ಬಾಗಲಕೋಟೆ: ಕಳೆದ 2008ರಲ್ಲಿ ಆರಂಭಗೊಂಡ ದೇಶದ 3ನೇ ಅತಿ ದೊಡ್ಡ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಖ್ಯಾತಿ ಪಡೆದ ಇಲ್ಲಿನ ತೋಟಗಾರಿಕೆ ವಿವಿ ಆರಂಭಗೊಂಡು 10 ವರ್ಷ ಕಳೆದಿರುವಾಗಲೇ ಬಾಗಿಲು ಹಾಕುವ ಹುನ್ನಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು, ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ.
23 ಜಿಲ್ಲೆಗಳ ವ್ಯಾಪ್ತಿ, 10 ಕಾಲೇಜು, 11 ಸಂಶೋಧನಾ ಕೇಂದ್ರ ಹೊಂದಿರುವ ತೋಟಗಾರಿಕೆ ವಿವಿ, ಹಲವು ಮೂಲಸಮಸ್ಯೆಗಳ ಮಧ್ಯೆಯೂ ದೇಶದ ಗಮನ ಸೆಳೆದಿದೆ. ಭಾಗ್ಯ ನುಗ್ಗೆ, ತರಕಾರಿ, ಹೂವು ಹೀಗೆ ತೋಟಗಾರಿಕೆ ಬೆಳೆಗಳಲ್ಲಿ ಹಲವು ಸಂಶೋಧನೆ, ಈ ಭಾಗದ ತೋಟಗಾರಿಕೆ ರೈತಸ್ನೇಹಿಯಾಗಿರುವ ವಿವಿಯನ್ನು ಹಿಂದಿನ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಮಗ್ರ ಕೃಷಿ ವಿವಿಯೊಂದಿಗೆ ವಿಲೀನ ಮಾಡುವ ಕುರಿತು ಸಾಧಕ-ಬಾಧಕ ಚರ್ಚೆಗೆ ಕಮೀಟಿ ನೇಮಕಗೊಂಡಿದೆ. ಈ ಕಮೀಟಿ, ಈಗಾಗಲೇ ರಾಜ್ಯದ 5 ಕೃಷಿ ಮತ್ತು ಪಶು ವಿವಿಯಲ್ಲಿ ಅಭಿಪ್ರಾಯ ಸಂಗ್ರಹಿಸಿದೆ. ಇದಕ್ಕೆ ಎಲ್ಲೆಡೆ ಭಾರೀ ವಿರೋಧ ಅಭಿಪ್ರಾಯ ವ್ಯಕ್ತವಾಗಿದ್ದರೂ ಕಮೀಟಿ ನೀಡುವ ವರದಿ ಆಧಾರ ಮೇಲೆ, ಬಾಗಲಕೋಟೆ ತೋಟಗಾರಿಕೆ ವಿವಿಯ ಭವಿಷ್ಯ ನಿಂತಿದೆ ಎನ್ನಲಾಗಿದೆ.
ವಿಲೀನವೋ-ವಿಭಾಗವೋ: ಬೆಂಗಳೂರು, ರಾಯಚೂರು, ಧಾರವಾಡ, ಶಿವಮೊಗ್ಗ, ಬೀದರ ಹಾಗೂ ಬಾಗಲಕೋಟೆ ಸೇರಿ ಒಟ್ಟು ಆರು ಕಡೆ ಕೃಷಿ, ತೋಟಗಾರಿಕೆ ಮತ್ತು ಪಶು ವೈದ್ಯಕೀಯಕ್ಕೆ ಸಂಬಂಧಿಸಿದ ವಿವಿಗಳಿವೆ. ಇವುಗಳನ್ನು ಸಮಗ್ರ ಕೃಷಿ ವಿವಿಯೆಡೆ ಒಂದೇ ಸೂರಿನಡಿ ತರುವುದು ಸರ್ಕಾರದ ಉದ್ದೇಶ. ಅದಕ್ಕಾಗಿಯೇ, ಬೆಂಗಳೂರು ಕೃಷಿ ವಿವಿಯ ವಿಶ್ರಾಂತ ಕುಲಪತಿ ಡಾ|ಎಂ.ಎನ್. ಶೀಲವಂತರ ನೇತೃತ್ವದ ಕಮೀಟಿ ರಚಿಸಲಾಗಿದೆ. ಈ ಕಮೀಟಿಯಲ್ಲಿ ಒಟ್ಟು ಏಳು ಜನ ಸದಸ್ಯರಿದ್ದು, ಅವರೆಲ್ಲ ಆರೂ ವಿವಿಗಳಿಗೆ ತೆರಳಿ ಆ ಭಾಗದ ರೈತರು, ಹೋರಾಟಗಾರರು, ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಆಯಾ ವಿವಿಯ ಕುಲಪತಿಗಳ ಅಭಿಪ್ರಾಯ ಪಡೆಯುತ್ತಿದೆ. ಎಲ್ಲಾ ಕಡೆಯೂ ಸಮಗ್ರ ಕೃಷಿ ವಿವಿಗೆ ಸಹಮತ ವ್ಯಕ್ತವಾಗಿಲ್ಲ. ಬದಲಾಗಿ, ಈಗಿರುವ ವಿವಿಗಳನ್ನು ಬಲಿಷ್ಠಗೊಳಿಸುವಂತೆ ಒತ್ತಾಯ ಕೇಳಿ ಬಂದಿದೆ.
ಆದರೆ, ಕಮೀಟಿ ಅಧ್ಯಕ್ಷರು-ಕೆಲ ಸದಸ್ಯರು ಮಾತ್ರ ಬೇರೆಯೇ ಹೇಳುತ್ತಿದ್ದಾರೆ. ಸಮಗ್ರ ಕೃಷಿ ವಿವಿಯಡಿ ಎಲ್ಲಾ ವಿವಿ ತಂದರೆ, ಈಗಿರುವ ವಿವಿಗಳನ್ನು ಮುಚ್ಚುವುದಿಲ್ಲ. ಬದಲಾಗಿ ಆ ವಿವಿಗಳಲ್ಲೂ ಕೃಷಿ, ಪಶು, ತೋಟಗಾರಿಕೆ ಸಂಬಂಧಿಸಿದ ವಿಭಾಗಗಳು ಆರಂಭಗೊಳ್ಳುತ್ತವೆ ಎಂದು ಹೇಳುತ್ತಾರೆ. ಹೀಗಾಗಿ ವಿವಿಗಳನ್ನು ವಿಲೀನ ಮಾಡುತ್ತಾರೋ, ಇಲ್ಲವೇ ಅದೇ ವಿವಿಗಳಲ್ಲಿ ಬೇರೆ ಕೃಷಿ ಸಂಬಂಧಿತ ಪ್ರತ್ಯೇಕ ವಿಭಾಗ ಆರಂಭಿಸುತ್ತಾರೋ ಎಂಬ ತೀವ್ರ ಗೊಂದಲವೂ ರೈತ ಪ್ರಮುಖರಲ್ಲಿ ಮೂಡಿದೆ. ಸರ್ಕಾರ ಬದಲಾದಂತೆ, ವಿವಿಗಳ ಆಡಳಿತ ವ್ಯವಸ್ಥೆ, ವಿಲೀನ ಪಕ್ರಿಯೆಗಳು ನಡೆಯಬಾರದು. ಸರ್ಕಾರ ಯಾವುದೇ ಇರಲಿ. ಕೃಷಿ, ತೋಟಗಾರಿಕೆ ಕ್ಷೇತ್ರ ಬಲಪಡಿಸಬೇಕೇ ವಿನಃ, ವಿಲೀನಗೊಳಿಸಿ ದುರ್ಬಲಗೊಳಿಸಬಾರದೆಂದು ಹಲವರು ಒತ್ತಾಯಿಸಿದ್ದಾರೆ.
ವಿವಿಗಳನ್ನು ವಿಲೀನ ಮಾಡುವ ಮೊದಲು, ತೋಟಗಾರಿಕೆ, ಕೃಷಿ, ರೇಷ್ಮೆ, ಪಶು ಸಂಗೋಪನೆ ಇಲಾಖೆ ವಿಲೀನಗೊಳಿಸಿ, ಅವುಗಳಿಗೆ ಒಬ್ಬರೇ ಸಚಿವರನ್ನು ಮಾಡಲಿ. ರಾಜಕೀಯ ಪಕ್ಷದವರಿಗೆ ಅಧಿಕಾರಕ್ಕಾಗಿ ಪ್ರತ್ಯೇಕ ಸಚಿವಾಲಯ ಬೇಕು. ಆದರೆ, ರೈತರಿಗಾಗಿ ಇರುವ ಕೃಷಿ ಮತ್ತು ತೋಟಗಾರಿಕೆ ವಿವಿಗಳು ವಿಲೀನಗೊಳಿಸಿ, ಬೆಂಗಳೂರು ಕೇಂದ್ರೀಕೃತ ಅಧಿಕಾರ ಮಾಡಿಕೊಳ್ಳಲು ಹೊರಟಿದ್ದಾರೆ. ಇದಕ್ಕೆ ಆಸ್ಪದ ಕೊಡಲ್ಲ.
•ಅಭಯಕುಮಾರ ನಾಂದ್ರೇಕರ, ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ
ಕೃಷಿ ವಿವಿಯಿಂದ ತೋಟಗಾರಿಕೆ ಬೆಳೆಗಾರರಿಗೆ ಸರಿಯಾಗಿ ಸ್ಪಂದಿಸಲು ಆಗಿಲ್ಲ ಎಂಬ ಕಾರಣಕ್ಕೆ ಪ್ರತ್ಯೇಕ ತೋಟಗಾರಿಕೆ ವಿವಿ ಆರಂಭಿಸಲಾಗಿದೆ. ಈಗ ಇದನ್ನು ವಿಲೀನಕ್ಕೆ ಕೈ ಹಾಕಿರುವುದು ಸರಿಯಲ್ಲ. ಇದರ ಹಿಂದೆ ಬೆಂಗಳೂರು ಭಾಗದ ದೊಡ್ಡ ಲಾಭಿ ಇದೆ. ಎಲ್ಲಾ ವಿವಿ ಒಂದೇ ಮಾಡಿ, ಬೆಂಗಳೂರಿನಲ್ಲಿ ಅಧಿಕಾರ ಉಳಿಸಿಕೊಳ್ಳಬೇಕು. ಆ ಭಾಗದವರು ಈ ಕಡೆಗೆ ಬರಲ್ಲ. ಆದರೆ, ಉತ್ತರ ಕರ್ನಾಟಕದವರು ಬೆಂಗಳೂರಿಗೆ ಹೋಗಬೇಕು. ಇಂತಹ ಲಾಭಿ ಕೈ ಬಿಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುತ್ತದೆ.
•ವೀರೇಶ ಕೂಡಲಗಿಮಠ, ಕೃಷಿ ಪದವೀಧರ, ಇಳಕಲ್ಲ
•ಶ್ರೀಶೈಲ ಕೆ. ಬಿರಾದಾರ