Advertisement

ಶಿರಶ್ಯಾಡ ರಾಮಲಿಂಗ ದೇಗುಲಕ್ಕೆ ಬೇಕಿದೆ ಕಾಯಕಲ್ಪ

11:00 AM Jul 18, 2019 | Team Udayavani |

ಇಂಡಿ: ವಿಜಯಪುರ ಜಿಲ್ಲೆಯ ಅನೇಕ ಭಾಗಗಳಲ್ಲಿ ಪ್ರಾಚ್ಯವಸ್ತು ಇಲಾಖೆ ಪಾಳು ಬಿದ್ದ ಗುಹಾಲಯಗಳು, ದೇವಾಲಯಗಳು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಿದೆ. ಶಿರಶ್ಯಾಡ ಗ್ರಾಮದಲ್ಲಿರುವ ರಾಮಲಿಂಗ ದೇಗುಲ ಮಾತ್ರ ಹಾಳು ಬಿದ್ದ ಕೊಂಪೆಯಂತಾಗಿದ್ದು ಈ ದೇವಾಲಯವನ್ನೂ ಸಹ ಜೀರ್ಣೋದ್ಧಾರ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.

Advertisement

ಸ್ಥಳೀಯ ಗ್ರಾಮದ ರಾಮಲಿಂಗ ಹೆಸರಿನಿಂದ ಕರೆಯಲ್ಪಡುವ ಈ ದೇಗುಲದ ಗರ್ಭಗೃಹ, ಮುಖ ಮಂಟಪ, ಸುಖನಾಶಿ, ಗರ್ಭಗೃಹದ ಒಳಭಾಗ ನವರಂಗ ಇದ್ದು ಗರ್ಭಗೃಹದ ನಟ್ಟ ನಡುವೆ ಶಿವಲಿಂಗ ಪ್ರತಿಷ್ಠಾಪಿಸಲಾಗಿದೆ.

ದುಂಡನೆಯ ಕಲಾಕುಸುರಿಯಿಂದ ಕೆತ್ತ್ತನೆ ಮಾಡಿದ ಸುಂದರ ಕಂಬಗಳು, ಶಿವನ ದರ್ಶನಕ್ಕೆ ಹೋಗುವ ದ್ವಾರಬಾಗಿಲು ವಜ್ರಪಟ್ಟಿ ಅಲಂಕಾರಗಳಿಂದ ಕೂಡಿದೆ. ಅಂತರಾಳದ ಬಾಗಿಲಿಗೂ ಸಹ ಗರ್ಭಗೃಹದ ಮಾದರಿಯಂತೆ ನಯನ ಮನೋಹರವಾಗಿವೆ ದ್ವಾರ ಬಾಗಿಲಿನಿಂದ ಒಳಕ್ಕೆ ಪ್ರವೇಶ ಮಾಡಿದರೆ ಸಾಕು ಪದ್ಮಾಸೀನನಾದ ಭಂಗಿಯಲ್ಲಿ ಕುಳಿತಿರುವ ಮೂರ್ತಿ ಕಾಣುತ್ತದೆ. ಇದು ಹಿಂದಿನ ಜೈನ್‌ ಬಸದಿ ಇದ್ದಿರಬಹುದು ಎಂಬ ಕಲ್ಪನೆಯೂ ಮೂಡುತ್ತದೆ.

ನವರಂಗದಲ್ಲಿ ನಾಲ್ಕು ಸ್ತಂಬಗಳಿದ್ದು ಮಧ್ಯದಲ್ಲಿ ನಂದಿ ಚಿತ್ರ ಕೆತ್ತಲಾಗಿದೆ. ಇದರಿಂದ ಕಲ್ಯಾಣದ ಚಾಲುಕ್ಯರ ಕಾಲದ ವಾಸ್ತು ಶಿಲ್ಪ ಇರಬಹುದು ಎನ್ನಲಾಗಿದೆ. ರಾಮಲಿಂಗ ದೇಗುಲದ ಮುಂಭಾಗ ಹುನುಮಂತನ ಗುಡಿ ಇದೆ. ಇದರ ಮುಂಭಾಗ ಹಳೆ ಕಾಲದ ಶಾಸನ ವಿದ್ದು ಯಾವ ಲಿಪಿಯಲ್ಲಿ ಕೆತ್ತಲಾಗಿದೆ? ಇದರ ಇತಿಹಾಸವೇನು ಎಂಬುದು ಯಕ್ಷ ಪ್ರಶ್ನೆಯಾಗಿದೆ.

ರಾಮಲಿಂಗ ದೇಗುಲದ ವೈಶಿಷ್ಟ್ಯ ನೋಡಿದರೆ ಕಣ್ಮನಗಳು ಸೂರೆಗೊಳ್ಳುವಷ್ಟು ಸುಂದರವಾಗಿ ಕೆತ್ತನೆಯ ಕುಸುರಿ ಕೆಲಸ ಮಾಡಿದ್ದಾರೆ. ಆದರೆ ಅವುಗಳ ಬಗ್ಗೆ ಪ್ರಾಚ್ಯವಸ್ತು ಇಲಾಖೆಯಾಗಲಿ ಯಾವುದೇ ಸರಕಾರಗಳಾಗಲಿ ಗಮನ ಹರಿಸುತ್ತಿಲ್ಲ. ಗಾಮ್ರಗಳ ಉದ್ಧಾರವೇ ದೇಶದ ಉದ್ಧಾರ ಎಂಬ ಚಿಂತನೆ ಹೊತ್ತು ಸರಕಾರ ನಡಸುತ್ತಿರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ದೇಶದ ಇತಿಹಾಸದ ಕಡೆ ಒಮ್ಮೆ ಗಮನ ಹರಿಸಬೇಕಾದ ಅನಿರ್ವಾತೆ ಇದೆ.

Advertisement

ಗ್ರಾಮದ ಮಧ್ಯಭಾಗದಲ್ಲಿ ರಾಮಲಿಂಗ ದೇಗುಲವಿದೆ. ಇದು ಪ್ರಾಚೀನ ಕಾಲದ ಸ್ಮಾರಕವಿದ್ದು ಸಂಪೂರ್ಣ ಶಿಥಿಲಾವಸ್ಥೆ ಅಂಚಿನಲ್ಲಿದೆ. ಆದರೆ ಇದನ್ನು ಜಿರ್ಣೋದ್ಧಾರ ಮಾಡುವ ಗೋಜಿಗೆ ಪ್ರಾಚ್ಯವಸ್ತು ಇಲಾಖೆಯಾಗಲಿ ಅಥವಾ ಅಧಿಕಾರಿಗಳಾಗಲಿ ಯಾರೂ ಗಮನ ಹರಿಸಿಲ್ಲ. ಪ್ರಾಚ್ಯವಸ್ತು ಇಲಾಖೆಯವರು ದೇಗುಲ ಸಂರಕ್ಷಣೆ ಮಾಡಿ ಅದನ್ನು ಸರಕಾರದ ಸುಪರ್ದಿಗೆ ಒಳಪಡಿಸಬೇಕು.
ಬಾಳು ಮುಳಜಿ, ಶಿರಶ್ಯಾಡ ಗ್ರಾಮಸ್ಥ

Advertisement

Udayavani is now on Telegram. Click here to join our channel and stay updated with the latest news.

Next