ಕಲಬುರಗಿ: ಸುಮಾರು 20 ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ತಲೆ ಮತ್ತು ಮುಖಕ್ಕೆ ಪೆಟ್ಟು ಬಿದ್ದು ಮೆದುಳಿನ ಒಂದಿಷ್ಟು ಭಾಗ ಮೂಗಿನ ಮೇಲ್ಭಾಗಕ್ಕೆ ಬಂದು ಮೆದುಳು ಸೋಂಕಿನಿಂದ ಬಳಲುತ್ತಿದ್ದ ರೋಗಿಗೆ ಎಂಡೋಸ್ಕೋಪಿ ತಂತ್ರಜ್ಞಾನ ಬಳಸಿಕೊಂಡು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಸನ್ ರೈಸ್ ಆಸ್ಪತ್ರೆಯಲ್ಲಿ ವೈದ್ಯರಾದ ರೋಹನ್ ಶಹಾ, ಡಾ| ದಿನೇಶ ವಲ್ಸೆ ತಿಳಿಸಿದರು.
ಗುರುವಾರ ಸನ್‌ರೈಸ್ ಆಸ್ಪತ್ರೆಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುತೇಕ ಮೆದುಳಿನ ಸೋಂಕಿಗೆ ತಲೆ ಬುರುಡೆ ತೆಗೆದು ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ. ಮೇಲಾಗಿ ಮದುಳಿನ ಭಾಗ ಕರಗಿ ಮೂಗಿನ ಭಾಗಕ್ಕೆ ಬರುವುದು ಒಂದು ಲಕ್ಷದಲ್ಲಿ ಒಬ್ಬರಿಗೆ ಆಗುವಂತಹದ್ದು. ಇಂತಹ ಕಠಿಣ ಶಸ್ತ್ರಚಿಕಿತ್ಸೆಯನ್ನು ತಲೆ ಬುರುಡೆ ಬಿಚ್ಚದೆ ಎಂಡೋಸ್ಕೋಪಿ ತಂತ್ರಜ್ಞಾನದ ಮೂಲಕ ಮಾಡಿ, ಕರಗಿ ಹೋಗಿದ್ದ ಭಾಗಕ್ಕೆ ಕೊಬ್ಬು, ಜೀವಕೋಶಗಳಿಂದ ಭರ್ತಿ ಮಾಡಲಾಗಿದೆ ಎಂದರು.
ಯಾದಗಿರಿ ಶಹಾಪುರ ತಾಲೂಕಿನ ಗೋಗಿ ಗ್ರಾಮದ ಸೈಯದ್ ಶಂಶಾಲಂ ಎನ್ನುವಾತನಿಗೆ ಈ ಎಂಡೋಸ್ಕೋಪಿ ಸ್ಕಲ್ ಬೇಸ್ ಸರ್ಜರಿ ಮಾಡಲಾಗಿದೆ. ಅಪಘಾತ ಸಂಭವಿಸಿದ ದಿನದಿಂದ ತಲೆ ನೋವು ಕಾಣಿಸಿಕೊಂಡು ಮೆದುಳು ಸೋಂಕಿನಿಂದ ಬಳಲಿ ಪ್ರಜ್ಞಾಹೀನ ಸ್ಥಿತಿಗೆ ಹೋಗಿದ್ದ. ಇದೇ ಸಮಸ್ಯೆಯಿಂದ ಏಳು ಬಾರಿ ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದ. ಎಂಟನೇ ಬಾರಿ ಸನ್‌ರೈಸ್ ಆಸ್ಪತ್ರೆಗೆ ಬಂದಾಗ ಸಿಟಿ ಸ್ಕ್ಯಾನ್‌ನಲ್ಲಿ ಮೆದುಳಿನ ಸ್ವಲ್ಪ ಭಾಗ ಮೂಗಿಗೆ ಬರುತ್ತಿರುವುರಿಂದ ಈ ಸಮಸ್ಯೆಯಾಗುತ್ತಿದೆ ಎಂದು ಗೊತ್ತಾಯಿತು ಎಂದು ವಿವರಿಸಿದರು.
ಆಗ ಎಂಡೋಸ್ಕೋಪಿ ಶಸ್ತ್ರ ಚಿಕಿತ್ಸೆ ನಡೆಸಲು ನಿರ್ಧರಿಸಿ, ಬೆನ್ನಿನಲ್ಲಿ ಡ್ರೇನ್ ಮಾಡಿ, ಮೆದುಳು ಮೇಲೆ ಹೋಗುವಂತೆ ಒತ್ತಡ ಸೃಷ್ಟಿಸಿ, ಕಿವಿಯ ಹಿಂಭಾಗದಲ್ಲಿ ಸಣ್ಣದೊಂದು ತೂತು ಮಾಡಿ ಅದರ ಮೂಲಕ ಮೂಳೆ ಇಲ್ಲದ ಜಾಗಕ್ಕೆ ಹೊಟ್ಟೆ ಇನ್ನಿತರ ಭಾಗದ ಕೊಬ್ಬು, ಜೀವಕೋಶಗಳನ್ನು ಸೇರಿ ಐದು ಪದರುಗಳನ್ನು ಮಾಡುವ ಮೂಲಕ ಮೆದಳು ಮತ್ತೆ ಬುರುಡೆಯಲ್ಲಿ ಗಟ್ಟಿಯಾಗಿ ಕುಳಿತುಕೊಳ್ಳುವಂತೆ ಮಾಡಲಾಯಿತು. ಸತತ 4 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿದ್ದೇವೆ. ಕಲಬುರಗಿ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಮಾದರಿಯ ಶಸ್ತ್ರಚಿಕಿತ್ಸೆ ಇದೇ ಮೊದಲಾಗಿದೆ. ಈಗ ರೋಗಿ ಸಂಪೂರ್ಣ ಗುಣಮುಖನಾಗಿದ್ದಾನೆ ಎಂದರು.
ಶಸ್ತ್ರಚಿಕಿತ್ಸೆಗೊಳಗಾದ ಶಂಶಾಲಂ ಮಾತನಾಡಿ, ಅಪಘಾತದಲ್ಲಿ ತಲೆಗೆ ಪೆಟ್ಟು ಬಿದ್ದು, ಪ್ರಜ್ಞೆ ಕಳೆದುಕೊಂಡಿದ್ದೆ. ಚಿಕಿತ್ಸೆ ಬಳಿಕ ಆರಾಮಾಗಿದ್ದೆ. ಆದರೆ, ಬಳಿಕ ವಿಪರೀತ ತಲೆನೋವು ಕಾಣಿಸಿಕೊಂಡು ಮತ್ತೆ ಪ್ರಜ್ಞೆಹೀನಾಗುತ್ತಿದ್ದೆ. ಈಗ ಯಾವುದೇ ಸಮಸ್ಯೆ ಇಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಸಲ್ಮಾನ್ ಪಟೇಲ್, ಡಾ| ಹಸೀಮ್ ಇದ್ದರು.