ಸಿಂಪಲ್ ಕಥೆಯನ್ನು ಮಜವಾಗಿ ಹೇಳುವುದು ಕೂಡಾ ಒಂದು ಕಲೆ. ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕನಿಗೆ ನೀವು ಎರಡು ಗಂಟೆ ಯಾವ ರೀತಿ ರಂಜಿಸುತ್ತೀರಿ ಅನ್ನೋದಷ್ಟೇ ಮುಖ್ಯವಾಗುತ್ತದೆ. ಪ್ರೇಕ್ಷಕ ಬಯಸೋದು ಕೂಡಾ ಅದನ್ನೇ. ತೆರೆಹಿಂದೆ ಚಿತ್ರತಂಡ ಪಟ್ಟ ಶ್ರಮ ಆತನಿಗೆ ಮುಖ್ಯವಾಗುವುದಿಲ್ಲ. ಆ ನಿಟ್ಟಿನಲ್ಲಿ “ಡಬಲ್ ಇಂಜಿನ್’ ತಂಡ ಒಂದು ಮಟ್ಟಕ್ಕೆ ಯಶಸ್ಸು ಸಾಧಿಸಿದೆ ಎನ್ನಬಹುದು. ಇಲ್ಲಿ ಒಂದಂಶವನ್ನು ಮೊದಲೇ ಹೇಳಿಬಿಡಬೇಕು.
ಪಡ್ಡೆಹುಡುಗರು, ಔಟ್ ಅಂಡ್ ಔಟ್ ಕಾಮಿಡಿಯನ್ನು ಇಷ್ಟಪಡುವವರು, ಕಥೆಗಿಂತ ನಗು ಮುಖ್ಯ ಎಂದುಕೊಂಡವರೇ ಈ ಸಿನಿಮಾದ ಟಾಗೇìಟ್. ಅದೇ ಕಾರಣದಿಂದ ಚಿತ್ರತಂಡ ಪ್ರೇಕ್ಷಕರನ್ನು ನಗಿಸಲು ಏನೆಲ್ಲಾ ಕಸರತ್ತು ಮಾಡಬೇಕೋ, ಅವೆಲ್ಲವನ್ನು ಮಾಡಿದೆ. ಮಾಡೋಕೆ ಕೆಲಸವಿಲ್ಲದ, ಹಳ್ಳಿಯಲ್ಲಿ ಉಪಟಳ ಮಾಡಿಕೊಂಡಿರುವ ಮೂವರು ಬೇಜವಾಬ್ದಾರಿ ಯುವಕರ ಕಥೆಯೇ “ಡಬಲ್ ಇಂಜಿನ್’.
ಕಥೆ ತೀರಾ ಸರಳ. ಅಡ್ಡದಾರಿಯಲ್ಲಿ ಕಾಸು ಮಾಡಲು ಹೊರಡುವ ಹುಡುಗರು ಎದುರಿಸುವ ತೊಂದರೆ ಹಾಗೂ ಕೊನೆಗೊಂದು ಸಂದೇಶವೇ ಈ ಸಿನಿಮಾದ ಒಟ್ಟು ಜೀವಾಳ. ಆದರೆ, ಈ ಅಂಶವನ್ನು ವಿವಿಧ ಸನ್ನಿವೇಶಗಳ ಮೂಲಕ ನಿರ್ದೇಶಕರು ಡಿಸೈನ್ ಡಿಸೈನ್ ಆಗಿ ಕಟ್ಟಿಕೊಟ್ಟಿದ್ದಾರೆ. ನೀವು ಲಾಜಿಕ್ ಹುಡುಕದೇ ಸಿನಿಮಾದ ಮ್ಯಾಜಿಕ್‌ನ°ಷ್ಟೇ ನೋಡಿದರೆ ನಿಮಗೆ ಇಂಜಿನ್ ಮಜಾ ಕೊಡುತ್ತದೆ. ಮುಖ್ಯವಾಗಿ ಚಿತ್ರದ ನಿರೂಪಣೆಯಲ್ಲಿ ನಿರ್ದೇಶಕರು ವೇಗ ಕಾಯ್ದುಕೊಂಡಿದ್ದಾರೆ.
ಒನ್‌ಲೈನ್ ಕಥೆಯನ್ನು ಹೇಗೆ ವಿಭಿನ್ನ ಸನ್ನಿವೇಶಗಳ ಮೂಲಕ ಕಟ್ಟಿಕೊಡಬಹುದು ಮತ್ತು ಆ ಮೂಲಕ ಪ್ರೇಕ್ಷಕರನ್ನು ಹೇಗೆ ನಗಿಸಬಹುದೆಂಬುದು ನಿರ್ದೇಶಕರಿಗೆ ಚೆನ್ನಾಗಿ ಗೊತ್ತಿದ್ದಂತಿದೆ. ಅದೇ ಕಾರಣದಿಂದ ಆರಂಭದಿಂದ ಕೊನೆವರೆಗೂ “ಇಂಜಿನ್’ ಸುತ್ತ ನಗುವಿನ ಸದ್ದು ಕೇಳಿಬರುತ್ತಲೇ ಇರುತ್ತದೆ. ಮೊದಲೇ ಹೇಳಿದಂತೆ ಈ ಸಿನಿಮಾದ ಟಾಗೇಟ್ ಪಡ್ಡೆಗಳು ಹಾಗೂ ಹಾಸ್ಯಪ್ರಿಯರು.
ಆ ಕಾರಣದಿಂದ ಆಗಾಗ ಒಂದಷ್ಟು ಡಬಲ್ ಮೀನಿಂಗ್ ಸಂಭಾಷಣೆಗಳು ಕೂಡಾ ಬಂದು ಹೋಗುತ್ತವೆ. ಹಾಗಂತ ಸಿನಿಮಾದಲ್ಲಿ ಅಶ್ಲೀಲ ದೃಶ್ಯಗಳಿಲ್ಲ. ಮೂವರು ಪಡ್ಡೆ ಹುಡುಗರು ಒಟ್ಟಾದಾಗ ಸನ್ನಿವೇಶ ಹೇಗಿರಬಹುದೆಂಬುದನ್ನು ಕಟ್ಟಿಕೊಡಲಾಗಿದೆ. ಅದು ಬಿಟ್ಟರೆ “ಡಬಲ್ ಇಂಜಿನ್’ ಈ ಹಿಂದೆ ನೋಡದಂತಹ ಅದ್ಭುತ ಸಿನಿಮಾವಂತೂ ಅಲ್ಲ. ಆದರೆ, ಕಥೆಯನ್ನು ನೀಟಾಗಿ ಕಟ್ಟಿಕೊಟ್ಟಿದ್ದಾರಷ್ಟೇ.
ಚಿಕ್ಕಣ್ಣ, ಅಶೋಕ್, ಪ್ರಭು, ಸುಮನ್ ರಂಗನಾಥ್ ಅವರದು ಒಂದು ಟ್ರ್ಯಾಕ್ ಆದರೆ, ಸಾಧುಕೋಕಿಲ ಅವರದು ಮತ್ತೂಂದು ಟ್ರ್ಯಾಕ್. ಇನ್ನು, ಹಳ್ಳಿಯ ಪಡ್ಡೆಹುಡುಗನಾಗಿ ಚಿಕ್ಕಣ್ಣ ಅವರಿಗೆ ಈ ತರಹದ ಪಾತ್ರ ಹೊಸದೇನಲ್ಲ. ಹಾಗಾಗಿ, ಚಿಕ್ಕಣ್ಣ ಎಂದಿನಂತೆ ನಟಿಸಿದ್ದಾರೆ. ಉಳಿದಂತೆ ಅಶೋಕ್ ಪಾತ್ರ ಗಮನ ಸೆಳೆಯುತ್ತದೆ. ಪ್ರಭು ಕಾಮಿಡಿಯಲ್ಲಿ ಇನ್ನಷ್ಟು ದೂರ ಸಾಗಬೇಕು. ಸುಮನ್ ರಂಗನಾಥ್, ಸುಚೇಂದ್ರ ಪ್ರಸಾದ್, ಸಾಧು ಕೋಕಿಲ, ಅಚ್ಯುತ್ ಕುಮಾರ್ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಚಿತ್ರ: ಡಬಲ್ ಇಂಜಿನ್
ನಿರ್ಮಾಣ: ಎಸ್‌ಆರ್‌ಎಸ್ ಗ್ರೂಪ್
ನಿರ್ದೇಶನ: ಚಂದ್ರಮೋಹನ್
ತಾರಾಗಣ: ಚಿಕ್ಕಣ್ಣ, ಅಶೋಕ್, ಪ್ರಭು, ಸುಮನ್ ರಂಗನಾಥ್, ಮುಂತಾದವರು
* ರವಿಪ್ರಕಾಶ್ ರೈ