Advertisement

ತಾಪಂ ಅಧ್ಯಕ್ಷರ ವಿರುದ್ಧವೇ ಹರಿಹಾಯ್ದ ಸ್ವ ಪಕ್ಷ ಸದಸ್ಯರು

10:31 AM Aug 22, 2019 | Naveen |

ಇಂಡಿ: ಪಟ್ಟಣದ ತಾಪಂ ಸಭಾ ಭವನದಲ್ಲಿ ಸರ್ವ ಸದಸ್ಯರ 13ನೇ ಸಾಮಾನ್ಯ ಸಭೆ ನಡೆಯಿತು.

Advertisement

ಇಂಡಿ: ಸ್ವ ಪಕ್ಷದ ಸದಸ್ಯರೆ ಅಧ್ಯಕ್ಷರ ನಡೆ ವಿರೋಧಿಸಿ ಅಧ್ಯಕ್ಷರ ವಿರುದ್ಧ ಹರಿಹಾಯ್ದ ಪ್ರಸಂಗ ಬುಧವಾರ ತಾಪಂ ಸಭಾ ಭವನದ ಸರ್ವ ಸದಸ್ಯರ 13ನೇ ಸಾಮಾನ್ಯ ಸಭೆಯಲ್ಲಿ ನಡೆಯಿತು.

ತಾಪಂ ಅಧ್ಯಕ್ಷ ಶೇಖರ ನಾಯಕ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಗಿ ಹಿಂದಿನ ನಡವಳಿಕೆಗಳನ್ನು ಓದಿ ಮೊದಲಿಗೆ ಕುಡಿಯುವ ನೀರಿನ ಬಗ್ಗೆ ಚರ್ಚೆಯಾಯಿತು. ಅದಾದ ನಂತರ ತೋಟಗಾರಿಕೆ ಇಲಾಖೆ ಅಧಿಕಾರಿ ಹಾಗೂ ಪಶು ಇಲಾಖಾಧಿಕಾರಿಗಳು ತಮ್ಮ ವರದಿ ವಾಚನ ಮಾಡುತ್ತಿದಂತೆ ಕಳೆದ ಬಾರಿ ತಾಪಂ ಅನುದಾನದಲ್ಲಿ ಯಾವ ಫಲಾನುಭವಿಗಳಿಗೆ ಯೋಜನೆಗಳು ತಲುಪಿಸಿದ್ದೀರಿ? ಮಾಹಿತಿ ನೀಡಿ ಎಂದು ಸದಸ್ಯರಾದ ರಾಜುಗೌಡ ಝಳಕಿ ಹಾಗೂ ಗಣಪತಿ ಬಾಣಿಕೋಲ, ಅಣ್ಣಪ್ಪ ಬಿದರಕೋಟಿ ಮತ್ತಿತರರು ಸಭೆಯಲ್ಲಿ ಒತ್ತಾಯಿಸಿದರು.

ಆಗ ಅಧಿಕಾರಿಗಳು ಪಶು ಇಲಾಖೆಯಿಂದ 5 ಜನರಿಗೆ ಯೋಜನೆ ತಲುಪಿಸಲಾಗಿದೆ ಎಂದು ಫಲಾನುಭವಿಗಳ ಹೆಸರು ಹೇಳುತ್ತಿದಂತೆ ಆಕ್ರೋಶಗೊಂಡ ಸದಸ್ಯರು ಅಧ್ಯಕ್ಷ ಶೇಖರ ನಾಯಕ ವಿರುದ್ಧ ಹರಿಹಾಯ್ದರು.

ಫಲಾನುಭವಿಗಳು ಎಲ್ಲರೂ ಬಂಜಾರ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಅಧ್ಯಕ್ಷರು ಸಹ ಬಂಜಾರ ಸಮುದಾಯದವರಾಗಿದ್ದು ಸ್ವ ಜಾತಿಗೆ ಮಣೆ ಹಾಕಿದ್ದಾರೆ. ಎಸ್‌ಸಿ ಪಂಗಡದಲ್ಲಿ ಇನ್ನೂ ಅನೇಕ ವರ್ಗಗಳಿದ್ದರೂ ಅವುಗಳೆಲ್ಲವೂ ಬಿಟ್ಟು ಬಂಜಾರಾ ಸಮುದಾಯಕ್ಕೆ ಯೋಜನೆ ತಲುಪಿಸಿದ್ದು ಯಾವ ಪುರುಷಾರ್ಥಕ್ಕೆ? ಉಳಿದ ವರ್ಗಗಳು ಎಸ್‌ಸಿ ಅಲ್ಲವೇ? ತಾಪಂನಲ್ಲಿ ಜಾತಿ ರಾಜಕಾರಣ ನಡೆದಿದೆ ಎಂದು ಅಧ್ಯಕ್ಷರ ವಿರುದ್ಧ ಕಿಡಿ ಕಾರಿದರು.

Advertisement

ತೋಟಗಾರಿಕೆ ಇಲಾಖೆಯಲ್ಲಿ ಸಹ ಐವರು ಫಲಾನುಭವಿಗಳಲ್ಲಿ ನಾಲ್ವರು ಬಂಜಾರ ಸಮುದಾಯ ಫಲಾನುಭವಿಗಳಾಗಿದ್ದು ಒಬ್ಬ ಮಾತ್ರ ಬೇರೆಯವರಿಗೆ ಯೋಜನೆ ಹಾಕಿದ್ದಾರೆ. ಇದರಿಂದ ಸಭೆಯಲ್ಲಿ ಗಂಟೆವರೆಗೂ ಗೊಂದಲದ ಗೂಡಾದಾಗ ಅಧ್ಯಕ್ಷರು ಮುಂದಿನ ಯೋಜನೆಗಳು ಸರ್ವ ಸದಸ್ಯರ ಗಮನಕ್ಕೆ ತಂದು ಯಾವ ಫಲಾನುಭವಿಗಳಿಗೆ ನೀಡಬೇಕಾಗಿತ್ತು ಅಂತಹ ಫಲಾನುಭವಿಗಳಿಗೆ ನೀಡುತ್ತೇನೆ ಎಂದು ಸದಸ್ಯರಿಗೆ ಸಮಜಾಯಿಸಿದರು.

ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ ಮಾತನಾಡಿ, ವಾಡಿಕೆ ಪ್ರಕಾರ ಮಳೆಯಾಗಿಲ್ಲ. ಇದರಿಂದ ಹಿಂಗಾರು-ಮುಂಗಾರು ವಿಫಲವಾಗಿದೆ. ತಾಲೂಕಿನಲ್ಲಿ ಭೀಮಾ ನದಿಯಿಂದ ಮಹಾಪೂರ ಬಂದಿರುವುದರಿಂದ ಭೀಮಾ ನದಿ ಪಾತ್ರದಲ್ಲಿರುವ ರೈತರ ಬೆಳೆಗಳು ಹಾನಿಯಾಗಿವೆ. 28 ಹಳ್ಳಿಗಳಲ್ಲಿ ಸುಮಾರು ಅಂದಾಜು 12 ಕೋಟಿ ರೂ. ಮೌಲ್ಯದ ಬೆಳೆ ಹಾಳಾಗಿದ್ದು ಸರಕಾರಕ್ಕೆ ವರದಿ ನೀಡಲಾಗಿದೆ ಎಂದರು. ತಾಲೂಕಿನಾದ್ಯಂತ ಸರಕಾರಿ ಶಾಲೆಗಳಲ್ಲಿ ಸಮವಸ್ತ್ರ ಹಾಗೂ ಶೂ ಸಾಕ್ಸ್‌, ಬೈಸಿಕಲ್ ವಿತರಣೆಯಾಗಿಲ್ಲ ಏಕೆ ಹಾಗೂ ತಾಲೂಕಿನಲ್ಲಿ ಅಧಿಕೃತ ಶಾಲೆಗಳು ಎಷ್ಟು? ಅನಧಿಕೃತ ಶಾಲೆಗಳು ಎಷ್ಟು? ಗುಡಿಸಲು ಇದ್ದ ಶಾಲೆಗಳು ಎಷ್ಟು ಎಂದು ತಾಪಂ ಅದಸ್ಯ ಅಣ್ಣಪ್ಪ ಬಿದರಕೋಟಿ ಕೇಳಿದ ಪ್ರಶ್ನೆಗೆ ಶಿಕ್ಷಣಾಧಿಕಾರಿ ಎಸ್‌.ಬಿ. ಬಿಂಗೇರಿ ಮಾತನಾಡಿ, ಎಲ್ಲವೂ ಅಧಿಕೃತ ಶಾಲೆಗಳಿವೆ. ಅನಧಿಕೃತ ಶಾಲೆಗಳು ಇಲ್ಲ. ಮೂರು ಗುಡಿಸಲು ಶಾಲೆಗಳು ಇದ್ದು 5 ತಗಡುಗಳ ಶಾಲೆಗಳಿವೆ. ಈಗಾಗಲೆ ಈ ಎಂಟು ಶಾಲೆಗಳಿಗೆ ನೋಟಿಸ್‌ ನೀಡಲಾಗಿದೆ. ಸರಿಯಾಗಿ ಸ್ಪಂದಿಸದಿದ್ದರೆ ಶಾಲೆಗಳ ಮಾನ್ಯತೆ ರದ್ದುಪಡಿಸಲಾಗುವದು ಎಂದರು.

ಉಪಾಧ್ಯಕ್ಷೆ ಗಂಗಮ್ಮಗೌಡತಿ ಬಿರಾದಾರ, ಯೋಜನಾಧಿಕಾರಿ ವಿ.ಪಿ. ಹಳ್ಳೀಕರ ವೇದಿಕೆಯಲ್ಲಿದ್ದರು. ಅಧಿಕಾರಿಗಳಾದ ರಾಜಕುಮಾರ ತೊರವಿ, ಬಿ.ಎಫ್‌. ನಾಯ್ಕರ್‌, ಸಿ.ಬಿ. ಕುಂಬಾರ, ಮಹಾದೇಪ್ಪ ಏವೂರ, ಆರ್ಚನಾ ಕುಲಕರ್ಣಿ, ಎಸ್‌.ಬಿ. ಬಿಂಗೇರಿ, ತಾಪಂ ಸದಸ್ಯರಾದ ಅಣ್ಣಪ್ಪ ಬಿದರಕೋಟಿ, ಗಂಗಾಧರಗೌಡ ಬಿರಾದಾರ, ಡಾ| ರವಿಧಾಸ ಜಾಧವ, ಗಣಪತಿ ಬಾಣಿಕೋಲ, ರಾಜು ಝಳಕಿ, ಅರ್ಚನಾ ಗುಡ್ಡೊಡಗಿ, ಸಿದ್ದಪ್ಪ ತಳವಾರ ಇದ್ದರು.

ಲೋಣಿ ತಾಪಂ ಸದಸ್ಯ ದ್ಯಾಮಗೊಂಡ ಕಾಂಬಳೆ ಮಾತನಾಡಿ, ನಾನು ಅಕಾರಿಗಳಿಗೆ ದೂರವಾಣಿ ಕರೆ ಮಾಡಿದರೂ ಕ್ಯಾರೆ ಎನ್ನುತ್ತಿಲ್ಲ. ಅದೇ ಸಂಘಟನೆಯವರು ದೂರವಾಣಿ ಮೂಲಕ ಕರೆ ಮಾಡಿದರೆ ಅಧಿಕಾರಿಗಳು ಕೆಲಸ ಮಾಡಿಕೊಡುತ್ತಾರೆ. ಹಾಗಾದರೆ ನಾವು ಇದ್ದೂ ಇಲ್ಲದಂತಾಗಿದೆ. ಜನ ನಮಗೆ ಬಾಯಿಗೆ ಬಂದಂತೆ ಬೈಯ್ಯುತ್ತಿದ್ದಾರೆ ಎಂದರು. ತಾಪಂ ಅಧಿಕಾರಿ ಡಾ| ವಿಜಯಕುಮಾರ ಅಜೂರ ನಿಮ್ಮ ಸಮಸ್ಯೆ ಅರ್ಥವಾಗಿದೆ. ವಾರದಲ್ಲಿ ಬಗೆ ಹರಿಸಬೇಕು ಎಂದು ಚಡಚಣ ಹೆಸ್ಕಾಂ ಅಧಿಕಾರಿ ಬಿರಾದಾರ ಅವರಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next