Advertisement

ಜೂ. 19: ಎಂಡೋ ಪರಿಹಾರ ಸಭೆ

02:26 AM Jun 16, 2017 | Team Udayavani |

ಬೆಂಗಳೂರು: ಎಂಡೋ ಸಲ್ಫಾನ್‌ ಪೀಡಿತರ ಪರಿಹಾರ ಕುರಿತು ಚರ್ಚಿಸಲು ಮಂಗಳೂರು ಜಿಲ್ಲಾಧಿ ಕಾರಿಗಳ ಕಚೇರಿ ಸಭಾಂಗಣದಲ್ಲಿ ಜೂ. 19ರಂದು ಬೆಳಗ್ಗೆ 10.30ಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರು, ಶಾಸಕರು ಹಾಗೂ ವಿಧಾನಪರಿಷತ್‌ ಸದಸ್ಯರ ಸಭೆ ಕರೆಯಲಾಗಿದೆ ಎಂದು ಆರೋಗ್ಯ ಸಚಿವ ಕೆ.ಆರ್‌. ರಮೇಶ್‌ಕುಮಾರ್‌ ತಿಳಿಸಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಶೂನ್ಯ ವೇಳೆಯಲ್ಲಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿಯವರು ಪ್ರಸ್ತಾವಿಸಿದ ವಿಷಯಕ್ಕೆ ಉತ್ತರಿಸಿದ ಆರೋಗ್ಯ ಸಚಿವರು, ಎಂಡೋ ಪೀಡಿತರಿಗೆ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸುವಲ್ಲಿ ಸರಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದರು.

Advertisement

ಕರ್ನಾಟಕ ಗೇರು ಅಭಿವೃದ್ಧಿ ನಿಗಮದವರು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗೇರು ತೋಪುಗಳಿಗೆ 1980ರಿಂದ 2001ರ ಅವಧಿಯಲ್ಲಿ ಎಂಡೋ ಕ್ರಿಮಿನಾಶಕ ಸಿಂಪಡಣೆ ಮಾಡಿದ್ದರಿಂದ ಆ ಭಾಗದ ಜನ ವಿಶೇಷ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅದರಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ 1,835, ದಕ್ಷಿಣ ಕನ್ನಡದಲ್ಲಿ 3,601 ಹಾಗೂ ಉಡುಪಿಯಲ್ಲಿ 1,514 ಸಹಿತ ಮೂರು ಜಿಲ್ಲೆಗಳಲ್ಲಿ ಒಟ್ಟು 6,950 ಎಂಡೋ ಪೀಡಿತರಿದ್ದು, ಇವರೆಲ್ಲರಿಗೂ ಗುರುತಿನ ಚೀಟಿ ವಿತರಿಸಲಾಗಿದೆ.

ಹೈಕೋರ್ಟ್‌ ಆದೇಶದಂತೆ ಶೇ. 25ರಿಂದ 60 ಅಂಗವಿಕಲರೆಂದು ಗುರುತಿಸಲ್ಪಟ್ಟವರಿಗೆ ಮಾಸಿಕ 1,500 ರೂ. ಶೇ. 60 ಮೇಲ್ಪಟ್ಟು ಅಂಗವಿಕಲರೆಂದು ಗುರುತಿಸಿದವರಿಗೆ ಮಾಸಿಕ 3 ಸಾವಿರ ರೂ. ನೀಡಲಾಗುತ್ತಿದೆ. ಬೆಳ್ತಂಗಡಿ, ಸುಳ್ಯ, ಪುತ್ತೂರು, ಬಂಟ್ವಾಳ ಹಾಗೂ ಮಂಗಳೂರಿನ ತಾಲೂಕು ಆಸ್ಪತ್ರೆಗಳಲ್ಲಿ 2017ರ ಫೆಬ್ರವರಿಯಿಂದ ಫಿಸಿಯೋಥೆರಪಿ ಕೇಂದ್ರ ತೆರೆಯಲಾಗಿದೆ. ವಿಟ್ಲ, ಬೆಳ್ಳಾರೆ, ಬೆಳ್ತಂಗಡಿ, ಪುತ್ತೂರಿನಲ್ಲಿ 2017ರ ಮಾರ್ಚ್‌ನಿಂದ ಸಂಚಾರಿ ಆರೋಗ್ಯ ಘಟಕಗಳನ್ನು ಸ್ಥಾಪಿಸಲಾಗಿದೆ. ಉಜಿರೆಯ ಕೆಎಫ್ಡಿ ಆಸ್ಪತ್ರೆ ಕಟ್ಟಡದಲ್ಲಿ ಎಂಡೋ ಪೀಡಿತರಿಗೆ ಕೌಶಲ ತರಬೇತಿ ಕೇಂದ್ರ ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಸಚಿವ ರಮೇಶ್‌ಕುಮಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next