಿ ಪದ ಬಳಕೆ ಮಾಡಲಾಗುತ್ತದೆ. ತಾಂತ್ರಿಕ ವಿಷಯಗಳ ಕನ್ನಡ ತರ್ಜುಮೆಗೂ ಇದು ಸಹಕಾರಿ ಆಗಲಿದೆ ಎಂದು ವಿಟಿಯು ಕುಲಸಚಿವ ಡಾ| ಎ.ಎಸ್‌. ದೇಶಪಾಂಡೆ ಮಾಹಿತಿ ನೀಡಿದ್ದಾರೆ.

ಭಾಷಾಂತರಕ್ಕೆ ಸಾಫ್ಟ್ವೇರ್‌ :

ಎಐಸಿಟಿಇ ದೇಶೀಯವಾಗಿ ಅಭಿವೃದ್ಧಿಪಡಿ ಸಿರುವ ಸಾಫ್ಟ್ವೇರ್‌ ಮೂಲಕ ಎಂಜಿನಿಯರಿಂಗ್‌ ಪಠ್ಯಕ್ರಮ ತರ್ಜುಮೆ ಮಾಡಲಾಗುತ್ತದೆ. ಸಾಫ್ಟ್ವೇರ್‌ನಲ್ಲಿ ಎಂಜಿನಿಯರಿಂಗ್‌ಗೆ

ಸಂಬಂಧಿಸಿದ 10 ಸಾವಿರ ಪದಗಳ ನಿಘಂಟು ಇದೆ ಎಂದು ಎಐಸಿಟಿಇ ಮುಖ್ಯಸ್ಥ ಅನಿಲ್‌ ಸಹಸ್ರಬುದ್ಧೆ ಹೇಳಿದ್ದಾರೆ. ಭಾಷಾಂತರದಲ್ಲಿ ಲೋಪ ಇದ್ದರೆ ಬೋಧಕರು ಸರಿಪಡಿಸು ತ್ತಾರೆ. ತಾಂತ್ರಿಕ ಪದ, ಫಾರ್ಮುಲಾ ಭಾಷಾಂತರ ಮಾಡಲಾಗುವುದಿಲ್ಲ ಎಂದಿದ್ದಾರೆ.

ಕನ್ನಡದಲ್ಲಿ  ತಾಂತ್ರಿಕ ಕೋರ್ಸ್‌ ನೀಡಲು ಬೇಕಾದ ಪಠ್ಯಕ್ರಮ, ತಾಂತ್ರಿಕ ನಿಘಂಟು ಸಿದ್ಧಪಡಿಸುವುದು ಸೇರಿದಂತೆ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದೇವೆ.ಡಾ| ಎ.ಎಸ್‌. ದೇಶಪಾಂಡೆ, ಕುಲಸಚಿವ, ವಿಟಿಯು

Advertisement

Udayavani is now on Telegram. Click here to join our channel and stay updated with the latest news.

Next