Advertisement

ರೈತರಿಗೆ ಬಿತ್ತು ಭೀಮೆ ಬರೆ

10:43 AM Aug 29, 2019 | Naveen |

ಉಮೇಶ ಬಳಬಟ್ಟಿ
ಇಂಡಿ:
ಭೀಮಾ ನದಿ ಪಾತ್ರದಲ್ಲಿ ಪ್ರವಾಹ ಉಂಟಾಗಿ ರೈತರು ಬಿತ್ತನೆ ಮಾಡಿದ ಬೆಳೆಗಳೆಲ್ಲ ನೀರು ಪಾಲಾಗಿದ್ದರಿಂದ ರೈತರ ಜೀವನ ಚಿಂತಾಕ್ರಾಂತವಾಗಿದೆ.

Advertisement

ಇಂಡಿ ತಾಲೂಕಿನ ಹಿಂಗಣಿ, ಬರಗುಡಿ, ಹಳೇ ಪಡನೂರ, ಶಿರಗೂರ ಇನಾಮ್‌, ಗುಬ್ಬೇವಾಡ, ಅಗರಖೇಡ, ಚಿಕ್ಕಮಣೂರ, ಭುಯ್ನಾರ, ನಾಗರಳ್ಳಿ, ಖೇಡಗಿ, ರೋಡಗಿ, ಮಿರಗಿ ಮತ್ತು ಚಡಚಣ ತಾಲೂಕಿನ ಚನೆಗಾಂವ, ಅಣಚಿ, ಗೋವಿಂದಪುರ, ದಸೂರ, ಉಮರಜ, ಸಂಖ, ಟಾಕಳಿ, ನಿವರಗಿ, ರೇವತಗಾಂವ, ಉಮರಾಣಿ, ಹತ್ತಳ್ಳಿ, ಶಿರನಾಳ, ಮರಗೂರ, ಧೂಳಖೇಡ, ಶಿರಗೂರ ಖಾಲ್ಸಾ ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿದೆ. ಎಲ್ಲ ಗ್ರಾಮಗಳು ಸೇರಿ ನೂರಕ್ಕೂ ಹೆಚ್ಚು ಕುಟುಂಬಗಳು ತಮ್ಮ ಮನೆ ಬಿಟ್ಟು ಬೇರೆಡೆ ವಾಸವಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿ ಅನೇಕರು ಸೂಕ್ತ ಸ್ಥಳಕ್ಕೆ ತೆರಳಿದ್ದಾರೆ.

ಈಗ ಪ್ರವಾಹ ಕಡಿಮೆಯಾಗಿ ನದಿಯಲ್ಲಿ ಸಣ್ಣ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಸಾವಿರಾರು ಹೆಕ್ಟೇರ್‌ ಪ್ರದೇಶಗಳಲ್ಲಿ ನೀರು ನುಗ್ಗಿದ್ದರಿಂದ ಕಬ್ಬು, ತೊಗರಿ ಸೇರಿದಂತೆ ಇನ್ನಿತರ ಬೆಳೆೆಗಳು ಹಾನಿಯಾಗಿ ಅಂದಾಜು 12 ಕೋಟಿ ರೂ. ರೈತರಿಗೆ ನಷ್ಟವಾಗಿದೆ ಎಂದು ಕಂದಾಯ ಹಾಗೂ ಕೃಷಿ ಇಲಾಖೆ ಅಂದಾಜಿಸಿದೆ.

ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಹೋಗಿದ್ದಾರೆ. ಆದರೆ ಇದುವರೆಗೂ ರೈತರಿಗೆ ಪರಿಹಾರ ನೀಡುವ ಕಾರ್ಯ ಮಾಡಿಲ್ಲ.ಸಾಕಷ್ಟು ರೈತರ ಬೆಳೆಗಳು ನೀರಲ್ಲಿ ಕೊಚ್ಚಿ ಹೋಗಿವೆ. ಅಧಿಕಾರಿಗಳು ನಮಗೆ ಪರಿಹಾರ ಒದಗಿಸುವ ಕಾರ್ಯ ಮಾಡಬೇಕೆಂದು ಸಂತ್ರಸ್ತ ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಇಂಡಿ ಹಾಗೂ ಚಡಚಣ ತಾಲೂಕಿನ 28 ಹಳ್ಳಿಗಳ ಅಂದಾಜು 3,500 ರೈತರ 9,000 ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು ಹಾಗೂ ತೊಗರಿ ಸೇರಿದಂತೆ ಇನ್ನಿತರ ಬೆಳೆಗಳು ಭೀಮಾ ನದಿ ಪ್ರವಾಹದಿಂದ ಹಾಳಾಗಿವೆ. ಕಂದಾಯ ಇಲಾಖೆ ಹಾಗೂ ಕೈಷಿ ಇಲಾಖೆಯಿಂದ ಜಂಟಿ ಸರ್ವೇ ಮಾಡಲಾಗುತ್ತಿದೆ. ಸರ್ಕಾರಕ್ಕೆ ಹಾನಿಯಾದ ರೈತರಿಗೆ ಪರಿಹಾರ ನೀಡಲು 12 ಕೋಟಿ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ.
ಮಹಾದೇವಪ್ಪ ಏವೂರ,
 ಸಹಾಯಕ ಕೃಷಿ ನಿರ್ದೇಶಕ ಇಂಡಿ

Advertisement

ಭೀಮಾನದಿ ಪ್ರವಾಹದಿಂದ ನಮ್ಮ ಹೊಲ ಮತ್ತ ನಮ್ಮೂರಿನ ಭಾಳ ಮಂದಿ ಜಮೀನ್ದಾನು ಬೆಳ್ಯಾಗ ನೀರು ಹೊಕ್ಕು ಬೆಳಿ ಎಲ್ಲ ಹಾಳಾಗ್ಯಾವ್ರಿ. ನಮ್ಮೂರಿಗೆ ಅಧಿಕಾರಿಗಳು ಮತ್ತ ಎಂಎಲ್ಎ ಅವರು ಬಂದು ಹೋಗ್ಯಾರ್ರೀ, ಪರಿಹಾರ ಕೊಡಸೋ ವ್ಯವಸ್ಥಾ ಮಾಡ್ತೀನಿ ಅಂತ ಹೇಳ್ಯಾರ್‌.
ಸಿದ್ದಾರೂಢ ಮರಗೂರ,
 ಗುಬ್ಬೇವಾಡ ಗ್ರಾಮಸ್ಥ

ಭೀಮಾ ನದಿ ಪಾತ್ರದಲ್ಲಿ ಸಾವಿರಾರು ರೈತರ ಬೆಳೆಗಳು ಹಾನಿಯಾಗಿವೆ. ಈ ಕುರಿತು ಸ್ವತಃ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ.ಅಧಿಕಾರಿಗಳು ಸರ್ವೇ ಮಾಡುತ್ತಿದ್ದಾರೆ. ಪರಿಹಾರಕ್ಕಾಗಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದೇನೆ. ಶೀಘ್ರದಲ್ಲೇ ಸರ್ಕಾರದಿಂದ ರೈತರಿಗೆ ಪರಿಹಾರ ಒದಗಿಸುವ ಕಾರ್ಯ ಮಾಡುತ್ತೇನೆ.
ಯಶವಂತರಾಯಗೌಡ ಪಾಟೀಲ,
 ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next