ಜಾಲಹಳ್ಳಿ: ದೇವದುರ್ಗ ತಾಲೂಕಿನಲ್ಲಿ ಮುಂಗಾರು ಮತ್ತು ಹಿಂಗಾರಿ ಮಳೆ ಕೈಕೊಟ್ಟ ಪರಿಣಾಮ ಸಮರ್ಪಕ ಬೆಳೆ ಬಾರದೇ ಬರ ಪರಿಸ್ಥಿತಿ ಎದುರಾಗಿದೆ. ಕೃಷಿ ಕೂಲಿ ಕಾರ್ಮಿಕರು, ಸಣ್ಣ ರೈತರಿಗೆ ಕೆಲಸವಿಲ್ಲದಂತಾಗಿದೆ. ಹೀಗಾಗಿ ತಾಲೂಕಿನ ಹಳ್ಳಿ, ದೊಡ್ಡಿಗಳ ಕೃಷಿ ಕಾರ್ಮಿಕರು ಕೂಲಿ ಅರಸಿ ಗುಳೆ ಹೋಗುವುದು ಸಾಮಾನ್ಯವಾಗಿದೆ.
2009ರಲ್ಲಿ ಅತೀವೃಷ್ಟಿ, ಅನಾವೃಷ್ಟಿಯಿಂದ ಆರಂಭಗೊಂಡ ಪ್ರಕೃತಿಯ ಮುನಿಸು ದಶಕ ಕಳೆದರೂ ಮುಗಿಯುತ್ತಿಲ್ಲ. ಪ್ರತಿ ವರ್ಷ ಸಮರ್ಪಕ ಮಳೆ ಸುರಿಯದೇ ಬರ ಸೃಷ್ಟಿಯಾದರೆ ಕೆಲವೊಮ್ಮೆ ವಿಪರೀತ ಮಳೆ ಸುರಿದು ಅತೀವೃಷ್ಟಿ ಉಂಟಾಗಿ ರೈತರು ಬೆಳೆ ಹಾನಿ ಅನುಭವಿಸುವಂತಾಗಿದೆ. ದಶಕದಿಂದ ರೈತರು ಒಂದಲ್ಲ ಒಂದು ಸಂಕಷ್ಟ ಅನುಭವಿಸುತ್ತಲೇ ಬರುತ್ತಿದ್ದಾರೆ. ಈ ವರ್ಷವೂ ಮುಂಗಾರು ಹಾಗೂ ಹಿಂಗಾರು ಎರಡು ಮಳೆ ಕೈಕೊಟ್ಟಿರುವುದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಸರಕಾರ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿದೆ. ಆದರೆ ಈವರೆಗೆ ಸರಕಾರ ಬರ ಪರಿಹಾರ ಕಾಮಗಾರಿ ಆರಂಭಿಸಿಲ್ಲ.
ಹೀಗಾಗಿ ಸಣ್ಣ ರೈತರು, ಕೂಲಿಕಾರರ ಕೈಗೆ ಕೆಲಸವಿಲ್ಲದಂತಾಗಿ ಗುಳೆ ಹೋಗುತ್ತಿದ್ದಾರೆ. ಹಳ್ಳಿ, ದೊಡ್ಡಿಗಳ ಸಣ್ಣ ರೈತರು, ಕೃಷಿ ಕೂಲಿ ಕಾರ್ಮಿಕರು ಬದುಕಿನ ಬಂಡಿ ಸಾಗಿಸಲು ದೂರದ ಬೆಂಗಳೂರು, ಮುಂಬಯಿ, ಪುಣೆ, ಮಂಗಳೂರು, ಕಾರವಾರ, ಗೋವಾ ಸೇರಿದಂತೆ ಮಹಾನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ದೂರದ ನಗರಗಳಿಗೆ ಹೋಗುವ ಕಾರ್ಮಿಕರು ಸಂಜೆಯಾಗುತ್ತಿದ್ದಂತೆ ಬಸ್ ನಿಲ್ದಾಣಗಳಲ್ಲಿ ಗುಂಪು ಗುಂಪಾಗಿ ಕಂಡುಬರುತ್ತಿದ್ದಾರೆ. ಹೀಗಾಗಿ ಕೆಲ ಹಳ್ಳಿಗಳು ಜನರಿಲ್ಲದೇ ಬಿಕೋ ಎನ್ನುತ್ತಿವೆ. ವೃದ್ಧರು ಮಾತ್ರ ಕಾಣಸಿಗುತ್ತಿದ್ದಾರೆ.
ಸಾಲ ಮನ್ನಾ ಕಿರುಕುಳ: ಹತ್ತಾರು ಸಮಸ್ಯೆಗಳಿಂದ ಬಳಲುತ್ತಿರುವ ಕೃಷಿಕರು ಬೆಳೆ ಸಾಲ ತೀರಿಸಲಾಗದೇ ಒದ್ದಾಡುತ್ತಿದ್ದಾರೆ. ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಪಡೆದ ಸಾಲವನ್ನು ಸರಕಾರ ಮನ್ನಾ ಮಾಡಿ ಆದೇಶ ಹೊರಡಿಸಿದೆ. ಆದರೆ ಸಾಲ ಮನ್ನಾಕ್ಕೆ ಹಲವು ಶರತ್ತು ವಿಧಿಸಿದ್ದರಿಂದ ಕೆಲ ರೈತರು ಸಾಲ ಮನ್ನಾ ಯೋಜನೆಯಿಂದ ವಂಚಿತರಾಗುವಂತಾಗಿದೆ ಎನ್ನುತ್ತಾರೆ ರೈತರು. ಸಾಲಮನ್ನಾ ಯೋಜನೆ ವ್ಯಾಪ್ತಿಗೊಳಪಡದ ರೈತರಿಗೆ ಬ್ಯಾಂಕ್‌ಗಳು ಸಾಲ ಪಾವತಿಗೆ ಕಿರುಕುಳ ನೀಡುತ್ತಿದ್ದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ನೆರವಿಗೆ ಬಾರದ ಉದ್ಯೋಗ ಖಾತ್ರಿ: ಜನರು ಗುಳೆ ಹೋಗುವುದನ್ನು ತಪ್ಪಿಸಲು ಕೇಂದ್ರ ಸರಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಆರಂಬಿಸಿದೆ. ಆದರೆ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ತಾಲೂಕಿನಲ್ಲಿ ಒಂದೆರಡು ಗ್ರಾಮ ಪಂಚಾಯಿತಿಗಳನ್ನು ಹೊರತುಪಡಿಸಿದರೆ ಬಹುತೇಕ ಗ್ರಾಮ ಪಂಚಾಯತಿಗಳಲ್ಲಿ ಜನರಿಗೆ ಸಮರ್ಪಕವಾಗಿ ಕೆಲಸ ನೀಡುತ್ತಿಲ್ಲ. ಕೆಲ ಗ್ರಾಮ ಪಂಚಾಯತಿಗಳಲ್ಲಿ ಕೆಲಸ ನೀಡಿದರೂ ಅದು ಗುಡ್ಡಗಳಲ್ಲಿ ತೆಗ್ಗು ತೋಡುವಂತಹ ಗಟ್ಟಿ ಕೆಲಸಕ್ಕೆ ಹಚ್ಚುತ್ತಿದ್ದಾರೆ. ಇದರಿಂದ ಕೆಲಸಕ್ಕೆ ಹೋದರೂ ಕೂಲಿ ಬೀಳುತ್ತಿಲ್ಲ ಎಂದು ರೈತ ಕೂಲಿಕಾರರು ಅಳಲು ತೋಡಿಕೊಂಡಿದ್ದಾರೆ. ಬರಕ್ಕೆ ನಲುಗಿದ ರೈತ ಕೂಲಿಕಾರರ ಕುಟುಂಬಗಳು ಸಂಸಾರ ನಿರ್ವಹಣೆಗೂ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಗ್ರಾಮೀಣ ಭಾಗದ ಕೂಲಿಕಾರರು ಕುಟುಂಬ ಸಮೇತ ಮಕ್ಕಳು, ಮರಿಗಳೊಂದಿಗೆ ಗುಳೆ ಹೋಗುತ್ತಿರುವುದು ಸಾಮಾನ್ಯವಾಗಿದೆ.
ಕೂಡಲೇ ಸರಕಾರ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಬೇಕು. ಬರ ಪರಿಹಾರ ಕಾಮಗಾರಿ ಆರಂಭಿಸಿ ಕೂಲಿಕಾರರಿಗೆ ಕೆಲಸ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ಸಮರ್ಪಕವಾಗಿ ಕೆಲಸ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಬರಗಾಲದ ಹಿನ್ನೆಲೆಯಲ್ಲಿ ಎನ್‌ಆರ್‌ಇಜಿ ಯೋಜನೆಯಡಿ ಕುಟುಂಬಕ್ಕೆ ಕೆಲಸದ ದಿನಗಳನ್ನು 100ರಿಂದ 150ಕ್ಕೆ ಹೆಚ್ಚಿಸಲಾಗಿದೆ. ಕೆಲಸ ಕೇಳಿದ ಕೂಲಿಕಾರರೆಲ್ಲರಿಗೂ ಕೆಲಸ ನೀಡಲಾಗುತ್ತಿದೆ. ಜನರು ಗುಳೆ ಹೋಗುವುದನ್ನು ತಡೆಯಲು ಪ್ರಚಾರ ಕೈಗೊಳ್ಳಲಾಗುತ್ತಿದೆ. ಕೆಲಸ ನೀಡಲು ವಿಳಂಬ ಮಾಡಿದ್ದು ಗಮನಕ್ಕೆ ಬಂದರೆ ತಕ್ಷಣ ಕ್ರಮ ಕೈಗೊಳ್ಳುವೆ.
• ಹಾಲಸಿದ್ದಪ್ಪ ಪೂಜೇರಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ, ದೇವದುರ್ಗ
ಮಳೆ ಇಲ್ಲ, ಬೆಳೆ ಇಲ್ಲ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ನೀಡಲು ಅನಗತ್ಯ ವಿಳಂಬ ಮಾಡತಾರ್ರಿ. ಕೆಲಸ ಮಾಡಿದರೂ ಕೂಲಿ ಜಲ್ದಿ ಬರಲ್ರಿ. ಇದರಿಂದ ಕುಟುಂಬ ನಿರ್ವಹಣೆಗೆ ತೊಂದರೆಯಾಗುತ್ತಿದೆ. ಆದ್ದರಿಂದ ಮನೆಯಲ್ಲಿ ಮಕ್ಕಳು, ವೃದ್ಧರನ್ನು ಬಿಟ್ಟು ಕುಟುಂಬ ಸಮೇತ ದುಡಿಯಲು ಬೆಂಗಳೂರಿಗೆ ಹೋಗತಿವ್ರಿ.
•ದುರಗಪ್ಪ ಕೂಲಿಕಾರ ಸಂಪತರಾಯನ ದೊಡ್ಡಿ