Advertisement

5 ತಿಂಗಳಿನಿಂದ ಎಂಡೋ ಸಂತ್ರಸ್ತರಿಗೆ ಮಾಸಾಶನವಿಲ್ಲ!

10:56 PM Jan 17, 2020 | mahesh |

ಕಡಬ: ಯಾರದೋ ತಪ್ಪಿಗೆ ಬಲಿಪಶುಗಳಾಗಿ ಜೀವನ ಪರ್ಯಂತ ಶಿಕ್ಷೆ ಅನುಭವಿಸುತ್ತಾ, ಸರಕಾರದ ಕಿಂಚಿತ್‌ ಮಾಸಾ ಶನದಲ್ಲಿಯೇ ಜೀವನ ಸಾಗಿಸುತ್ತಿರುವ ಎಂಡೋ ಸಂತ್ರಸ್ತರಲ್ಲಿ ಕೆಲವರಿಗೆ ಮಾಸಾಶನ ಸಮರ್ಪಕವಾಗಿ ದೊರೆಯದೆ ಪರದಾಡುವಂತಾಗಿದೆ. ಕಳೆದ ಐದು ತಿಂಗಳಿನಿಂದ ಎಂಡೋ ಸಂತ್ರಸ್ತರು ಇಂತಹ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿದ್ದರೂ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳದೇ ಸಂತ್ರಸ್ತರ ಬಾಳಿನಲ್ಲಿ ಆಟವಾಡುತ್ತಿರುವುದು ವಿಷಾದದ ಸಂಗತಿ.

Advertisement

ಈ ಹಿಂದೆ ಸರಕಾರ ಗೇರು ತೋಟಗಳಿಗೆ ಎಂಡೋಸಲ್ಫಾನ್‌ ಸಿಂಪಡಣೆ ಮಾಡುವಾಗ ಅದು ಮುಂದೆ ಅಮಾಯಕರ ಬಾಳಿಗೆ ಕೊಳ್ಳಿ ಇಡಬಹುದು ಎಂದು ಯಾರೂ ಊಹಿಸಿರಲಿಲ್ಲ. ಕಾಲಕ್ರಮೇಣ ಅದರ ದುಷ್ಪರಿಣಾಮ ಕಾಣಿಸತೊಡಗಿತು. ಹುಟ್ಟುವ ಮಕ್ಕಳ‌ಲ್ಲಿ ಬುದ್ಧಿಮಾಂದ್ಯತೆ, ಮಕ್ಕಳು ಬೆಳೆಯುತ್ತಿದ್ದಂತೆಯೇ ತಮ್ಮ ಕೈಕಾಲುಗಳ ಸ್ವಾಧೀನ ಕಳೆದುಕೊಳ್ಳುವುದು, ಅಂಧತ್ವ, ಕ್ಯಾನ್ಸರ್‌, ಹೆಣ್ಣುಮಕ್ಕಳಲ್ಲಿ ಬಂಜೆತನ ಮುಂತಾದ ಕಾಯಿಲೆಗಳು ಕಾಣಿಸಿಕೊಂಡಿತು. ಬಳಿಕ ನಡೆದ ಅನೇಕ ಹೋರಾಟಗಳ ಫಲವಾಗಿ 2010ರಿಂದ ಎಂಡೋಪೀಡಿತರನ್ನು ಗುರತಿಸಿ ಅವರಿಗೆ ಮಾಸಾಶನ ನೀಡುವ ಕಾರ್ಯ ಪ್ರಾರಂಭವಾಯಿತು. ಅನೇಕ ಅಡೆ-ತಡೆಗಳ ಮಧ್ಯೆ ಮಾಸಾಶ‌ನ ಪಡೆಯುತ್ತಿದ್ದ ಎಂಡೋ ಸಂತ್ರಸ್ತರು ಇದೀಗ ಆದೂ ಸಿಗದೆ ಹೈರಾಣಾರಾಗಿದ್ದಾರೆ.

184 ಮಂದಿಗೆ ಮಾಸಾಶನ ಇಲ್ಲ
2019ನೇ ಜುಲೈ ತಿಂಗಳಿನಿಂದ ಜಿಲ್ಲೆಯ 2,600 ಸಂತ್ರಸ್ತರ ಪೈಕಿ 184 ಜನರಿಗೆ ಮಾಸಾಶನ ಇಲ್ಲ. ಈ ಪೈಕಿ ಕಡಬ ತಾಲೂಕಿನ ಆಲಂಕಾರು ಭಾಗದ ಎಂಡೋ ಪೀಡಿತರ ಸಂಖ್ಯೆ 84. ಸರಕಾರ ಕೊಟ್ಟರೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಈಗ ಸರಕಾರದ ಮಾಸಾಶ‌ನವನ್ನೇ ನಂಬಿ ಬದುಕುತ್ತಿರುವ ಎಂಡೋಸಂತ್ರಸ್ತರ ಬಾಳಿನಲ್ಲಿ ಮತ್ತೆ ಕತ್ತಲೆ ಆವರಿಸಲು ಪ್ರಾರಂಭವಾಗಿದೆ. ಈ ಎಂಡೋಸಂತ್ರಸ್ತರ ಬಗ್ಗೆ ಸರಕಾ ರಕ್ಕೆ ಮತ್ತು ಅಧಿಕಾರಿಗಳಿಗೆ ಎಷ್ಟು ಕಾಳಜಿ ಇದೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆ ಇದೆ. 18 ತಿಂಗಳ ಹಿಂದೆ ಹೋರಾಟಗಾರರ ಒತ್ತಾಯಕ್ಕೆ ಮಣಿದು ಜಿಲ್ಲೆಯಲ್ಲಿ 360 ಎಂಡೋ ಪೀಡಿತರನ್ನು ಗುರುತಿಸಿ ಮಾನವ ಹಕ್ಕುಗಳ ಆಯೋಗಕ್ಕೆ ವರದಿಯನ್ನು ಕೊಡಲಾಗಿದೆ. ಆದರೆ ಇದುವರೆಗೆ ಅದನ್ನು ಮಾನ್ಯ ಮಾಡಿಲ್ಲ. ಅವರಿಗೆ ಮಾಸಾಶನಕ್ಕೆ ವ್ಯವಸ್ಥೆ ಮಾಡಿಲ್ಲ.

ಖಾತೆಗೆ ಹಣ ಜಮೆ
ರಾಜ್ಯದಲ್ಲಿ ಉತ್ತರ ಕನ್ನಡ, ದ.ಕ. ಹಾಗೂ ಉಡುಪಿ ಜಿಲ್ಲೆಗಳನ್ನೊಳಗೊಂಡಂತೆ 8,500 ಸಂತ್ರಸ್ತರನ್ನು ಗುರುತಿಸಲಾಗಿದೆ. ಈ ಪೈಕಿ 6,200 ಜನರಿಗೆ ಮಾಸಾಶನ ನೀಡಲು ಉಚ್ಚನ್ಯಾಯಾಲಯ ಆದೇಶ ನೀಡಿದೆ. ಜಿಲ್ಲೆಯಲ್ಲಿ ಒಟ್ಟು 3,612 ಎಂಡೋ ಸಂತ್ರಸ್ತರನ್ನು ಗುರುತಿಸಿದ್ದರೂ, ಅವರಲ್ಲಿ 2,600 ಜನರಿಗೆ ಮಾತ್ರ ಮಾಸಾಶನ ಕೊಡುವ ವ್ಯವಸ್ಥೆಯಾಗುತ್ತಿದೆ. ಇನ್ನುಳಿದಂತೆ 800 ಜನರಿಗೆ ಕೇವಲ ಸ್ಮಾರ್ಟ್‌ ಕಾರ್ಡ್‌ ನೀಡಿ ಬಸ್‌ ಪಾಸ್‌ ನೀಡಲಾಗಿದೆ. ಅವರಿಗೆ ಯಾವುದೇ ಮಾಸಾಶನ ನೀಡಲಾಗುತ್ತಿಲ್ಲ. ಈ ಹಿಂದೆ ಜಿಲ್ಲಾಧಿಕಾರಿಗಳ ಮುಖಾಂತರ ಎಂಡೋ ಪೀಡಿತರ ಖಾತೆಗೆ ಮಾಸಾಶನ ಹಣ ಜಮೆಯಾಗುತ್ತಿತ್ತು. ಆದರೆ ಇತ್ತೀಚೆಗೆ ರಾಜ್ಯ ಸರಕಾರದಿಂದ ನೇರವಾಗಿ ಸಂತ್ರಸ್ತರಿಗೆ ದೊರೆಯಬೇಕೆನ್ನುವ ಉದ್ದೇಶದಿಂದ ತಂತ್ರಾಂಶವನ್ನು ಅಳವಡಿಸಲಾಗುತ್ತಿದೆ. ಈ ಸಂದರ್ಭದಲ್ಲಿ ದಾಖಲಾತಿಗಳ ಅಂಶಗಳನ್ನು ಸೇರ್ಪಡೆ ಮಾಡುವಾಗ ತಡವಾಗುತ್ತಿದೆ ಎನ್ನುವ ವಿಚಾರವನ್ನು ಅಧಿಕಾರಿಗಳು ತಿಳಿಸುತ್ತಾರೆ. ಸಂತ್ರಸ್ತರು ಕೆಳಹಂತದ ಅಧಿಕಾರಿಗಳಲ್ಲಿ ಈ ಬಗ್ಗೆ ವಿಚಾರಿಸಿದರೆ ಅವರಿಂದ ಮೇಲಾಧಿಕಾರಿಗಳಿಗೆ ಕೇಳಿ ಎನ್ನುವ ಸಿದ್ಧ ಉತ್ತರ ಸಿಗುತ್ತದೆ.

ಗಮನ ಸೆಳೆದ ಮಾಧ್ಯಮಗಳು
2010ಕ್ಕೂ ಮುನ್ನ ಎಂಡೋ ಸಂತ್ರಸ್ತರನ್ನು ಗುರತಿಸುವ ಕಾರ್ಯ ನಡೆದಿರಲಿಲ್ಲ. ವಿಕಲಾಂಗ ಚೇತನರು ಎಂದು ಕೆಲವರನ್ನು ಗುರತಿಸಿ ಜುಜುಬಿ ಮಾಸಾಶನ ನೀಡಲಾಗುತ್ತಿತ್ತು. ಎಂಡೋ ಸಂತ್ರಸ್ತರು ಎಂದು ಗುರುತಿಸಿ ಸೂಕ್ತ ಪರಿಹಾರ ನೀಡಬೇಕು ಎನ್ನುವ ಹೋರಾಟ ನಡೆಯುತ್ತಿತ್ತು. ಮಾಧ್ಯಮಗಳು ಕೂಡ ಈ ವಿಚಾರದಲ್ಲಿ ನಿರಂತರ ವರದಿಗಳನ್ನು ಪ್ರಕಟಿಸಿ ಸಂಬಂಧಪಟ್ಟವರ ಗಮನ ಸೆಳೆಯುವ ಪ್ರಯತ್ನ ಮಾಡಿತ್ತು. ಅಂದು ವಿಧಾನಪರಿಷತ್‌ ಸದಸ್ಯೆಯಾಗಿದ್ದ ಶೋಭಾ ಕರಂದ್ಲಾಜೆ ಈ ವಿಚಾರದ ಕುರಿತು ಆಸಕ್ತಿ ವಹಿಸಿ ರಂಗಕ್ಕಿಳಿದರು. ಬೆಳ್ತಂಗಡಿ ತಾಲೂಕಿನ ಕೊಕ್ಕಡ, ಪಟ್ರಮೆ, ನಿಡ್ಲೆ ಮುಂತಾದ ಭಾಗಗಳ‌ಲ್ಲಿ ಸಂಚಾರ ಮಾಡಿ ಎಂಡೋ ಸಂತ್ರಸ್ತರಲ್ಲಿ ಆಶಾಭಾವನೆಯನ್ನು ಮೂಡಿಸಿದರು. ಸರಕಾರದ ಮಟ್ಟದಲ್ಲಿ ಪರಿಹಾರ ಕೊಡಿಸುವ ಕಾರ್ಯಕ್ಕೆ ಮುಂದಾದರು. ಅವರ ಅಹವಾಲನ್ನು ಗಂಭೀರವಾಗಿ ಪರಿಗಣಿಸಿದ ಅಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಜನರ ಅಹವಾಲುಗಳಿಗೆ ಸ್ಪಂದಿಸಿದ್ದರು.

Advertisement

50 ಸಾವಿರ ರೂ. ಪರಿಹಾರ
2010 ಫೆಬ್ರವರಿ 28ರಂದು ಮುಖ್ಯಮಂತ್ರಿ ಕೊಕ್ಕಡಕ್ಕೆ ಬಂದು 211 ಜನರಿಗೆ ತಲಾ 50,000 ರೂ. ಪರಿಹಾರ ಹಾಗೂ ಶೇ. 60ಕ್ಕಿಂತ ಹೆಚ್ಚು ಅನಾರೋಗ್ಯ ಪೀಡಿತರಿಗೆ ತಿಂಗಳಿಗೆ 3 ಸಾವಿರ ರೂ. ಹಾಗೂ ಶೇ. 25ರಿಂದ 60ರ ಒಳಗೆ ಅನಾರೋಗ್ಯ ಪೀಡಿತರಿಗೆ 1,500 ರೂ. ಮಾಸಾಶನ ನೀಡಿದರು. ಆ ಸಂದರ್ಭದಲ್ಲಿ ಆಲಂಕಾರು ಗ್ರಾಮದ ರಾಜೀವಿ ಪೂಜಾರಿ ಕುಟುಂಬಕ್ಕೆ ಕೂಡಾ ಪರಿಹಾರ ಹಾಗೂ ಮಾಸಾಶನ ದೊರೆಯಿತು. ಬಳಿಕ ರಾಜ್ಯದ ಉಳಿದ ಜಿಲ್ಲೆಗಳಲ್ಲೂ ಎಂಡೋ ಸಂತ್ರಸ್ತರು ಇದ್ದಾರೆ ಎನ್ನುವುದನ್ನು ಅರಿತ ಎಂಡೋ ಹೋರಾಟಗಾರ ಶ್ರೀಧರ ಗೌಡ ಕೊಕ್ಕಡ ರಾಜ್ಯಾದ್ಯಂತ ಇರುವ ಎಂಡೋ ಸಂತ್ರಸ್ತರನ್ನು ಗುರತಿಸಬೇಕೆಂದು ಕಾರ್ಡ್‌ ಚಳವಳಿ ಮಾಡಿದರು. ಅದನ್ನು ಗಮನಿಸಿದ ಅಂದಿನ ಜಗದೀಶ್‌ ಶೆಟ್ಟರ್‌ ಸರಕಾರ ಅಹವಾಲು ಮನ್ನಿಸಿ ಸಮೀಕ್ಷೆಗೆ ಆದೇಶ ನೀಡಿದರು. ಅದರ ಪರಿಣಾಮವೇ ರಾಜ್ಯದಲ್ಲಿ 8,500 ಜನ ಸಂತ್ರಸ್ತರನ್ನು ಗುರುತಿಸಲಾಯಿತು.

ಶೀಘ್ರ ಸರಿಪಡಿಸಲಾಗುವುದು
ಎಂಡೋ ಸಂತ್ರಸ್ತರಿಗೆ ಮಾಸಾಶನ ದೊರೆಯದ ಬಗ್ಗೆ ಜಿಲ್ಲಾಧಿಕಾರಿಗಳು ಈಗಾಗಲೇ ಅಧಿಕಾರಿಗಳ ಸಭೆ ಕರೆದಿದ್ದಾರೆ. ನಾವು ಜಿಲ್ಲೆಯಿಂದ ಪಾವತಿ ಮಾಡಿದ್ದೇವೆ. ಈಗ ಇ-ಪೇಮೆಂಟ್‌ ವ್ಯವಸ್ಥೆ ಇರುವುದರಿಂದ ಸಮಸ್ಯೆಯಾಗಿದೆ. ತೊಂದರೆಯನ್ನು ಶೀಘ್ರ ಸರಿಪಡಿಸಲಾಗುವುದು.
– ಮಾಧವ ಹೆಗ್ಡೆ, ಸಹಾಯಕ ರಿಜಿಸ್ಟ್ರಾರ್‌, ಜಿಲ್ಲಾ ಟ್ರೆಜರಿ

5 ಲಕ್ಷ ರೂ. ಪರಿಹಾರ ನೀಡಿ
ಎಂಡೋ ಸಂತ್ರಸ್ತರಲ್ಲಿ ಕ್ಯಾನ್ಸರ್‌ ಪೀಡಿತರಿಗೆ ಒಂದೇ ಕಂತಿನಲ್ಲಿ 5 ಲಕ್ಷ ರೂ. ಪರಿಹಾರ ನೀಡಬೇಕು. ಬಂಜೆತನ ಇರುವವರಿಗೆ ಮಾಸಾಶನ ನೀಡಬೇಕು. ಮುಂದಿನ ಹೋರಾಟದ ಬಗ್ಗೆ ಶೀಘ್ರದಲ್ಲಿ ಸಭೆ ನಡೆಸಿ ನಿರ್ಧರಿಸಲಾಗುವುದು.
– ಶ್ರೀಧರ ಗೌಡ ಕೊಕ್ಕಡ, ಎಂಡೋ ಹೋರಾಟಗಾರ

 2010ರಿಂದ ಮಾಸಾಶನಕ್ಕೆ ಗುರುತಿನ ಕಾರ್ಯ ಆರಂಭ
 ರಾಜ್ಯದಲ್ಲಿ 8,500 ಮಂದಿಯ ಗುರುತು
 ಜಿಲ್ಲೆಯ 3,162 ಮಂದಿಯ ಪೈಕಿ ಜಿಲ್ಲೆಯ 2,416 ಮಂದಿಗೆ ಮಾಸಾಶನ ಜಾರಿ
 800 ಮಂದಿಗೆ ಸ್ಮಾರ್ಟ್‌ ಕಾರ್ಡ್‌ ನೀಡಿ ಬಸ್‌ ಪಾಸ್‌ ವ್ಯವಸ್ಥೆ

ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next