Advertisement

ಬರಗಾಲಕ್ಕೆ ಬಲಿಯಾದ ಲಿಂಬೆ ಗಿಡ

10:38 AM Jul 25, 2019 | Naveen |

ಉಮೇಶ ಬಳಬಟ್ಟಿ
ಇಂಡಿ:
ದೇಶದಲ್ಲೇ ಲಿಂಬೆ ಬೆಳೆ ಬೆಳೆಯುವಲ್ಲಿ ಮುಂಚೂಣಿಯಲ್ಲಿರುವ ಇಂಡಿ ತಾಲೂಕಿನಲ್ಲಿ ಭೀಕರ ಬರಗಾಲ ಆವರಿಸಿದ್ದು ಹತ್ತಾರು ವರ್ಷದಿಂದ ಬೆಳೆದ ಲಿಂಬೆ ಗಿಡಗಳು ನೀರಿಲ್ಲದೆ ಒಣಗಿದ್ದು ರೈತನ ಹೊಟ್ಟೆ ಮೇಲೆ ಬರೆ ಎಳೆದ‌ಂತಾಗಿದೆ.

Advertisement

ಇಡಿ ದೇಶದಲ್ಲಿಯೇ ಕರ್ನಾಟಕದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಿಂಬೆ ಹಣ್ಣಿಗೆ ಹೆಚ್ಚಿನ ಬೇಡಿಕೆ ಇದೆ. ಇಂಡಿ ತಾಲೂಕಿನ ಲಿಂಬೆಯನ್ನು ಹೊರ ದೇಶಕ್ಕೂ ಕಳಿಸಲಾಗುತ್ತದೆ. ಅಂತಹ ಲಿಂಬೆ ನಾಡಾಗಿದ್ದ ತಾಲೂಕಿಗೆ ಬರಗಾಲ ಬೆನ್ನಟ್ಟಿ ಪ್ರತಿ ವರ್ಷವೂ ಲಿಂಬೆ ಕ್ಷೇತ್ರ ಕಡಿಮೆಯಾಗುತ್ತಲೆ ಬರುತ್ತಿದೆ.

ಕಳೆದ ಸಾಲಿನಲ್ಲಿ ತಾಲೂಕಿನಾದ್ಯಂತ ಒಟ್ಟು 5,964 ಹೆಕ್ಟೇರ್‌ ಪ್ರದೇಶದಲ್ಲಿ ಲಿಂಬೆ ಬೆಳೆ ಇತ್ತು. ಆದರೆ ಮಳೆ ಇಲ್ಲದೆ ಇರುವ ಕಾರಣ ಈ ಬಾರಿ 2,719 ಹೆಕ್ಟೇರ್‌ ಪ್ರದೇಶದಲ್ಲಿನ ಲಿಂಬೆ ಬೆಳೆ ಒಣಗಿದೆ. ಅದರಲ್ಲಿ ತಾಲೂಕಿನ ತಡವಲಗಾ, ನಿಂಬಾಳ, ರೂಗಿ, ಬೋಳೆಗಾಂವ, ಅಥರ್ಗಾ, ಗೊರನಾಳ ಗ್ರಾಮಗಳಲ್ಲಿ ಹೆಚ್ಚಿನ ಲಿಂಬೆ ಬೆಳೆ ಒಣಗಿದೆ.

ಲಿಂಬೆ ಸಸಿ ನಾಟಿ ಮಾಡಿದ ಒಂದೇ ತಿಂಗಳು ಅಥವಾ ವರ್ಷಕ್ಕೆ ರೈತರ ಕೈಗೆ ಸಿಗಲ್ಲ. ಲಿಂಬೆ ನಾಟಿ ಮಾಡಿದ ಕನಿಷ್ಠ ಐದು ವರ್ಷಗಳ ಕಾಲವಾದರೂ ಪೋಷಣೆ ಮಾಡಬೇಕು. ಅಂದಾಗ ಲಿಂಬೆ ಕಾಯಿ ಹಿಡಿಯುತ್ತವೆ. ಅಷ್ಟರಲ್ಲಾಗಲೆ ರೈತ ಗೊಬ್ಬರ, ಔಷಧೋಪಚಾರ ಮಾಡಿ ಲಕ್ಷಾಂತರ ರೂ. ವ್ಯಯಿಸಿರುತ್ತಾನೆ. ಅಂತಹ ಲಿಂಬೆ ಬೆಳೆ ಒಣಗಿದರೆ ರೈತನ ಪರಿಸ್ಥಿತಿ ಹೇಳತೀರದಾಗುತ್ತದೆ.

ಅಭಿವೃದ್ಧಿ ಮಂಡಳಿ ನಿಷಿ¢ೕಯ: ಕಳೆದ ಎರಡು ವರ್ಷದಿಂದ ರಾಜ್ಯಮಟ್ಟದ ಲಿಂಬೆ ಅಭಿವೃದ್ಧಿ ಮಂಡಳಿ ಪಟ್ಟಣದಲ್ಲಿ ಪ್ರಾರಂಭವಾಗಿದೆ. ಆದರೆ ಅದರಿಂದ ಯಾವೊಬ್ಬ ರೈತರಿಗೆ ಸಹಕಾರಿಯಾಗಿಲ್ಲ. ಲಿಂಬೆ ಅಭಿವೃದ್ಧಿ ಮಂಡಳಿ ಇದೆ ಎಂಬುದೊಂದು ಬಿಟ್ಟರೆ, ಅಲ್ಲಿ ಬೇರೆನೂ ಇಲ್ಲ. ಇತ್ತೀಚೆಗೆ ವಿಜಯಪುರದಲ್ಲಿ ನಡೆದ ತ್ತೈ ಮಾಸಿಕ ಸಭೆಯಲ್ಲಿ ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಅವರನ್ನು ಲಿಂಬೆ ಅಭಿವೃದ್ದಿ ಮಂಡಳಿ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯ ಶಾಸಕ ಯಶವಂತರಾಯಗೌಡ ಪಾಟೀಲ ತಮ್ಮ ಅಸಮಾಧಾನ ಹೊರ ಹಾಕಿದ್ದರು.

Advertisement

ಲಿಂಬೆ ಅಭಿವೃದ್ಧಿ ಮಂಡಳಿ ರಚಿಸಲು ನಾನು ಸಾಕಷ್ಟು ಶ್ರಮಿಸಿದ್ದೇನೆ. ಆದರೆ ಆ ಮಂಡಳಿಗೆ ಸಚಿವರಾದ ನೀವು ಅನುದಾನ ಹಾಗೂ ಸಿಬ್ಬಂದಿ ನೀಡಿಲ್ಲ. ರೈತರಿಗೆ ಅದರಿಂದ ಒಂದು ಪೈಸೆ ಕೂಡ ಸಹಾಯವಾಗಿಲ್ಲ ಎಂದು ತೋಟಗಾರಿಕೆ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಕಳೆದ ಆರು ವರ್ಷದಿಂದ ಬೇಸಿಗೆಯಲ್ಲೂ ನೀರಿನ ಸಮಸ್ಯೆ ಎದುರಾಗುತ್ತಿತ್ತು. ಪ್ರತಿ ವರ್ಷ ಟ್ಯಾಂಕರ್‌ ನೀರುಣಿಸುತ್ತಿದ್ದೆವು. ಆದರೆ ಈ ಬಾರಿಯೂ ನೀರಿನ ಸಮಸ್ಯೆ ಎದುರಾಯಿತು. ಲಿಂಬೆ ಗಿಡದಿಂದ ಬರುವ ಲಾಭವೆಲ್ಲ ಟ್ಯಾಂಕರ್‌ನವರಿಗೆ ಕೊಟ್ಟು ಬೇಸತ್ತು ತೋಟದಲ್ಲಿನ 20 ವರ್ಷದ 200 ಲಿಂಬೆ ಗಿಡ ಕಡಿಯುತ್ತಿದ್ದೇನೆ.
•ಗುರಪ್ಪ ಅಗಸರ, ರೂಗಿ ಗ್ರಾಮದ ರೈತ

ತಾಲೂಕಿನಲ್ಲಿ ಮಳೆ ಕೊರತೆಯಿಂದ ಈ ಬಾರಿ ಎರಡೂವರೆ ಸಾವಿರ ಹೆಕ್ಟೇರ್‌ಗೂ ಹೆಚ್ಚು ಲಿಂಬೆ ಬೆಳೆ ಹಾನಿಯಾಗಿದೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸರ್ಕಾರದಿಂದ ಲಿಂಬೆ ಬೆಳೆಗಾರರಿಗೆ ಪರಿಹಾರ ಧನ ಬಂದರೆ ನೇರವಾಗಿ ಅವರ ಖಾತೆಗೆ ಜಮಾ ಮಾಡುತ್ತೇವೆ. •ಆರ್‌.ಟಿ. ಹಿರೇಮಠ.
ತೋಟಗಾರಿಕೆ ಇಲಾಖೆ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next