Advertisement

ಕ್ಯಾತಗಾನಹಳ್ಳಿಯಲ್ಲಿ ಸಮಸ್ಯೆಗಳಿಗಿಲ್ಲ ಕೊನೆ

04:19 PM Feb 10, 2020 | Suhan S |

ಪಾವಗಡ: ತಾಲೂಕಿನ ನಿಡಗಲ್‌ ಹೋಬಳಿಯ ವದನಕಲ್‌ ಗ್ರಾಮ ಪಂಚಾಯಿತಿಗೆ ಸೇರಿದ ಕ್ಯಾತಗಾನಹಳ್ಳಿಯಲ್ಲಿ ನೀರಿಗಾಗಿ ಗ್ರಾಮಸ್ಥರು ಪರದಾಡುವ ಸ್ಥಿತಿ ಎದುರಾಗಿದೆ.

Advertisement

1500ಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮದಲ್ಲಿ ಕೆಲ ತಿಂಗಳಿಂದ ನೀರಿನ ಸಮಸ್ಯೆ ಬಿಗಡಾಯಿಸಿದ್ದು, ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಕೊಟ್ಟರೂ ಪ್ರಯೋಜನವಿಲ್ಲದಾಗಿದೆ. ಕುಡಿಯಲು ನೀರು ಸಿಗದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದೇವೆ. ನೀರಿಗಾಗಿ ಪಕ್ಕದ ಊರು ಅವಲಂಬಿಸುವಂತಾಗಿದೆ. ನೀರಿನ ಸಮಸ್ಯೆ ಬಿಗಾಡಿಯಿಸಲು ಗ್ರಾಪಂ ಪಿಡಿಒ, ನೀರುಗಂಟಿ ನಿರ್ಲಕ್ಷ್ಯವೇ ಕಾರಣವಾಗಿದ್ದು, ಸಮರ್ಪಕ ಕುಡಿಯುವ ನೀರಿನ ಸೌಲಭ್ಯ ಒದಗಿಸುವಂತೆ ಸಾಕಷ್ಟು ಬಾರಿ ಅಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ. ಮನವಿ ಸ್ವೀಕರಿಸುತ್ತಾರೆ ಹೊರತು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಗ್ರಾಮದ ನಾಗರಾಜು ಅಸಮಾಧಾನ ವ್ಯಕ್ತಪಡಿಸಿದರು.

ಮೂಲ ಸೌಲಭ್ಯ ಕೊರತೆ: ಗ್ರಾಮದಲ್ಲಿ ವಿದ್ಯುತ್‌, ಒಳಚರಂಡಿ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಒಳಚರಂಡಿ ವ್ಯವಸ್ಥೆಯೇ ಸರಿ ಇಲ್ಲ. ಚರಂಡಿ ಸ್ವತ್ಛ ಮಾಡಿ ವರ್ಷಗಳೆ ಕಳೆದಿವೆ. ಇದರಿಂದ ದುರ್ವಾಸನೆ ಬೀರುತ್ತಿದೆ. ಗ್ರಾಪಂ ಅಧಿಕಾರಿಗಳು ತಮಗೂ ಗ್ರಾಮದ ಸಮಸ್ಯೆಗೂ ಯಾವುದೇ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಚರಂಡಿ ಸ್ವತ್ಛತೆಯಿಲ್ಲದೆ ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳ ಭೀತಿಯೂ ಎದುರಾಗಿದೆ. ಕೆಲ ತಿಂಗಳ ಹಿಂದೆ ಡೆಂಗ್ಯೂ ಜ್ವರ ಬಂದು 1 ಲಕ್ಷ ರೂ. ಖರ್ಚ ಮಾಡಿದ್ದೇನೆ ಎಂದು ಗ್ರಾಮದ ನಾಗಭೂಷಣ್‌ ತಿಳಿಸಿದರು.

ಗ್ರಾಮದಲ್ಲಿ 8 ಕೊಳವೆ ಬಾವಿಗಳಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ನೀರಿನ ಸಮಸ್ಯೆ ಉಂಟಾಗಿದೆ. ಅಧಿಕಾರಿಗಳು ನೀರು ಇರುವ 5 ಕೊಳವೆಬಾವಿಗಳಿಗೆ ಮೋಟರ್‌, ಪಂಪ್‌,ಪೈಪ್‌ ಅಳವಡಿಸಲು ಮೀನಮೇಷ ಎಣಿಸುತ್ತಿದ್ದಾರೆ. ಅನೇಕ ಬಾರಿ ಮೋಟರ್‌ಗೆ ಬಿಲ್‌ ಮಾಡಿದ್ದರೂ ಕೊಳವೆ ಬಾವಿಗಳಿಗೆ ಅಳವಡಿಸಿಲ್ಲ. 3 ಕೊಳವೆ ಬಾವಿಗಳಿಗೆ ಮೋಟರ್‌ ಇದ್ದರೂ ನೀರುಗಂಟಿ ಕೇವಲ ಒಂದು ಕೊಳವೆ ಬಾವಿಯಿಂದ ನೀರು ಬಿಡುತ್ತಿದ್ದಾನೆ. ಕೇಳಿದರೆ “ಹಲವಾರು ತಿಂಗಳನಿಂದ ಸಂಬಳ ಕೊಟ್ಟಿಲ್ಲ. ಅದಕ್ಕಾಗಿ ನೀರು ಬಿಟ್ಟಿಲ್ಲ’ ಎಂದು ಹೇಳುತ್ತಾರೆ. ಗ್ರಾಮದಲ್ಲಿ ಸಿ.ಸಿ ರಸ್ತೆಗಳ ಪರಿಸ್ಥಿತಿ ನೋಡಿದರೆ ಅಧಿಕಾರಿಗಳ ನಿರ್ಲಕ್ಷ್ಯ ಎಷ್ಟಿದೆ ಎಂಬುದು ತಿಳಿಯುತ್ತದೆ. ಚುನಾವಣೆ ಸಮಯದಲ್ಲಿ ಬರುವ ರಾಜಕೀಯ ಮುಖಂಡರು ಬಳಿಕ ಇತ್ತ ಕಡೆ ತಲೆಯೂ ಹಾಕುವುದಿಲ್ಲ. ಈವರೆಗೆ ಜನಪ್ರತಿನಿಧಿಗಳು ಗ್ರಾಮಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಲು ಮನಸ್ಸು ಮಾಡಿಲ್ಲ ಎಂದು ಗ್ರಾಮದ ಯುವ ಮುಖಂಡ ಚಂದ್ರಶೇಖರ್‌ಗೌಡ ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next