Advertisement

ವಾಹನ ಅಪಘಾತಗಳಿಗೆ ಎಂಜಿನಿಯರ್‌ ಹೊಣೆ

06:00 AM Jul 01, 2018 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಾಮಗಾರಿ ವಿಳಂಬದಿಂದ ವಾಹನ ಅಪಘಾತಗಳು ಸಂಭವಿಸಿ ಮರಣ ಹೊಂದಿದರೆ ಹೆದ್ದಾರಿಗೆ ಸಂಬಂಧಪಟ್ಟ ಎಂಜಿನಿಯರ್‌ ಮೇಲೆ ಸಹಾಯಕ ಆಯುಕ್ತರು ಸ್ವಯಂಪ್ರೇರಿತರಾಗಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ. ಖಾದರ್‌ ಹೇಳಿದರು.

Advertisement

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರಾಷ್ಟ್ರೀಯ ಹೆದ್ದಾರಿ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜತೆ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಹೆದ್ದಾರಿಗಳ ಅಸಮರ್ಪಕ ಕಾಮಗಾರಿ ಮತ್ತು ನಿರ್ವಹಣೆಯಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಕೆಲ ಸಮಯದ ಹಿಂದೆ ಸಂಭವಿಸಿದ ಅಪಘಾತದಲ್ಲಿ ಕಾಮಗಾರಿ ಕೈಗೊಂಡ ನವಯುಗ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಎಂಜಿನಿಯರ್‌ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರಗತಿ ವರದಿ ನೀಡಿ
ಪಂಪ್‌ವೆಲ್‌-ತೊಕ್ಕೊಟ್ಟು ಫ್ಲೈಓವರ್‌ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ. ಈ ಹಿಂದೆ ನಡೆದ ಸಭೆಯಲ್ಲಿ ಡಿಸೆಂಬರ್‌ನಲ್ಲಿ ತೊಕ್ಕೊಟ್ಟು ಮತ್ತು ಮಾರ್ಚ್‌ ತಿಂಗಳಿನಲ್ಲಿ ಪಂಪ್‌ವೆಲ್‌ ಫ್ಲೈಓವರ್‌ ಕಾಮಗಾರಿ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಹೇಳಿದ್ದರು. ತಾತ್ಕಾಲಿಕವಾಗಿ ನಡೆಸಬೇಕಿದ್ದ ಕಾಮಗಾರಿ ನಡೆಸಲು ಕೂಡ ಅಧಿಕಾರಿಗಳು ವಿಫಲರಾಗಿದ್ದಾರೆ. ಪಂಪ್‌ವೆಲ್‌- ತೊಕ್ಕೊಟ್ಟು ಫೈಓವರ್‌ಗೆ ಸಂಬಂಧಿಸಿದಂತೆ ಯಾವ ಹಂತದಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ಅಧಿಕಾರಿಗಳು ಪ್ರತೀ ತಿಂಗಳು ದಾಖಲೆ ಸಮೇತ ಜಿಲ್ಲಾಧಿಕಾರಿಗಳಿಗೆ ವರದಿ ಒಪ್ಪಿಸಬೇಕು. ಪದೆಪದೇ ಕಾಮಗಾರಿ ವಿಳಂಬವಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಸಹಾಯಕ ಆಯುಕ್ತರು ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಿದ್ದಾರೆ ಎಂದರು.

ಪಂಪ್‌ವೆಲ್‌ ಮತ್ತು ತೊಕ್ಕೊಟ್ಟು ಪ್ರದೇಶದಲ್ಲಿ ಪ್ರತೀ ದಿನ ಟ್ರಾಫಿಕ್‌ ಜಾಮ್‌ ಆಗುತ್ತದೆ. ರಸ್ತೆ ಗುಂಡಿ ಬಿದ್ದಿದ್ದು, ಗುಂಡಿ ಮುಚ್ಚುವ ಕೆಲಸ ಸಮರ್ಪಕವಾಗಿ ಆಗಿಲ್ಲ. ಪಂಪ್‌ವೆಲ್‌ ಸರ್ವಿಸ್‌ ರಸ್ತೆ ಬಳಿ ನಡೆಯುತ್ತಿರುವ ಕಾಮಗಾರಿ ಪಕ್ಕದಲ್ಲಿ ಕೆರೆಯಂತೆ ನೀರು ತುಂಬಿದ್ದು ಅಪಾಯಕ್ಕೆ ಆಹ್ವಾನಿಸುತ್ತಿದೆ. ನಿಮ್ಮ ಮೇಲೆ ಪ್ರಕರಣ ದಾಖಲಿಸಿದರೆ ಮಾತ್ರ ನೀವು ಎಚ್ಚರವಾಗುತ್ತೀರಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಆರ್ಥಿಕ ಸಂಕಷ್ಟ
ಪಂಪ್‌ವೆಲ್‌ ಮತ್ತು ತೊಕ್ಕೊಟ್ಟು ಫ್ಲೈಓವರ್‌ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ. ಗುತ್ತಿಗೆ ನಿರ್ವಹಿಸಲು ಸಾಧ್ಯವಿಲ್ಲದಿದ್ದರೆ ನೇರವಾಗಿ ಹೇಳಿ ಎಂದು ಜಿಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಅವರು ನವಯುಗ ಸಂಸ್ಥೆಯ ಅಧಿಕಾರಿಗಳ ಬಳಿ ಸ್ಪಷ್ಟನೆ ಕೇಳಿ ದಾಗ ಉತ್ತರಿಸಿದ ಅಧಿಕಾರಿಗಳು, ಸಂಸ್ಥೆಯು ಹಣದ ಕೊರತೆ ಅನುಭವಿಸುತ್ತಿದೆ. ಬ್ಯಾಂಕ್‌ನಿಂದ ಸಾಲ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಸಾಲ ಮಂಜೂರಾದ ಕೂಡಲೇ ಕಾಮಗಾರಿ ನಡೆಸಲಾಗುವುದು ಎಂದರು.

Advertisement

ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಇಲ್ಲ
ಕಾಂಗ್ರೆಸ್‌ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ. ಐದು ವರ್ಷಗಳ ಕಾಲ ಕರ್ನಾಟಕದ  ಜನತೆಗೆ ಸುಭದ್ರ ಸರಕಾರ ನೀಡುತ್ತೇವೆ ಎಂದು ಪತ್ರಕರ್ತರ ಪ್ರಶ್ನೆಗೆ ಯು.ಟಿ. ಖಾದರ್‌ ಹೇಳಿದರು.

ಚಾರ್ಮಾಡಿಯಲ್ಲಿ ಮೊಬೈಲ್‌ ಗ್ಯಾಂಗ್‌
ಅಪಘಾತ, ಯಾವುದೇ ತುರ್ತು ಸಂದರ್ಭಗಳಲ್ಲಿ ಸ್ಥಳಕ್ಕೆ ಧಾವಿಸಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಮೊಬೈಲ್‌ ಗ್ಯಾಂಗ್‌ ನಿಯೋಜಿಸಲಾಗಿದೆ.
ಸಚಿವ ಯು.ಟಿ. ಖಾದರ್‌

ಎನ್‌ಐಟಿಕೆ ಟೋಲ್‌ ರದ್ದು?
ದ.ಕ. ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಮಾತನಾಡಿ, ಈಗಾಗಲೇ ಸುರತ್ಕಲ್‌ನ ಎನ್‌ಐಟಿಕೆ ಬಳಿಯ ಟೋಲ್‌ ಗೇಟನ್ನು ರದ್ದು ಮಾಡಿ ಹೆಜಮಾಡಿ ಟೋಲ್‌ಗೆ ವಿಲೀನ ಮಾಡಬೇಕಿತ್ತು. ಆದರೆ ವಿಳಂಬವಾಗಿದೆ. ಈ ಬಗ್ಗೆ ಮಾತುಕತೆ ನಡೆಸಿ ಪೂರಕ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next