Advertisement

ಜೋಳದ ರೊಟ್ಟಿ ಬಲು ತುಟ್ಟಿ

10:16 AM May 02, 2019 | Naveen |

ಇಂಡಿ: ಉತ್ತರ ಕರ್ನಾಟಕದ ಪ್ರಮುಖ ಬೆಳೆ ಬಿಳಿಜೋಳ ಬಲು ತುಟ್ಟಿಯಾಗಿ ಬಿಟ್ಟಿದೆ. ಭೀಕರ ಬರಕ್ಕೆ ಜಿಲ್ಲೆ ತುತ್ತಾಗಿದ್ದರಿಂದ ಜೋಳದ ಬೆಳೆ ಬಂದಿಲ್ಲ. ಹೀಗಾಗಿ ಜೋಳ ಖರೀದಿಸುವುದು ರೊಟ್ಟಿ ಪ್ರಿಯರಿಗೆ ಕಷ್ಟವೆನಿಸಿದೆ.

Advertisement

ಸದ್ಯ ಮಾರ್ಕೆಟ್‌ನಲ್ಲಿ ಡೋಣಿ (ಹೊಳೆಸಾಲ) ಜೋಳ ಕ್ವಿಂಟಲ್ಗೆ 3500 ರೂ, ಜವಾರಿ (ಸಣ್ಣ) ಜೋಳ ಕ್ವಿ. 3100 ರೂ, ಹೈಬ್ರೀಡ್‌ ಜೋಳ ಕ್ವಿ. 2700 ರೂ. ಆಗಿದೆ.

ಸದ್ಯ ಜಿಲ್ಲೆಯಲ್ಲಿ ಜೋಳ ಬೆಳೆಯದ ಕಾರಣ ದಾವಣಗೆರೆ ಸೇರಿದಂತೆ ಇನ್ನಿತರ ಜಿಲ್ಲೆಗಳಿಂದ ತರಿಸಿಕೊಂಡು ಮಾರಾಟ ಮಾಡುತ್ತಿದ್ದಾರೆ. ಈ ಮೊದಲು ಜಿಲ್ಲೆಯಲ್ಲೇ ಹೆಚ್ಚು ಜೋಳ ಬೆಳೆದಿದ್ದರಿಂದ ಜೋಳದ ಬೆಲೆ ಕಡಿಮೆ ಇತ್ತು. ಆದರೆ ಈ ಬಾರಿ ಬರ ಹಾಗೂ ರೈತರು ಜೋಳ ಬೆಳೆಯುವುದನ್ನು ಕಡಿಮೆ ಮಾಡಿದ್ದರಿಂದ ಬೆಲೆ ಗಗನಕ್ಕೇರಿದೆ.

ಉತ್ತರ ಕರ್ನಾಟಕದ ಜನರಿಗೆ ಜೋಳದ ರೊಟ್ಟಿ ಬಿಟ್ಟರೆ ಬೇರೆ ಊಟ ಅಸಾಧ್ಯ. ಹೀಗಿರುವಾಗ ಜೋಳ ಎಷ್ಟೇ ತುಟ್ಟಿಯಾದರೂ ಖರೀದಿಸಿ ಊಟ ಮಾಡಬೇಕಾದ ಅನಿವಾರ್ಯತೆ ಜನರಿಗೆ ಬಂದಿದೆ.

ಇಲಾಖೆ ಕ್ರಮ: ಜೋಳ ಬೆಳೆಯುವ ಪ್ರಮಾಣ ಹೆಚ್ಚಿಸಲು ಕೃಷಿ ಇಲಾಖೆ ಈ ಬಾರಿ ಕಾರ್ಯಕ್ರಮ ಹಾಕಿಕೊಂಡಿದೆ. ಜೋಳ ಬಿತ್ತನೆಗೆ ಸಹಾಯಧನ ಕೊಟ್ಟು ಜೋಳ ಬಿತ್ತನೆ ಮಾಡಿಸ‌ಬೇಕೆಂಬ ಆಶಯ ಇಲಾಖೆಯದ್ದಾಗಿದೆ. ಜೋಳ ಬಿತ್ತನೆ ಮಾಡಿದ ನಂತರ ಅದಕ್ಕೆ ರಾಶಿ ಮಾಡಲು ಯಾವುದೇ ಯಂತ್ರೋಪಕರಣಗಳು ಇಲ್ಲದೆ ಇರುವುದರಿಂದ ರೈತರು ಜೋಳ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ. ಜೋಳದ ಬೆಳೆ ಬಂದ ನಂತರ ಕಟಾವು ಮಾಡಿ ರಾಶಿ ಮಾಡಲು 15 ದಿನ ಸಮಯಾವಕಾಶ‌ ಬೇಕಾಗುತ್ತದೆ. ಕೂಲಿ ಕಾರ್ಮಿಕರು ಸಿಗದೆ ಇರುವ ಕಾರಣ ಜೋಳ ಬಿತ್ತನೆ ಪ್ರಮಾಣ ಜಿಲ್ಲಾದ್ಯಂತ ಕಡಿಮೆಯಾಗುತ್ತ ಬರುತ್ತಿದೆ ಎಂಬುದು ಇಲಾಖೆ ಅಧಿಕಾರಿಗಳ ಅಭಿಪ್ರಾಯ.

Advertisement

ಪ್ರಸಕ್ತ ಬಾರಿ 20 ಸಾವಿರ ಹೆಕ್ಟೇರ್‌ ಜೋಳ ಬಿತ್ತನೆ ಮಾಡಲಾಗಿತ್ತು. ಆದರೆ ಸಮರ್ಪಕ ಮಳೆಯಾಗದೆ ಇರುವುದರಿಂದ ಪ್ರತಿಶತ 60 ರಷ್ಟು ಬೆಳೆ ಒಣಗಿ ಹಾಳಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಜೋಳದ ಬೆಲೆ ಹೆಚ್ಚಾಗಿದೆ. ಈ ಬಾರಿ ಹೆಚ್ಚಿಗೆ ಜೋಳ ಬೆಳೆಯಲು ಇಲಾಖೆಯಿಂದ ಜೋಳ ಬಿತ್ತನೆಗೆ ಸಬ್ಸಿಡಿ ನೀಡಲು ನಿರ್ಣಯಿಸಲಾಗಿದೆ.
ಮಹಾದೇವಪ್ಪ ಏವೂರ,
ಸಹಾಯಕ ಕೃಷಿ ಅಧಿಕಾರಿಗಳು, ಇಂಡಿ.

ಜೋಳದ ಬೆಲೆ ಪ್ರತಿ ವರ್ಷ ಏರಿಕೆಯಾಗುತ್ತಲೇ ಹೊರಟಿದೆ. ನಮ್ಮ ಭಾಗದ ಜನ ಬಿಳಿ ಜೋಳದ ರೊಟ್ಟಿ ಬಿಟ್ಟರೆ ಬೇರೆ ಏನನ್ನೂ ಹೆಚ್ಚು ಊಟ ಮಾಡಲ್ಲ. ಕೃಷಿ ಇಲಾಖೆಯವರು ಹೆಚ್ಚಿಗೆ ಜೋಳ ಬೆಳೆಯುವಂತೆ ಪ್ರೇರೇಪಿಸುವ ಕಾರ್ಯ ಮಾಡಬೇಕು.
ಈಶ್ವರ ಪಾಟೀಲ, ಗ್ರಾಹಕ

ಈ ಬಾರಿ ಬರಗಾಲವಿರುವುದರಿಂದ ತಾಲೂಕಿನಲ್ಲಿ ರೈತರು ಜೋಳ ಬೆಳೆದಿಲ್ಲ. ಹೀಗಾಗಿ ಇಲ್ಲಿನ ಜನರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಎಲ್ಲ ಅಡತ ವ್ಯಾಪಾರಿಗಳು ಬೇರೆ ಜಿಲ್ಲೆಗಳಿಂದ ಜೋಳ ಖರೀದಿಸಿ ತಂದು ಮಾರಾಟ ಮಾಡುತ್ತಿದ್ದೇವೆ. ಮಳೆ ಇಲ್ಲದ ಕಾರಣದಿಂದ ಜೋಳದ ಬೆಲೆಯಲ್ಲಿ ಏರಿಕೆಯಾಗಿದೆ.
•ರಾಜು ಹದಗಲ್,
ಅಡತ ವ್ಯಾಪಾರಸ್ಥ ಇಂಡಿ.

ಉಮೇಶ ಬಳಬಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next