Advertisement
ಗ್ರಾಮದಲ್ಲಿ ಮಾದಮ್ಮ-ಸೋಮಣ್ಣ ಇಬ್ಬರಿಗೂ ಶುಕ್ರವಾರ ನಿಶ್ಚಿತಾರ್ಥ ನಿಗದಿಯಾಗಿತ್ತು. ಆದರೆ, ವಿದ್ಯುತ್ ಬೆಳಕಿನ ಸಮಸ್ಯೆ ಎದುರಾಗಿದ್ದರಿಂದ ಗ್ರಾಮಸ್ಥರು ಟ್ರ್ಯಾಕ್ಟರ್ ಲೈಟ್ ಬಳಸಿ ನಿಶ್ಚಿತಾರ್ಥ ಮಾಡಿದ್ದಾರೆ. ಕೃಷ್ಣಾ ನದಿ ಕವಲುಗಳ ನಡುವೆ ನೀಲಕಂಠರಾಯನ ಗಡ್ಡಿ ಗ್ರಾಮವಿದೆ. ಇತ್ತೀಚೆಗೆ ಕೃಷ್ಣಾ ನದಿಗೆ ನಾರಾಯಣಪುರ ಜಲಾಶಯದ ನೀರು ಹರಿಸಿದಾಗ ಪ್ರವಾಹ ಆವರಿಸಿ ಸಂಪರ್ಕ ಕಡಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ನೀಲಕಂಠರಾಯನ ಗಡ್ಡಿಗೆ ಸಂಪರ್ಕ ಹೊಂದಿದ ವಿದ್ಯುತ್ ಲೈನ್ ಜೆಸ್ಕಾಂ ಅಧಿಕಾರಿಗಳು ಕಡಿತಗೊಳಿಸಿದ್ದರು. ಮೂರು ತಿಂಗಳಾದರೂ ಇದುವರೆಗೂ ವಿದ್ಯುತ್ ಸಂಪರ್ಕ ಪುನಃ ಕಲ್ಪಿಸಿಲ್ಲ. ಇದರಿಂದ ಗ್ರಾಮಸ್ಥರು ಕತ್ತಲೆಯಲ್ಲಿಯೇ ಜೀವನ ಸಾಗಿಸುವಂತಾಗಿದೆ. ಸೋಲಾರ್ ವಿದ್ಯುತ್ ಇದ್ದರೂ ತಾಂತ್ರಿಕೆ ದೋಷದಿಂದ ಕೆಟ್ಟಿವೆ.
ವಿದ್ಯುತ್ ಇಲ್ಲದ್ದರಿಂದ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದ್ದು, ಸಂವಹನಕ್ಕೆ ಜನರು ಪರದಾಡುವಂತಾಗಿದೆ. ಪ್ರವಾಹ ಅಬ್ಬರಕ್ಕೆ ಇದ್ದ ಪುಟ್ಟ ಸೇತುವೆ ಕೊಚ್ಚಿಕೊಂಡು ಹೋಗಿ ಸಂಚಾರಕ್ಕೂ ತೊಂದರೆಯಾಗಿದೆ. ರಾತ್ರಿ ವೇಳೆ ಸಮಸ್ಯೆಯಾದರೆ ಜೀವಕ್ಕೆ ಸಂಚಕಾರವಿದೆ ಎನ್ನುತ್ತಾರೆ ಗ್ರಾಮಸ್ಥರಾದ ಅಮರಪ್ಪ, ಕನಕಪ್ಪ.