ಚಿಕ್ಕಬಳ್ಳಾಪುರ: ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಎಂಜನಿಯರಿಂಗ್ ಕಾಲೇಜು ಆರಂಭಗೊಳ್ಳುವ ಎಲ್ಲಾ ಸಾಧ್ಯತೆಗಳು ಕೂಡ ದಟ್ಟವಾಗಿದ್ದು, ಸ್ವಂತ ಕಟ್ಟಡ ಇಲ್ಲದಿದ್ದರೂ ಪರ್ಯಾಯ ಕಟ್ಟಡಕ್ಕಾಗಿ ಹುಡುಕಾಟ ನಡೆಯುತ್ತಿದೆ.
ಹೌದು, ರಾಜ್ಯದ ಉನ್ನತ ಶಿಕ್ಷಣ ಸಚಿವರಾಗಿರುವ ಜಿಲ್ಲೆಯ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಜಿಲ್ಲೆಗೆ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮಂಜೂರು ಮಾಡಿಸುವ ಭರವಸೆ ನೀಡಿದ್ದು, ಮುಂದಿನ ಬಜೆಟ್‌ನಲ್ಲಿ ಜಿಲ್ಲೆಗೆ ಅಧಿಕೃತವಾಗಿ ಸರ್ಕಾರಿ ಎಂಜಿಯನಿಯರಿಂಗ್ ಕಾಲೇಜ್ ಘೋಷಣೆ ಆಗಲಿದೆ. ಈ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ.ಕೆ. ಸುಧಾಕರ್, ಜಿಲ್ಲೆಯ ದಶಕಗಳ ಬೇಡಿಕೆ ಆಗಿದ್ದ ಸರ್ಕಾರಿ ಮೆಡಿಕಲ್ ಕಾಲೇಜ್‌ನ್ನು ಬರೊಬ್ಬರಿ 810 ಕೋಟಿ ರೂ. ವೆಚ್ಚದಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 44ರ ಆರೂರು ಬಳಿ 64 ಎಕರೆ ಜಾಗದಲ್ಲಿ ನಿರ್ಮಿಸಿದ್ದು, ಈಗಾಗಲೇ ಆಸ್ಪತ್ರೆ ಹೊರತುಪಡಿಸಿ ಮೆಡಿಕಲ್ ಕಾಲೇಜ್ ಆರಂಭಗೊಂಡಿದೆ. ಯಾವ ಖಾಸಗಿ ಮೆಡಿಕಲ್ ಕಾಲೇಜ್‌ಗೂ ಕಡಿಮೆ ಇಲ್ಲದಂತೆ ಸರ್ಕಾರಿ ಮೆಡಿಕಲ್ ಕಾಲೇಜ್‌ವನ್ನು ಭವ್ಯವಾಗಿ ಆಕರ್ಷಕ ವಿನ್ಯಾಸದೊಂದಿಗೆ ನಿರ್ಮಿಸಲಾಗಿದೆ.
ಇದೀಗ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಡಾ.ಎಂ.ಸಿ.ಸುಧಾಕರ್ ಜಿಲ್ಲೆಗೆ ಅವಶ್ಯಕವಾಗಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್‌ನ್ನು ತಮ್ಮ ಸ್ವ ಕ್ಷೇತ್ರ ಚಿಂತಾಮಣಿಯಲ್ಲಿ ಸ್ಥಾಪಿಸುವ ನಿಟ್ಟಿನಲ್ಲಿ ವಿಶೇಷ ಆಸಕ್ತಿ ವಹಿಸಿದ್ದು, ಕಾಲೇಜು ಸ್ಥಾಪನೆಗೆ ಬೇಕಾದ ಎಲ್ಲಾ ಪೂರ್ವ ತಯಾರಿ ಭರದಿಂದ ನಡೆಸಿದ್ದಾರೆ. ಜಿಲ್ಲೆಯು ಕೃಷಿ ಪ್ರಧಾನವಾದ ಜಿಲ್ಲೆಯಾಗಿದ್ದು ಉನ್ನತ ಶಿಕ್ಷಣ ಕೊಡುವ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಕೊರತೆ ಇತ್ತು. ಇದೀಗ ಮೆಡಿಕಲ್ ಕಾಲೇಜ್ ಸ್ವಂತ ಕಟ್ಟಡದಲ್ಲಿ ಕಾರ್ಯಾರಂಭಗೊಂಡ ಬೆನ್ನಲೇ ಮುಂದಿನ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್ ಆರಂಭಕ್ಕೂ ಸಚಿವ ಡಾ.ಎಂ.ಸಿ.ಸುಧಾಕರ್ ಮುಂದಾಗಿದ್ದಾರೆ.
ಕಾಲೇಜಿಗೆ 9.38 ಎಕರೆ ಜಮೀನು ಮಂಜೂರು : ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ಅಗತ್ಯವಾದ ಬರೋಬ್ಬರಿ 9.38 ಎಕರೆ ಸರ್ಕಾರಿ ಜಮೀನನ್ನು ಈಗಾಗಲೇ ಜಿಲ್ಲಾಡಳಿತ ಗುರುತಿಸಿ ಮಂಜೂರು ಮಾಡಿದೆ. ಚಿಂತಾಮಣಿ ನಗರದ ಬೆಂಗಳೂರು ರಸ್ತೆಯ ಯಾದವರ ಹಾಸ್ಟೇಲ್ ಪಕ್ಕದ ಸಮೀಪ ಅಗತ್ಯವಾಗಿರುವ 9.38 ಎಕರೆ ಜಮೀನನ್ನು ಎಂಜಿನಿಯರಿಂಗ್ ಕಾಲೇಜಿನ ಹೆಸರಿಗೆ ಮಂಜೂರು ಮಾಡಿಸಲಾಗಿದೆ.
ಉನ್ನತ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದೇನು? : ಮುಂದಿನ ಶೈಕ್ಷಣಿಕ ವರ್ಷದಿಂದಲೇ ಚಿಂತಾಮಣಿ ಯಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಆರಂಭಿಸಬೇಕೆಂಬ ಚಿಂತನೆ ಇದೆ. ಈಗಾಗಲೇ ಕಾಲೇಜಿಗೆ ಅವಶ್ಯಕವಾದ ಜಮೀನು ಕೂಡ ಜಿಲ್ಲಾ ಡಳಿತ ಕಾಲೇಜಿನ ಹೆಸರಿಗೆ ಮಂಜೂರು ಮಾಡಿದೆ. ಸ್ವಂತ ಕಟ್ಟಡ ನಿರ್ಮಾಣ ಆಗುವವರೆಗೂ ಪರ್ಯಾಯವಾದ ಕಟ್ಟಡದಲ್ಲಿ ಕಾಲೇಜು ಆರಂಭಿಸುತ್ತೇವೆ. ಕಾಲೇಜಿಗೆ ಇನ್ನೂ ಅನುಮತಿ ಸಹ ಪಡೆಯಬೇಕಿದೆಂದು ಜಿಲ್ಲೆಯ ಉಸ್ತುವಾರಿ ಸಚಿವರು ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿದರು.
ತಾತ್ಕಾಲಿಕವಾಗಿ ಪಾಲಿಟೆಕ್ನಿಕ್ ಕಾಲೇಜು ಬಳಕೆ : ಸರಿ ಸುಮಾರು 75 ವರ್ಷಗಳ ಹಿಂದೆಯೆ ಚಿಂತಾಮಣಿ ನಗರದಲ್ಲಿ ಸ್ಥಾಪಿಸಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ಹೊಸ ಕಟ್ಟಡ ನಿರ್ಮಾಣ ಆಗುವವರೆಗೂ ಸರ್ಕಾರಿ ಎಂಜಿಯರಿಂಗ್ ಕಾಲೇಜಿನ ತರಗತಿಗಳನ್ನು ಆರಂಭಿಸುವ ಚಿಂತನೆ ಮಾಡಲಾಗಿದೆ.
– ಕಾಗತಿ ನಾಗರಾಜಪ್ಪ