ಗಜೇಂದ್ರಗಡ: ವಿಧಾನಸಭೆ ಮಹಾ ಸಮರಕ್ಕೆ ಮೂಹೂರ್ತ ಫಿಕ್ಸ್ ಆದ ಹಿನ್ನೆಲೆಯಲ್ಲಿ ಜನತೆಗೆ ಚುನಾವಣಾ ನೀತಿ ಸಂಹಿತೆ ಬಿಸಿ ತಟ್ಟುತ್ತಿದೆ. ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಅಧಿಕಾರಿಗಳು, ಪಟ್ಟಣದ ಶ್ರೀ ಕಾಲಕಾಲೇಶ್ವರ ವೃತ್ತದಲ್ಲಿನ ಬ್ಯಾನರ್, ಬಂಟಿಂಗ್ ಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿದ್ದಾರೆ.
ಜನಪ್ರತಿನಿಧಿಗಳ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೆ ತರಲು ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದಾರೆ. ಈ ಕಾಯ್ದೆಯಡಿ ಕರಪ್ಟ್ ಪ್ರಾಕ್ಟೀಸಸ್ ವರ್ಗೀಕರಿಸಲಾಗಿದೆ. ಯಾವುದೇ ವ್ಯಕ್ತಿ ಚುನಾವಣೆಯಲ್ಲಿ ಸ್ಪರ್ಧಿಸಿ ಯಾವುದೇ ದಾನ ಅಥವಾ ಆಮಿಷ ತೋರಿಸಿ (ಆಫರ್) ಸುಳ್ಳು ಆಶ್ವಾಸನೆಯನ್ನು ನೇರವಾಗಿ ಅಲ್ಲದೇ, ಪರೋಕ್ಷವಾಗಿ ನೀಡುವುದು ಅಪರಾಧವಾಗಿದೆ ಎಂದು ನೀತಿ ಸಂಹಿತೆಯಲ್ಲಿ ತಿಳಿಸಲಾಗಿದೆ.
ಅಂದ ಕೆಡಿಸುವ ಬ್ಯಾನರ್: ಜಿಲ್ಲೆಯ ಎರಡನೇ ವಾಣಿಜ್ಯ ನಗರಿ ಖ್ಯಾತಿಯ ಗಜೇಂದ್ರಗಡ ಬ್ಯಾನರ್ ಗಳಿಗೆ ಹೆಸರುವಾಸಿಯಾಗಿದೆ. ಯಾವುದೇ ಒಂದು ಕಾರ್ಯಕ್ರಮ ನಡೆಯಬೇಕಾದರೆ, ಆಯೋಜಕರು ಲಕ್ಷಾಂತರ ರೂ. ಖರ್ಚು ಮಾಡಿ ಗಜೇಂದ್ರಗಡ ತುಂಬೆಲ್ಲಾ ಬೃಹತ್ ಕಟೌಟ್, ಜೋಡು ರಸ್ತೆಗಳ ನಾಲ್ಕೂ ಬದಿಗಳಲ್ಲಿನ 150ಕ್ಕೂ ಅಧಿಕ ದೀಪಸ್ತಂಭಗಳಿಗೆ ಬ್ಯಾನರ್ ಹಾಕುತ್ತಿದ್ದರು. ಜೊತೆಗೆ ಜನಜಂಗುಳಿ ಪ್ರದೇಶವಾದ ಕಾಲಕಾಲೇಶ್ವರ ವೃತ್ತದಲ್ಲಿ ಎಲ್ಲೇಂದರಲ್ಲಿ ಬ್ಯಾನರ್‌ಗಳನ್ನು ಹಾಕಲಾಗುತ್ತಿತ್ತು. ಇದರಿಂದ ಪಟ್ಟಣದ ಅಂದ ಸಂಪೂರ್ಣ ಹದಗೆಡುತ್ತಿತ್ತು. ಆದರೀಗ ಚುನಾವಣೆ ನೀತಿ ಸಂಹಿತೆಯಿಂದಾಗಿ ಬ್ಯಾನರ್‌ಗಳಿಗೆ ಬ್ರೇಕ್ ಬಿದ್ದಿದೆ.
ಕಟ್ಟುನಿಟ್ಟಿನ ನೀತಿ ಸಂಹಿತೆ: ವಿಧಾನಸಭೆ ಚುನಾವಣೆಯನ್ನು ಕಟ್ಟುನಿಟ್ಟಾಗಿ ನಡೆಸಬೇಕೆನ್ನುವ ಉದ್ದೇಶದಿಂದ ಚುನಾವಣಾ ಇಲಾಖೆ ನೀತಿ ಸಂಹಿತೆ ಜಾರಿಯಾದ 24 ಗಂಟೆಯೊಳಗೆ ಪಟ್ಟಣದಲ್ಲಿ ಹಾಕಲಾಗಿದ್ದ ರಾಜಕೀಯ ಮುಖಂಡರ ಮತ್ತಿತರ ಬ್ಯಾನರ್‌ಗಳನ್ನು ತೆರವುಗೊಳಿಸಿದ್ದಾರೆ. ಎಲ್ಲೆಡೆ ನೀತಿಸಂಹಿತೆ ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿದ್ದಾರೆ.ಇದರಿಂದ ಪ್ರಿಂಟಿಂಗ್ ಪ್ರೆಸ್‌ಗಳ ಆದಾಯಕ್ಕೆ ಕತ್ತರಿ ಬಿದ್ದಿದೆ.
ಕಣ್ಮರೆಯಾದ ಗೋಡೆ ಬರಹ: ಕೆಲ ತಿಂಗಳ ಹಿಂದೆ ಪಟ್ಟಣದಾದ್ಯಂತ ಎಲ್ಲ ಬೀದಿಗಳು, ಬಡಾವಣೆಯ ಪ್ರಮುಖ ರಸ್ತೆಗಳ ಖಾಸಗಿಯವರ ಗೋಡೆಗಳಲ್ಲಿ ರಾರಾಜಿಸುತ್ತಿದ್ದ ರಾಜಕೀಯ ಪಕ್ಷಗಳ ಗೋಡೆ ಬರಹಗಳು ಕಣ್ಮರೆಯಾಗಿವೆ. ನೀತಿ ಸಂಹಿತೆಯಿಂದಾಗಿ ಪುರಸಭೆ ಅಧಿ ಕಾರಿಗಳು ಗೋಡೆ ಬರಹವಿರುವ ಗೋಡೆಗಳಿಗೆ ಬಣ್ಣ ಬಳಿದಿದ್ದಾರೆ.
ಚುನಾವಣೆಯನ್ನು ಕಟ್ಟುನಿಟ್ಟಾಗಿ ನಡೆಸುವ ಉದ್ದೇಶದಿಂದ ಚುನಾವಣಾ ಅಧಿಕಾರಿಗಳು ಕ್ಷೇತ್ರದಲ್ಲಿ ಹದ್ದಿನ ಕಣ್ಣಿಟ್ಟಿದ್ದು, ಚುನಾವಣೆಗೆ ಸಂಬಂಧಿಸಿದಂತೆ ಗುಂಪುಗಳ ಮಧ್ಯೆ ವೈರತ್ವ ಪ್ರೋತ್ಸಾಹಿಸುವುದು-ಈ ಕಾಯ್ದೆಯ ಕಲಂ 125ರಡಿ ನಡೆಸುವ ಯಾವುದಾದರೂ ಚುನಾವಣೆಯಲ್ಲಿ ಜಾತಿ, ಧರ್ಮ, ಕುಲ ಅಥವಾ ಭಾಷೆಯ ಹೆಸರಿನಲ್ಲಿ ಎರಡು ಗುಂಪುಗಳ ಮಧ್ಯೆ ಅಥವಾ ಜನರ ಮಧ್ಯೆ ವೈರತ್ವ ಬೆಳೆಯುವಂತೆ ಮಾಡದಂತೆ ಎಲ್ಲ ಕ್ರಮ ಜರುಗಿಸುವುದು ಕಂಡು ಬರುತ್ತಿದೆ.
ಚುನಾವಣಾ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲನೆ ಮಾಡುವ ನಿಟ್ಟಿನಲ್ಲಿ ಗಜೇಂದ್ರಗಡ ತಾಲೂಕಿನಲ್ಲಿ ಎರಡು ಚೆಕ್‌ಪೋಸ್ಟ್‌ಗಳನ್ನು ತೆರೆದು ಕಾರ್ಯನಿರ್ವಹಿಸಲಾಗುತ್ತಿದೆ. ನೀತಿಸಂಹಿತೆ ಪಾಲನೆಗೆ ವಿಶೇಷ ತಂಡ ರಚಿಸಿ, ಕಾರ್ಯಾಚರಣೆ ಮಾಡಲಾಗುತ್ತಿದೆ. ಚುನಾವಣೆಗೆ ಸಹಕರಿಸುವ, ಆಮಿಷಗಳನ್ನೊಡ್ಡುವ ಕೆಲಸದಲ್ಲಿ ತೊಡಗಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು.
ರಜನಿಕಾಂತ್ ಕೆಂಗೇರಿ,
ಸಹಾಯಕ ಚುನಾವಣಾ ಅಧಿಕಾರಿ