ಬೆಂಗಳೂರು: ಕೈಗಾರಿಕಾ ನೀತಿ, ಸ್ಟಾರ್ಟ್‌ಅಪ್ ನೀತಿ ಬಂದಾಯ್ತು. ಈಗ ‘ಉದ್ಯೋಗ ನೀತಿ’ಅಸ್ತಿತ್ವಕ್ಕೆ ಬರಲಿದೆ. ದೇಶದಲ್ಲಿ ಇಂತಹದ್ದೊಂದು ನೀತಿ ಜಾರಿಗೊಳಿಸುತ್ತಿರುವ ಮೊದಲ ರಾಜ್ಯ ಕರ್ನಾಟಕ ಆಗಿದೆ.
ರಾಜ್ಯದಲ್ಲಿ ಈಗಾಗಲೇ ಸೆಮಿಕಂಡಕ್ಟರ್, ಸ್ಟಾರ್ಟ್‌ಅಪ್, ಕೈಗಾರಿಕೆಗೆ ಸಂಬಂಧಿಸಿದ ನೀತಿಗಳು ಜಾರಿಯಲ್ಲಿವೆ. ಈಗ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ‘ಉದ್ಯೋಗ ನೀತಿ’ ಜಾರಿಗೊಳಿಸುತ್ತಿದೆ. ಇದರಡಿ ಹೆಚ್ಚು ಉದ್ಯೋಗ ನೀಡಿದವರಿಗೆ ಸರ್ಕಾರ ಅಧಿಕ ಪ್ರೋತ್ಸಾಹಧನ ನೀಡಿ ಉತ್ತೇಜಿಸಲಿದೆ. ದೇಶದಲ್ಲಿ ಇದೇ ಮೊದಲ ಬಾರಿ ಉದ್ಯೋಗ ನೀತಿ ಜಾರಿಗೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದ ಅರಮನೆ ಆವರಣದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸೋಮವಾರ ಹಮ್ಮಿಕೊಂಡಿದ್ದ ‘ಉದ್ಯಮಿಯಾಗು ಉದ್ಯೋಗ ನೀಡು’ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇದನ್ನೂ ಓದಿ:ಸತ್ಯ ಗೊತ್ತಾದ ಮೇಲೆ, ಆಕ್ರೋಶದ ಕಟ್ಟೆ ಒಡೆಯಲಿದೆ: ಎಚ್.ಕೆ.ಪಾಟೀಲ್
ಉದ್ಯೋಗ ನೀತಿಯ ಸಿದ್ಧತೆಗಳು ನಡೆದಿವೆ. ಶೀಘ್ರದಲ್ಲೇ ಇದು ಅಸ್ತಿತ್ವಕ್ಕೆ ಬರಲಿದೆ. ಜತೆಗೆ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಆಂಡ್ ಡಿ)ಗೆ ಉತ್ತೇಜನ ನೀಡಲು ಕೂಡ ಒಂದು ಪ್ರತ್ಯೇಕ ನೀತಿ ರೂಪಿಸಲಾಗುತ್ತಿದೆ. ಕೈಗಾರಿಕೆ ಸೇರಿದಂತೆ ಪ್ರತಿ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು ನೀಡುವುದು ಇದರ ಮುಖ್ಯ ಉದ್ದೇಶ. ಇದರಿಂದ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ವಿಶ್ವಾಸ ಇದೆ. ಇದು ಸಹ ದೇಶದಲ್ಲಿ ಮೊದಲು ಎಂದು ಅವರು ಹೇಳಿದರು.