Advertisement

ಸಮುದಾಯ ಸೇವೆಯಲ್ಲಿ ತೊಡಗಿಸಿಕೊಳ್ಳಿ

02:19 AM Apr 13, 2019 | Team Udayavani |

ಉಳ್ಳಾಲ: ವಿಶ್ವವಿದ್ಯಾ ನಿಲಯದ ವಿದ್ಯಾರ್ಥಿಗಳು ಮತ್ತು ಶಿಕ್ಷಣ ನೀಡುವ ಉಪನ್ಯಾಸಕರು ನಿರಂತರ ಅಧ್ಯಯನ, ಸಂಶೋಧನೆಗೆ ಒತ್ತು ನೀಡುವುದರೊಂದಿಗೆ ಸಮುದಾಯದ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಬರೋಡಾದ ಎಂ.ಎಸ್‌. ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪದ್ಮಾ ರಾಮಚಂದ್ರನ್‌ ಅವರು ಅಭಿಪ್ರಾಯಪಟ್ಟರು.

Advertisement

ಮಂಗಳಗಂಗೋತ್ರಿಯ ಮಂಗಳ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ 37ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ಸಾಕಷ್ಟು ಮಂದಿಗೆ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಿಲ್ಲ. ಆದರೆ ಇಂತಹ ಶಿಕ್ಷಣ ಪಡೆದವರು ತಾವು ಕಲಿತ ಶಿಕ್ಷಣವನ್ನು ಮತ್ತೂಬ್ಬರಿಗೆ ಹಂಚುವ ಕೆಲಸದಿಂದ ಸಮಾಜದಲ್ಲಿ ಸಾಕಷ್ಟು ಸುಧಾರಣೆ, ಬದಲಾವಣೆಗೆ ಅವಕಾಶ ಸಿಗಲಿದೆ. ಈ ನಿಟ್ಟಿನಲ್ಲಿ ಸಮಾಜ ಸುಧಾರಣೆಯ ಕೆಲಸ ಮಾಡಿದ ಮಹಾತ್ಮರ ಜೀವನ ಹಾದಿಯಿಂದ ಸ್ಫೂರ್ತಿಯನ್ನು ಪದವೀಧರರು ಪಡೆಯುವ ಅಗತ್ಯವಿದೆ ಎಂದರು.

ವಿಶ್ವವಿದ್ಯಾನಿಲಯದ ಪ್ರಭಾರ ಉಪ ಕುಲಪತಿ ಡಾ| ಕಿಶೋರಿ ನಾಯಕ್‌ ಪದವಿ ಪ್ರಮಾಣ ಪತ್ರ ಪ್ರದಾನ ಮಾಡಿದರು. ಪರೀಕ್ಷಾಂಗ ಕುಲಸಚಿವ ಪ್ರೊ| ರವೀಂದ್ರಾಚಾರಿ, ವಿವಿಧ ವಿಭಾಗಗಳ ಪ್ರೊ| ಬಾಲಕೃಷ್ಣ ಪಿ.ಎಂ. ಪ್ರೊ| ಮಲ್ಲಿಕಾರ್ಜುನಪ್ಪ, ಪ್ರೊ| ಜಯರಾಜ್‌ ಅಮೀನ್‌, ಪ್ರೊ| ಕಿಶೋರ್‌ ಕುಮಾರ್‌, ಹಣಕಾಸು ಅಧಿಕಾರಿ ಪ್ರೊ| ದಯಾನಂದ ನಾಯಕ್‌ ಮೊದಲಾದವರು ಉಪಸ್ಥಿತರಿದ್ದರು.

ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ| ಎ.ಎಂ. ಖಾನ್‌ ಸ್ವಾಗತಿಸಿ ವಿ.ವಿ. ಸಾಧನೆ ಮತ್ತು ವರದಿ ಮಂಡಿಸಿದರು. ಪ್ರಾಧ್ಯಾಪಕರಾದ ಡಾ| ರವಿಶಂಕರ್‌ ಮತ್ತು ಡಾ| ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರ್ವಹಿಸಿದರು.

Advertisement

149 ಮಂದಿಗೆ ಪಿಎಚ್‌ಡಿ ಪದವಿ
ಬಯೋಟೆಕ್ನಾಲಜಿ ವಿಭಾಗದಲ್ಲಿ ಒಬ್ಬರಿಗೆ ಡಾಕ್ಟರ್‌ ಆಫ್‌ ಸಯನ್ಸ್‌, ಕಲಾನಿಕಾಯದಲ್ಲಿ 27, ವಿಜ್ಞಾನ ನಿಕಾಯದಲ್ಲಿ -99, ವಾಣಿಜ್ಯ ನಿಕಾಯದಲ್ಲಿ 14 ಹಾಗೂ ಶಿಕ್ಷಣ ನಿಕಾಯದಲ್ಲಿ 9 ಮಂದಿ ಪಿಎಚ್‌ಡಿ ಪದವಿಯನ್ನು ಪಡೆದಿದ್ದು, ಇವರಲ್ಲಿ 70 ಮಹಿಳೆಯರು ಮತ್ತು 79 ಪುರುಷರಿಗೆ ಪಿಎಚ್‌ಡಿ ಪದವಿ ನೀಡಲಾಯಿತು. 34 ಮಂದಿಗೆ ಚಿನ್ನದ ಪದಕ ಹಾಗೂ 98 ಮಂದಿಗೆ ನಗದು ಬಹುಮಾನ ನೀಡಲಾಯಿತು. ಒಟ್ಟು 170 ರ್‍ಯಾಂಕ್‌ಗಳಲ್ಲಿ ಪ್ರಥಮ ರ್‍ಯಾಂಕ್‌ ಪಡೆದ ಸ್ನಾತಕೋತ್ತರ ವಿಭಾಗ 51 ವಿದ್ಯಾರ್ಥಿಗಳಿಗೆ ಮತ್ತು ಪದವಿಯ 19 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 70 ವಿದ್ಯಾರ್ಥಿಗಳಿಗೆ ರ್‍ಯಾಂಕ್‌ ಪ್ರಮಾಣ ಪತ್ರವನ್ನು ನೀಡಲಾಯಿತು.

ಆಫ್ರಿಕಾದ 6 ಮಂದಿಗೆ ಪಿಎಚ್‌ಡಿ
ಈ ಸಲ ಪ್ರಥಮ ಬಾರಿಗೆ ರುವಾಂಡ, ಇಥಿಯೋಪಿಯಾ, ನಮೀಬಿಯಾ ಸಹಿತ ಆಫ್ರಿಕಾ ಖಂಡದ 6 ಮಂದಿ ಉಪನ್ಯಾಸಕರು ಪಿಎಚ್‌ಡಿ ಪದವಿ ಪಡೆದುಕೊಂಡರು. ಪದವಿ ಸ್ವೀಕರಿಸಿದ ರುವಾಂಡ ವಿ.ವಿ.ಯ ಉಪನ್ಯಾಸಕ ದುಸೈದಿ ಒಡೆಟ್ಟಿ ಗ್ಯಾಸೆಂಗೈರೆ ಮಾತನಾಡಿ, ಭಾರತದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಚಿಕ್ಕ ಅಳುವಾರಿನಲ್ಲಿ ಕಲಿಕೆಗೆ ಅವಕಾಶದಿಂದ ಸಾಧನೆ
ತಾಯಿಯ ಒತ್ತಾಸೆ, ಉಪನ್ಯಾಸಕರ ಪ್ರೋತ್ಸಾಹ ಮತ್ತು ಚಿಕ್ಕಅಳುವಾರಿನಲ್ಲಿ ಮಂಗಳೂರು ವಿ.ವಿ.ಯ ಅಧ್ಯಯನ ಕೇಂದ್ರ ಇರುವುದರಿಂದ ಉನ್ನತ ಶಿಕ್ಷಣದಲ್ಲಿ ಸಾಧನೆ ಮಾಡಲು ಸಾಧ್ಯ ವಾಯಿತು ಎಂದು ಕನ್ನಡ ಸ್ನಾತಕೋತ್ತರ ವಿಭಾಗದಲ್ಲಿ 1 ಚಿನ್ನದ ಪದಕ ಮತ್ತು 5 ನಗದು ಪುರಸ್ಕಾರ ಗಳಿಸಿದ ಮಡಿಕೇರಿ ನಾಪೊಕ್ಲುವಿನ ಸೌಮ್ಯಾ ಕೆ.ಎ. ಅಭಿಪ್ರಾಯ ವ್ಯಕ್ತಪಡಿಸಿದರು.

ಎಫ್‌ಎಂಸಿ ಕಾಲೇಜಿನಲ್ಲಿ ಪದವಿ ಸಂದರ್ಭ 1 ಚಿನ್ನದ ಪದಕ
ಪಡೆದಿದ್ದೆ.ತಂದೆ ನಿಧನ ಹೊಂದಿ 15 ವರ್ಷ ಕಳೆದಿದ್ದು, ತಾಯಿ ರಾಣಿ ಕೆ.ಎ. ಹಾಗೂ ಸಹೋದರ ಗೌತಮ್‌ ಕಷ್ಟಪಟ್ಟು ಕೃಷಿ ಜೀವನ ನಡೆಸಿ ಶಿಕ್ಷಣಕ್ಕೆ ಒತ್ತಾಸೆಯಾಗಿ ದ್ದರು. ಎನ್‌ಇಟಿ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದು ಮುಂದಿನ ದಿನಗಳಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿ ಪಿಎಚ್‌ಡಿ ಪೂರೈಸುವ ಆಕಾಂಕ್ಷೆಯನ್ನು ಹೊಂದಿರುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next