ಇಂಡಿ: 12ನೇ ಶತಮಾನದ ಅಣ್ಣ ಬಸವಣ್ಣ, ಸಾಮಾಜಿಕ ಧಾರ್ಮಿಕ ಕ್ರಾಂತಿಕಾರಕ ಯುಗ ಪುರುಷರಾಗಿದ್ದು ಅಂದಿನ ಸಮಾಜದಲ್ಲಿರುವ ಅಂಧ ಶ್ರದ್ದೆ ಮೂಢನಂಬಿಕೆಗಳನ್ನು ಅಸಮಾನತೆ ವಿರುದ್ಧ ಧ್ವನಿ ಎತ್ತಿದ ಏಕೈಕ ವ್ಯಕ್ತಿ ಎಂದು ಬಸವ ಸಮಿತಿ ಅಧ್ಯಕ್ಷ ಅನಿಲಗೌಡ ಬಿರಾದಾರ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಮೂರ್ತಿಗೆ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ಅಂದಿನ ಸಮಾಜದಲ್ಲಿ ಮೇಲು, ಕೀಳು ಉಳ್ಳವ, ಇಲ್ಲದವ ಎಂಬ ಭೇದ ಭಾವ ಉಗ್ರ ಸ್ವರೂಪದಲ್ಲಿದ್ದಾಗ ಮಾನವೀಯತೆ ಸತ್ತು ಹೋಗಿತ್ತು. ಇಂತಹ ಅಸಮಾನತೆಯನ್ನು ಹೋಗಲಾಡಿಸಿದವರೆ ಬಸವಣ್ಣನವರು ಎಂದರು.
ಕಾಯಕ ಮತ್ತು ದಾಸೋಹ ಅತ್ಯಂತ ಪವಿತ್ರ. ಎಲ್ಲರೂ ದುಡಿಯಬೇಕು, ದುಡಿಯದೆ ತಿನ್ನುವವರು ವಿಷ ತಿಂದಂತೆ ಎಂದಿದ್ದಾರೆ. ಕಾಯಕದಲ್ಲಿ ಯಾವುದೇ ಜಾತಿ ಇಲ್ಲ. ಬಸವಣ್ಣ ಜಾತಿ ಧರ್ಮವನ್ನು ಮೀರಿನಿಂತ ಕಾಯಕ ಯೋಗಿ. ಜನ ಸಾಮಾನ್ಯರ, ದಲಿತರ, ನೊಂದವರ ಧ್ವನಿಯಾಗಿ ಎಲ್ಲರಿಗೂ ಲೇಸನ್ನೆ ಬಯಸಿ ಬಾಳಿ ಬದುಕಿದ್ದಾರೆ. ಇಂದು ಬಸವಣ್ಣನವರನ್ನು ಒಂದೇ ಜಾತಿ ಜನಾಂಗಕ್ಕೆ ಸೀಮಿತಗೊಳಿಸುವದು ಸರಿಯಲ್ಲ. ಯಾರು ದೇಶದ ಬಗ್ಗೆ ಸಮಾಜದ ಹಾಗೂ ದೀನ ದಲಿತರ ಬಗ್ಗೆ ಚಿಂತನೆ ಮಾಡುತ್ತಾರೆಯೊ ಅವರು ವಿಶ್ವ ಮಾನವರಾಗುತ್ತಾರೆ. ಇಂತಹವರನ್ನು ಇಡಿ ಮಾನವ ಕುಲಕೋಟಿ ಪೂಜಿಸುವಂತಾಗಬೇಕು. ಬಸವ ತತ್ವದ ಮೂಲಕ ಸಾಗಿದರೆ ಯಾವುದೇ ಆತಂಕವಿಲ್ಲ ಎಂದು ಹೇಳಿದರು.
ಭೀಮಾಶಂಕರ ಪ್ರಚಂಡಿ, ದಯಾನಂದ ಪಾಟೀಲ, ಶಾಂತು ಹದಗಲ್, ಅಪ್ಪು ಪವಾರ, ಮಚೆಂದ್ರ ಕದಂ, ಜಗದೀಶ ಕುಂಬಾರ, ನೀಲಪ್ಪ ಖಾನಾಪುರ, ಉಮೇಶ ಲಚ್ಯಾಣ, ಸಂತೋಷ ಗೌಳಿ, ಪ್ರಭು ಶಿರಕನಹಳ್ಳಿ, ಮುಖೇಶ ಕಾಂಬಳೆ, ಸಂತೋಷ ಪವಾರ, ಸಂತೋಷ ಸಂಖ, ಸಿದ್ದು ಬೇಲ್ಲಾಳ, ಬಾಳು ಗೌಳಿ, ಬಸವರಾಜ ನಡಗಡ್ಡಿ, ಪ್ರವೀಣ ಅಚ್ಚೆಗಾಂವ ಇದ್ದರು.