Advertisement
ಆಳ ಕಡಲೊಳಗೂ ಪರ್ವತಗಳಿವೆ. ಸಾಗರಜೀವಿಗಳ ವಸಾಹತುಗಳಿವೆ. ಅವುಗಳ ನಾಗರಿಕತೆಗಳಿವೆ. ಕಣಿವೆಗಳೂ, ಕೊಳ್ಳಗಳೂ, ಕೊರಕುಗಳೂ, ಗುಹೆಗಳೂ, ಗೋಡೆಗಳೂ ಇಳಿಜಾರುಗಳೂ ಇವೆ. ನಮ್ಮ ಹಾಗೆಯೇ ಭಾವಿಸುವ, ಮಹಾತ್ವಾಕಾಂಕ್ಷೆಗಳಿರುವ, ಸಾಮ್ರಾಜ್ಯಗಳನ್ನು ಸ್ಥಾಪಿಸಲು ಬಯಸುವ ಜಲಚರಗಳಿವೆ. ಕಡಲೊಳಗೇ ಖಂಡಾಂತರ ವಲಸೆ ಹೊರಡುವ ಮತ್ಸ್ಯ ಸಮೂಹಗಳಿವೆ. ನಾಚುಗೆ ಸ್ವಭಾವದ, ರೋಷದ, ಆಕ್ರಮಿಸಿ ಕೊಲ್ಲುವ, ವಿಷಪ್ರಾಶನಗೊಳಿಸಿ, ವಿದ್ಯುತ್ ಹರಿಸಿ ಸಾಯಿಸುವ ವಿವಿಧ ಗುಣಗಳ ಮತ್ಸ್ಯ ಕುಲಗಳಿವೆ. ಇನ್ನೊಂದು ಮತ್ಸ್ಯದ ಆಹಾರವಾಗದೇ ಉಳಿದರೆ ಮನುಷ್ಯರಿಗಿಂತಲೂ ಹೆಚ್ಚು ಆಯಷ್ಯ ಬದುಕಬಲ್ಲ ಮೀನು ತಳಿಗಳೂ ಇವೆ. ಬಹುಶಃ ಇವರಲ್ಲೇ ಕವಿಗಳೂ, ವಿಜ್ಞಾನಿಗಳೂ, ಹಾಡುಗಾರರೂ, ರಾಜಕಾರಣಿಗಳೂ ಸರ್ವಾಧಿಕಾರಿಗಳೂ, ಬಂಡುಕೋರರೂ ಮತ್ತು ಇದು ಯಾವುದೂ ಅಲ್ಲದ ಜನಸಾಮಾನ್ಯ ಅಮಾಯಕ ಮತ್ಸ್ಯಗಳೂ ಇರಬಹುದು. ಅವುಗಳಿಗೆ ಕಡಲೊಳಗೆ ಇಳಿದ ನಮ್ಮ ಕಾಲುಗಳು ವಾಮನನ ಬಲಿಪಾದಗಳಂತೆ ಭಯ ಹುಟ್ಟಿಸುತ್ತಿರಬಹುದು. ಕಡಲ ಬಿಟ್ಟು ಮೇಲೆ ಭೂಮಿಗೆ ಬರುವುದೆಂದರೆ ಅಂತಿಮ ತೀರ್ಪಿನ ಮೊದಲು ಕಳೆಯಬೇಕಾದ ಮರಣಾನಂತರದ ಪ್ರಾಯಶ್ಚಿತ್ತ ಸ್ಥಳಕ್ಕೆ ತೆರಳುವುದು ಎಂಬ ಧಾರ್ಮಿಕ ನಂಬಿಕೆ ಇರುವ ಮೀನುಗಳೂ ಇಲ್ಲಿ ಓಡಾಡುತ್ತಿರಬಹುದು ಎಂದು ಅಂದುಕೊಂಡೇ ಅವುಗಳ ನಡುವೆ ತೇಲುತ್ತಿರುತ್ತೇನೆ. ಹೊರಬಂದರೂ ಕಿವಿಯೊಳಗೆ ಕಡಲೊಳಗಿನ ನೀರು ಸರಿಯುವ ಸದ್ದು. ನೀರಿಂದ ಹೊರಬಂದ ಮೀನಂತೆ ಚಡಪಡಿಸುತ್ತೇನೆ. ನಾನು ಎಲ್ಲಿಂದ ಬಂದೆ? ಯಾಕೆ ಇಲ್ಲಿರುವೆ? ಮುಂದೆಲ್ಲಿ ಎಂಬ ಯಾವುದೂ ತಲೆಯೊಳಗೆ ಸುಳಿಯುವುದಿಲ್ಲ. ಸುಮ್ಮನೇ ತಲೆತಗ್ಗಿಸಿ ನಡೆಯುತ್ತಿರುತ್ತೇನೆ.
Related Articles
Advertisement
ಆತನ ಪೂರ್ವಜರು ಟಿಪ್ಪು ಸುಲ್ತಾನನ ಕಾಲಕ್ಕೂ ಬಹಳ ಹಿಂದೆ ಅಫಘಾನಿಸ್ತಾನದ ಕಂದಹಾರದ ಕಡೆಯಿಂದ ಒಂದಿಷ್ಟು ಕುದುರೆಗಳನ್ನು ಹೊಡೆದುಕೊಂಡು ಮೈಸೂರಿನ ಮಹಾರಾಜರ ಬಳಿ ಕುದುರೆ ವ್ಯಾಪಾರಕ್ಕೆ ಬಂದ ಮುಸಲ್ಮಾನ ಪಠಾಣ ಕುಲದವರು. ಟಿಪ್ಪುವಿನ ಹೊಡೆತದಿಂದ ಮೈಸೂರು ಸಂಸ್ಥಾನ ಕಂಗಾಲಾದಾಗ ಇನ್ನು ಇಲ್ಲಿರುವುದು ಸೂಕ್ತವಲ್ಲ ಎಂದು ಮಧುಗಿರಿಯ ಕಡೆ ಹೊರಟವರು ತಿಪಟೂರಿನ ಬಳಿ ಕೆರೆಯ ದಡದಲ್ಲಿ ತೆಂಗಿನ ತೋಪೊಂದನ್ನು ಜಹಗೀರಿಗೆ ಪಡೆದುಕೊಂಡು ಅಲ್ಲೇ ಉಳಿದು ಬಿಟ್ಟರಂತೆ. ಆ ವಂಶಕ್ಕೆ ಸೇರಿದವನು ಈತ. ಈತನ ತಾತ ಮುತ್ತಾತಂದಿರು ಜಹಗೀರುದಾರರಾಗಿ ದಿಲ್‌ದಾರರಾಗಿ ಬದುಕಿದ್ದವರು. ಆದರೆ, ಈತನಿಗೆ ನೆನಪಿರುವ ಕಾಲದಿಂದ ಬಹಳ ಬಡವರಾಗಿ ಅವರಿವರ ತೋಟಗಳನ್ನು ಭೋಗ್ಯಕ್ಕೆ ಪಡೆದು, ರಾಗಿ-ನವಣೆ ತರಕಾರಿ ಬೆಳೆದು, ಅದೂ ಸಾಲದಾದಾಗ ಜಾನುವಾರುಗಳ ಪಾದಗಳಿಗೆ ಲಾಳ ಹಾಕುವುದು, ಕತ್ತಿ, ಕೊಡಲಿ, ಹಾರೆ, ಪಿಕ್ಕಾಸು ಇತ್ಯಾದಿಗಳನ್ನು ತಯಾರಿಸುವುದು, ಸೈಕಲ್ ಪಂಕ್ಚರ್, ಹಳೇ ಪ್ಲಾಸ್ಟಿಕ್ ಪೇಪರ್ ಇತ್ಯಾದಿ ಕಸುಬುಗಳನ್ನು ಮಾಡಿಕೊಂಡು ದಟ್ಟ ದರಿದ್ರರಾಗಿಬಿಟ್ಟಿದ್ದರು. ಈತನಿಗೆ ಸಣ್ಣದಿನಿಂದಲೂ ಸೈಕಲ್ ಸವಾರಿಯ ಹುಚ್ಚು. ಸೈಕಲ್ ಹತ್ತಿ ಲಂಗುಲಗಾಮಿಲ್ಲದೆ ಊರೂರು ತಿರುಗುವುದು, ಹೋದಲ್ಲಿ ಅಲ್ಲಲ್ಲಿ ತೋಟದ ಕೆಲಸ, ಕೊಟ್ಟಿಗೆಯ ಕೆಲಸ ಮಾಡಿಕೊಂಡು ಒಂದಿಷ್ಟು ಕಾಸು ಮಾಡಿಕೊಂಡು ಮುಂದಿನ ಊರಿಗೆ ತೆರಳುವುದು ಹೀಗೆ ಬದುಕುತ್ತಿದ್ದವನು. ಹಿಂದೂಗಳ ಮನೆಯಲ್ಲಿ ಊಳಿಗ ಮಾಡುವಾಗ ಅವರಿಗೆ ಬೇಕಾಗಿ, “ಶಂಕರ’ ಎಂಬ ಹೆಸರಿಟ್ಟುಕೊಂಡಿದ್ದನಂತೆ. ಮುಸಲ್ಮಾನರ ಮನೆಯಲ್ಲಿ ಅಬ್ದುಲ್ ರಜಾಕ್, ಕ್ರಿಸ್ತರಾದರೆ ಜೋಸೆಫ್ ಹೀಗೆ ನಾನಾ ನಾಮಗಳಿಂದ ಬದುಕುತ್ತಿದ್ದ.
ಆದರೆ, ವಿಧಿಯಾಟ ಎಂಬುದು ಹೇಗಿರುತ್ತದೆ ನೋಡಿ. ಒಮ್ಮೆ ಈತ ಸೈಕಲ್ಲು ಹತ್ತಿ ಧರ್ಮಸ್ಥಳಕ್ಕೆ ತಲುಪಿ ಅಲ್ಲಿಂದ ವಾಪಸು ಬರುವಾಗ ಕೊಟ್ಟಿಗೆಹಾರದ ಬಳಿ ಕತ್ತಲೂ ಆಗಿತ್ತು. ಈತನ ಸೈಕಲ್ಲೂ ಪಂಕ್ಚರಾಗಿತ್ತು. ಹಾಗೇ ಕತ್ತಲಲ್ಲಿ ಏನು ಮಾಡುವುದೆಂದು ತೋಚದೆ ನಿಂತಿದ್ದಾಗ ಕೈಯಲ್ಲೊಂದು ಕತ್ತಿ ಹಿಡಿದು ಅದರ ತುದಿಗೊಂದು ಒಣಗಿದ ತೆಂಗಿನಕಾಯಿಯನ್ನು ಸಿಕ್ಕಿಸಿಕೊಂಡು ಮುಸಲ್ಮಾನರಾದ ಬ್ಯಾರಿಗಳೊಬ್ಬರು ಬರುತ್ತಾರೆ. ನದಿಯಲ್ಲಿ ತೇಲಿಬಂದ ಯಾರದೋ ತೋಟದ ತೆಂಗಿನಕಾಯಿ ಅದು. ಬಂದವರು ಈತನ ಪೂರ್ವಾಪರಗಳನ್ನು ವಿಚಾರಿಸುತ್ತಾರೆ.ವಿಚಾರಿಸಿಕೊಂಡವರು ಈತನನ್ನು ತಮ್ಮ ಮನೆಗೆ ಕರೆದೊಯ್ದು ತಮ್ಮ ತೆಂಗಿನ ತೋಟದಲ್ಲಿ ಕೆಲಸಕ್ಕೆ ಇಟ್ಟುಕೊಳ್ಳುತ್ತಾರೆ. ಈತನಿಗೆ ಮದುವೆಯೂ ಆಗಿಲ್ಲ ಎಂದು ಅರಿತು ತನ್ನ ತಮ್ಮನ ಹೆಂಡತಿಯ ಅಕ್ಕನ ಅನಾಥ ಮಗಳೊಡನೆ ನಿಖಾವನ್ನೂ ಮಾಡಿಸುತ್ತಾರೆ. ನಿಖಾ ಆದರೆ ಪಾಸ್‌ಪೋರ್ಟ್ ಮಾಡಿಸಿ ದುಬೈಯಲ್ಲಿ ಒಂದು ಒಳ್ಳೆಯ ಕೆಲಸ ಹುಡುಕಿಕೊಟ್ಟು ವಿಮಾನದಲ್ಲಿ ಕಳಿಸುವುದಾಗಿ ಆಸೆಯನ್ನೂ ಹುಟ್ಟಿಸಿದ್ದರಂತೆ. ಆದರೆ, ಮದುವೆಯಾಗಿ ನಾಲ್ಕು ವರ್ಷಕ್ಕೆ ಒಂದರ ನಂತರ ಒಂದು ಮೂರು ಮಕ್ಕಳಾದರೂ ದುಬೈಗೆ ಕಳಿಸುವ ವಿಷಯವನ್ನು ಆ ಬ್ಯಾರಿಗಳು ಮರೆತೇಬಿಟ್ಟರಂತೆ. ಕೈಗೂಡದ ದುಬಾಯಿಯ ವಿಮಾನಯಾತ್ರೆ, ಮನೆಯಲ್ಲಿ ಒಂದರ ನಂತರ ಆಗುತ್ತಿರುವ ಮಕ್ಕಳು, ಕಾಲು ಕೆದರಿ ಜಗಳವಾಡುವ ಹೆಂಡತಿ. ನೀವು ಮಾತುಕೊಟ್ಟಂತೆ ದುಬೈಯಿಗೆ ಕಳಿಸದಿದ್ದರೆ ನಿಮ್ಮನ್ನು ಈ ಕತ್ತಿಯಿಂದ ಕಡಿದೇ ಬಿಡುವೆ ಎಂದು ಹೆದರಿಸಿ ಬಿಟ್ಟನಂತೆ.
ಹೆದರಿದ ಬ್ಯಾರಿಗಳು ಇವನು ಹೇಗಾದರೂ ತೊಲಗಿದರೆ ಸಾಕು ಎಂದು ಯಾರೋ ದ್ವೀಪವಾಸಿಗಳನ್ನು ಸಂಪರ್ಕಿಸಿ, ಈತನಿಗೆ ದ್ವೀಪಕ್ಕೆ ತೆರಳುವ ಪರ್ಮಿಟ್ಟನ್ನೂ ಕೊಡಿಸಿ, “”ಮೊದಲು ನೀನು ದ್ವೀಪಕ್ಕೆ ಹೋಗು. ಅಲ್ಲಿಂದ ದುಬಾಯಿ ಬಹಳ ಹತ್ತಿರ. ಅವರು ನಿನ್ನನ್ನು ಇನ್ನೊಂದು ಹಡಗಿನಲ್ಲಿ ದುಬೈಗೆ ಹತ್ತಿಸುತ್ತಾರೆ” ಎಂದು ಯಾಮಾರಿಸಿಬಿಟ್ಟಿದ್ದರು. ಹಾಗೆ ಯಾಮಾರಿದವನು ಈಗ ಅತ್ತ ದುಬೈಯೂ ಇಲ್ಲದೆ, ಇತ್ತ ಕೊಟ್ಟಿಗೆಹಾರವೂ ಇಲ್ಲದೆ, ತಿಪಟೂರಿಗೂ ಹೋಗಲಾರದೆ ಕಳೆದ ಹತ್ತು ವರ್ಷಗಳಿಂದ ದ್ವೀಪವೊಂದರಲ್ಲಿ ಅನಾಥ ಪ್ರೇತದಂತೆ ಸೈಕಲ್ಲು ರಿಪೇರಿ ಮಾಡುತ್ತ ಬದುಕುತ್ತಿ¨ªಾನೆ. ಗಳಿಸಿದ್ದನ್ನೆಲ್ಲ ಉಳಿಸಿ ವರ್ಷಕ್ಕೆ ಒಂದು ಬಾರಿ ಹೆಂಡತಿಯ ಕೈಗಿತ್ತು ವಾಪಸಾಗುತ್ತಾನೆ. ಆಕೆ ಆದಷ್ಟು ಬೇಗ ಈತನನ್ನು ವಾಪಸು ದ್ವೀಪಕ್ಕೆ ಕಳಿಸುತ್ತಾಳೆ. ಸಮುದ್ರ ಪ್ರಯಾಣದ ದೈಹಿಕ ಕ್ಲೇಶವೊಂದನ್ನು ಬಿಟ್ಟರೆ ಈತ ದ್ವೀಪದಲ್ಲಿ ಯಾವ ತಲೆಬಿಸಿಯೂ ಇಲ್ಲದೆ ಖುಷಿಯಲ್ಲೇ ಇದ್ದಾನೆ. ಬೇಸರವಾದಾಗ ಹೆಂಡತಿಯ ಹಳೆಯ ದುಪ್ಪಟ್ಟವನ್ನು ಮೈತುಂಬ ಹೊದ್ದುಕೊಂಡು ಗಂಟೆಗಟ್ಟಲೆ ನಿದ್ದೆ ಹೋಗುತ್ತಾನೆ!
ಇದು ತಿಪಟೂರಿನ ಅಬ್ದುಲ್ ರಜಾಕನ ಕಥೆ. ಈ ಹಡಗಿನಲ್ಲಿ ಚಲಿಸುವ ಒಬ್ಬೊಬ್ಬನದೂ ಒಂದೊಂದು ಕಥೆ. ನನ್ನ ಕಥೆಯೂ ಇದಕ್ಕಿಂತ ಕೆಟ್ಟದಾಗೇನೂ ಇಲ್ಲ. ಒಂದು ರೀತಿಯಲ್ಲಿ ಬಹಳ ಮಜಾವಾಗಿದೆ. ಪಿಂಗಾಣಿ ತಟ್ಟೆಯ ಮಹಾನುಭಾವರದೂ, ಆಡುಮಾಂಸ ಮಾರುವ ಹಾಡುಗಾರ ಮುದುಕನ ಕಥೆಯೂ ಹೀಗೆಯೇ. ಯಾಕೋ ನನಗೆ ಮನುಷ್ಯರ ಮೂಲಗಳನ್ನು ಹುಡುಕುವುದು ಇದ್ದಕ್ಕಿದ್ದಂತೆ ಬೇಸರವಾಗಿದೆ. ಮೂಲ ಹುಡುಕುವ ವ್ಯಾಧಿ ಹತ್ತಿಸಿಕೊಂಡಿರುವ ಭೂಮಿಯ ಮೇಲೆ ಇರುವ ಮನುಷ್ಯರ ಭವಿಷ್ಯದ ಕುರಿತು ಬಹಳ ಆಸೆಗಳೂ ಉಳಿದಿಲ್ಲ. ಕಡಲ ಒಳಗಿರುವ ಮತ್ಸ್ಯಗಳ ಇತಿಹಾಸ, ನಾಗರೀಕತೆ, ಅವುಗಳ ಮನಸ್ಸು ಮತ್ತು ಮನೋಕ್ಲೇಶಗಳ ಕುರಿತು ಆಳವಾಗಿ ತಿಳಿಯುವಷ್ಟು ಆಯಸ್ಸೂ ಇನ್ನು ಉಳಿದಿಲ್ಲ. ಬಹಳ ಸಣ್ಣ ವಯಸಿನಲ್ಲೇ ತೀರಿಹೋದ ನನ್ನ ಆತ್ಮಗುರುವಿನ ಹುಟ್ಟಿದ ದಿನ ಇಂದು. ಮನಸಿನಲ್ಲಿಯೇ ಆಕೆಯ ಪಾದಗಳಿಗೆ ವಂದಿಸಿ ಈ ಅಂಕಣವನ್ನು ಇಲ್ಲಿಗೆ ನಿಲ್ಲಿಸುವೆ. ಆದರೆ, ಮತ್ತೆ ಯಾವತ್ತಾದರೂ ಬರೆಯುವೆ.
(ಅಂಕಣ ಮುಕ್ತಾಯ)
ಅಬ್ದುಲ್ ರಶೀದ್