ಬೆಂಗಳೂರು : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ವ್ಯಾಪ್ತಿಯ ಎಂಜಿನಿಯರಿಂಗ್ ಕಾಲೇಜಿನಲ್ಲಿ 2015ರಿಂದ 2017ರ ಅವಧಿಯಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೂ ಕ್ಯಾರಿ ಓವರ್ ಪದ್ಧತಿ ಮುಂದುವರಿಸಲು ವಿಟಿಯು ನಿರ್ಧರಿಸಿದೆ.
ಚಾಯ್ಸ ಬೇಸ್ಡ್ ಕ್ರೆಡಿಟ್ ಸಿಸ್ಟಂ(ಸಿಬಿಸಿಎಸ್) ಜಾರಿಯಾಗಿರುವುದರಿಂದ ಕ್ಯಾರಿ ಓವರ್ ಪದ್ಧತಿ ರದ್ದು ಮಾಡಲು ವಿಟಿಯು ಮುಂದಾಗಿತ್ತು. ವಿದ್ಯಾರ್ಥಿಗಳು ಇದನ್ನು ಖಂಡಿಸಿ ಪ್ರತಿಭಟನೆ ನಡೆಸಿರುವುದು ಮಾತ್ರವಲ್ಲದೇ ವಿವಿಯ ಆಡಳಿತ ಮಂಡಳಿಗೆ ಮತ್ತು ಉನ್ನತ ಶಿಕ್ಷಣ ಇಲಾಖೆಯ ಸಚಿವರಿಗೂ ದೂರು ನೀಡಿದ್ದರು.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ವಿವಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಟಿಯು ಕಾರ್ಯನಿರ್ವಾಹಕ ಸದಸ್ಯರ ಸಭೆ ಕರೆದು, ಕ್ಯಾರಿ ಓವರ್ ವಿಚಾರ ಮಂಡಿಸಿ, ಒಪ್ಪಿಗೆ ಪಡೆದಿದೆ. ಈ ನಿರ್ಧಾರದಿಂದ ರಾಜ್ಯದ ವಿವಿಧ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ 7 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲ ಆಗಲಿದೆ.
2015ರ ಮೊದಲು ದಾಖಲಾತಿ ಪಡೆದ ವಿದ್ಯಾರ್ಥಿಗಳಿಗೆ ನಾಲ್ಕು ವಿಷಯದಲ್ಲಿ ಕ್ಯಾರಿ ಓವರ್ ನೀಡುತ್ತಿದ್ದರು. ಅಂದರೆ, ಎಂಜಿನಿಯರಿಂಗ್ ಪ್ರಥಮ ವರ್ಷದಲ್ಲಿ ನಾಲ್ಕು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದರೂ, ಮೂರನೇ ಸೆಮಿಸ್ಟರ್(2ನೇ ವರ್ಷ) ಸೇರಲು ಅವಕಾಶ ನೀಡುತ್ತಿದ್ದರು ಮತ್ತು ಅದೇ ಸೆಮಿಸ್ಟರ್‌ನಲ್ಲಿ ಮೊದಲ ಸೆಮಿಸ್ಟರ್‌ನ ನಾಲ್ಕು ವಿಷಯದ ಪರೀಕ್ಷೆ ಬರೆಯಲು ಅವಕಾಶ ನೀಡುತ್ತಿದ್ದರು. ಇದೇ ನೀತಿ ಎಲ್ಲ ಸೆಮಿಸ್ಟರ್‌ಗೂ ಅನ್ವಯ ಆಗುತಿತ್ತು.
2015ರಲ್ಲಿ ಸಿಬಿಎಸಿಎಸ್ ಪದ್ಧತಿ ಜಾರಿಗೆ ಬಂದ ನಂತರ ಕ್ಯಾರಿ ಓವರ್ ನೀಡದೇ ಇರಲು ವಿವಿ ಮುಂದಾಗಿತ್ತು. ಇದನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಈಗ ಕ್ಯಾರಿ ಓವರ್ ನೀಡಲು ನಿರ್ಧರಿಸಿದ್ದರಿಂದ ಮೊದಲ ಸೆಮಿಸ್ಟರ್‌ನಲ್ಲಿ ನಾಲ್ಕು ಅಥವಾ ಅದಕ್ಕಿಂತ ಕಡಿಮೆ ವಿಷಯದಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮೂರನೇ ಸೆಮಿಸ್ಟರ್ ಸೇರಿಕೊಳ್ಳಲು ಅವಕಾಶ ಇದೆ ಎಂದು ವಿಟಿಯು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.