ಮಂಡ್ಯ: ಮಾಜಿ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಸಿದ್ಧಪಡಿಸಲಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಬಿಜೆಪಿ ಸರ್ಕಾರ ಬಿಡುಗಡೆ ಮಾಡಬೇಕು ಎಂದು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ಒತ್ತಾಯಿಸಿದರು.
ನಗರದ ಕನಕ ಭವನದಲ್ಲಿ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಆಯೋಜಿಸಿದ್ದ ಜಾಗೃತಿ ಸಭೆಯಲ್ಲಿ ಮಾತನಾಡಿ, ಸುಮಾರು 168 ಕೋಟಿ ರೂ. ವೆಚ್ಚದಲ್ಲಿ ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ನಡೆಸಿ ಪ್ರತೀ ಸಮುದಾಯಗಳ ಅಧ್ಯಯನ ವರದಿಯನ್ನು ಸಿದ್ಧಪಡಿಸಲಾಗಿದೆ. ಈ ಹಿಂದಿನ ಮೈತ್ರಿ ಸರ್ಕಾರ ಕೂಡ ವರದಿ ಸ್ವೀಕರಿಸದೆ ನಿರ್ಲಕ್ಷ್ಯ ವಹಿಸಿತು. ಈಗಿನ ಬಿಜೆಪಿ ಸರ್ಕಾರ ಕೂಡ ವರದಿ ಸ್ವೀಕಾರಕ್ಕೆ ಹಿಂದೇಟು ಹಾಕುತ್ತಿದೆ ಎಂದು ಹೇಳಿದರು.
ಬಜೆಟ್‌ನಲ್ಲಿ ಹಣ ಮೀಸಲಿಡಿ: ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ರಾಜ್ಯಸರ್ಕಾರ ಮುಂಬರುವ ಬಜೆಟ್‌ನಲ್ಲಿ ಹೆಚ್ಚಿನ ಹಣ ಮೀಸಲಿಡಬೇಕು. ಇದುವರೆಗೆ ನಿಗದಿಯಾಗಿರುವ ಅನುದಾನವನ್ನೂ ಸರ್ಕಾರ ಸಮರ್ಪಕವಾಗಿ ಬಿಡುಗಡೆ ಮಾಡಿಲ್ಲ ಎಂದು ದೂರಿದರಲ್ಲದೆ, 1931ರಲ್ಲಿ ಸ್ವಾತಂತ್ರಪೂರ್ವದಲ್ಲಿ ನಡೆಸಿದ ಜಾತಿ ಗಣತಿ ಅಂಕಿ-ಅಂಶಗಳ ಆಧಾರದ ಮೇಲೆ ಇಂದಿಗೂ ಸರ್ಕಾರ ಸವಲತ್ತುಗಳನ್ನು ಹಂಚಿಕೆ ಮಾಡುತ್ತಿದೆ. ಇದರಿಂದ ಅರ್ಹ ಫಲಾನುಭವಿಗಳಿಗೆ ಅನುಕೂಲವಾಗುವುದಿಲ್ಲ ಎಂದು ಹೇಳಿದರು.
ಜಿಪಂ ಸದಸ್ಯ ದೇವರಾಜು, ಮಾಜಿ ಅಧ್ಯಕ್ಷ ಲಿಂಗಯ್ಯ, ಮಾಜಿ ಸದಸ್ಯೆ ಸಾವಿತ್ರಮ್ಮ, ತಾಪಂಮಾಜಿ ಅಧ್ಯಕ್ಷ ಬೀರಪ್ಪ, ಜಿಲ್ಲಾ ಗಂಗಾಮತಸ್ಥ ಸಂಘದ ಅಧ್ಯಕ್ಷ ನಂಜುಂಡಪ್ಪ, ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಸಂದೇಶ್, ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಪದಾಧಿಕಾರಿಗಳಾದ ವೇಣುಗೋಪಾಲ್, ಬದ್ರಿನಾಥ್, ಎಣ್ಣೆಗೆರೆ ವೆಂಕಟರಾಮಯ್ಯ, ರಂಗಪ್ಪ, ಗೋವಿಂದರಾಜು, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ನಾಗರಾಜ್, ಹಿಂದುಳಿದ ಸಮಾಜದ ಮುಖಂಡರಾದ ಆಂಜನಪ್ಪ, ರಾಜಣ್ಣ, ಸಿದ್ದಶೆಟ್ಟಿ, ನಾಗರತ್ನ, ರಮೇಶ್, ಕೃಷ್ಣಯ್ಯ, ಸಾತನೂರು ಕೃಷ್ಣ, ಕೆಪಿಸಿಸಿ ಸದಸ್ಯ ನಾಗಮಂಗಲ ಮಂಜೇಗೌಡ, ಸತೀಶ್, ನಾಮದೇವ್ ರೇಳೇಕರ್ ಇತರರಿದ್ದರು.