Advertisement

ಕುರಿಗಾಹಿಗಳ ನಿದ್ದೆಗೆಡಿಸಿದ ಅಪರಿಚಿತ ಪ್ರಾಣಿ

01:05 PM Aug 05, 2019 | Naveen |

ಉಮೇಶ ಬಳಬಟ್ಟಿ
ಇಂಡಿ:
ಕಳೆದ ನಾಲ್ಕು ದಿನಗಳ ಹಿಂದೆ ತಾಲೂಕಿನ ಇಂಗಳಗಿ ಗ್ರಾಮದ ಮಾನೇವಸ್ತಿಯಲ್ಲಿ ಅನಾಮಧೇಯ ಪ್ರಾಣಿಯೊಂದು ಕುರಿಗಳನ್ನು ಕತ್ತರಿಸಿ ಕುರಿಗಾಹಿಗಳು ನಿದ್ದೆಗೆಡಿಸಿತ್ತು. ಅದು ಮಾಸುವ ಮುನ್ನವೇ ಶನಿವಾರ ತಾಲೂಕಿನ ಆಳೂರ ಗ್ರಾಮದಲ್ಲಿಯೂ ಅದೇ ಪ್ರಕರಣ ಮರುಕಳಿಸಿದೆ.

Advertisement

ತಾಲೂಕಿನ ಇಂಗಳಗಿ, ಆಳೂರ, ಮಾವಿನಳ್ಳಿ, ಹಿರೇಬೇವನೂರ ಸೇರಿದಂತೆ ಇನ್ನಿತರ ಗ್ರಾಮದ ಕೆಲ ರೈತರ ತೋಟದಲ್ಲಿ ಶನಿವಾರ ಮಧ್ಯಾಹ್ನ ಸರಿಸುಮಾರು 20 ಕುರಿಗಳನ್ನು ಅನಾಮಧೇಯ ಪ್ರಾಣಿ ಕಚ್ಚಿ ಅರ್ಧಂಬರ್ಧ ತಿಂದು ಪರಾರಿಯಾಗಿದೆ.

ಕಳೆದ ಶನಿವಾರ ಇಂಗಳಗಿ ಗ್ರಾಮದ ಘೇನು ರಾಠೊಡ ಅವರ 3 ಕುರಿಗಳು, ಪಂಡೀತ ವಾಘಮೋರೆ ಅವರ ಒಂದು ಕುರಿ ಸೇರಿದಂತೆ ಪಕ್ಕದ ತೋಟದಲ್ಲಿರುವ ಮಳಸಿದ್ದ ನಾಗಣಸೂರ ಅವರ ನಾಲ್ಕು ಕುರಿಗಳು ಹಾಗೂ ಮಾಂತು ರಾಠೊಡ ಎಂಬುವವರ ನಾಲ್ಕು ಕುರಿಗಳು ಅನಾಮಧೇಯ ಪ್ರಾಣಿಗೆ ಬಲಿಯಾಗಿವೆ.

ಇನ್ನು ಈ ಶನಿವಾರ ತಾಲೂಕಿನ ಆಳೂರ ಗ್ರಾಮದ ಧರ್ಮರಾಜ ಮಾದರ ಅವರ 9 ಕುರಿ ಮತ್ತು ಅದೇ ಗ್ರಾಮದ ತುಕಾರಾಮಗೌಡ ಪಾಟೀಲ ಅವರ 6 ಕುರಿಗಳನ್ನು ಬಲಿ ತೆಗೆದುಕೊಂಡಿದೆ. ಈ ಪ್ರಾಣಿ ಯಾವುದೆಂದು ಗೊತ್ತಾಗುತ್ತಿಲ್ಲ. ಹಾಡು ಹಗಲೆ ತೋಟಕ್ಕೆ ನುಗ್ಗಿ ಕೇವಲ ಕುರಿಗಳನ್ನೇ ಗುರಿಯಾಗಿಸಿ ದಾಳಿ ನಡೆಸುತ್ತಿವೆ.

ಕನಿಷ್ಠ 6-7 ಸಾವಿರ ಬೆಲೆ ಬಾಳುವ ಕುರಿಗಳನ್ನು ಸಾಕಿದ ರೈತರಿಗೆ ಈಗ ಹಗಲು ರಾತ್ರಿ ಎನ್ನದೆ ಕುರಿಗಳನ್ನು ಕಾವಲು ಮಾಡಬೇಕಾಗಿ ಬಂದಿದೆ. ಈ ಅನಾಮಧೇಯ ಪ್ರಾಣಿಗಳನ್ನು ಪತ್ತೆ ಹಚ್ಚಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ರೈತರು ತಿಳಿಸಿದ್ದಾರೆ.

Advertisement

ಒಟ್ಟಿನಲ್ಲಿ ಆ ಪ್ರಾಣಿ ಯಾವುದೆಂದು ತಿಳಿದು ಅದನ್ನು ಕಾಡಿಗಟ್ಟುವ ಕೆಲಸ ಮಾಡಲು ಅರಣ್ಯ ಇಲಾಖೆ ಮುಂದಾಗಿ ಮುಂದಾಗುವ ಅನಾಹುತ ತಪ್ಪಿಸಬೇಕಿದೆ. ಇನ್ನು ಸತ್ತ ಕುರಿಗಳ ಮಾಲೀಕರಿಗೆ ಪಶು ಅಥವಾ ಅರಣ್ಯ ಇಲಾಖೆಯವರು ಪರಿಹಾರ ಒದಗಿಸುವ ಕಾರ್ಯ ಮಾಡಬೇಕಿದೆ.

ಈ ಪ್ರಾಣಿ ಯಾವುದೆಂದು ಗೊತ್ತಾಗಿಲ್ಲ. ಈ ಮೊದಲು ಇಂಗಳಗಿ ಗ್ರಾಮದಲ್ಲಿಯೂ ಕುರಿಗಳನ್ನು ಕೊಂದಿತ್ತು. ಈಗ ಆಳೂರ ಗ್ರಾಮದಲ್ಲಿ ಕುರಿಗಳನ್ನು ಕೊಂದಿದೆ. ಜಿಟಿ-ಜಿಟಿ ಮಳೆಯಾಗಿದ್ದರಿಂದ ಆ ಪ್ರಾಣಿಯ ಪಾದದ ಕುರಿತು ಗುರುತು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ರೈತರಿಗೆ ದೂರವಾಣಿ ನಂಬರ್‌ ನೀಡಿದ್ದೇವೆ. ಅನಾಮಧೇಯ ಪ್ರಾಣಿ ಕಂಡರೆ ಕರೆ ಮಾಡಲು ತಿಳಿಸಿದ್ದೇವೆ. ಅದನ್ನು ಹಿಡಿಯಲು ಒಂದು ತಂಡ ರಚನೆ ಮಾಡಿದ್ದೇವೆ. ಇಂತಹ ಪ್ರಕರಣ ಎಲ್ಲಿಯಾದರೂ ಕಂಡರೆ ಕೂಡಲೆ ನಮಗೆ ಕರೆ (9972612455) ಮಾಡಿ ಮಾಹಿತಿ ನೀಡಬೇಕು.
ರಶೀದ್‌ ಮಾಶಾಳ,
 ಉಪ ಅರಣ್ಯಾಧಿಕಾರಿ ಇಂಡಿ ವಲಯ

ರ್ಯಾಟಲ್ಡಾನ್‌ ಎನ್ನೋ ಸಾಕು ನಾಯಿ ಇರಬಹುದು ಎಂಬ ಶಂಕೆ ಇದೆ. ಆಳೂರ ಗ್ರಾಮದಲ್ಲಿ ಆ ನಾಯಿಯನ್ನು ರೈತರು ಹಿಡಿದಿದ್ದರು. ಆದರೆ ಅದೇ ನಾಯಿ ಕಚ್ಚಿ ಕೊಂದಿದೆ ಎಂದು ಯಾರೂ ನೋಡಿಲ್ಲ. ಹೀಗಾಗಿ ನಾವು ಇನ್ನೂ ಬೇರೆ ಪ್ರಾಣಿ ಇರಬಹುದೇನೋ ಎಂಬ ಅನುಮಾನದಲ್ಲಿದ್ದೇವೆ. ಅದನ್ನು ಪತ್ತೆ ಹಚ್ಚಲು ತಂಡ ರಚಿಸಿ ಕಾರ್ಯ ಪ್ರವೃತ್ತರಾಗಿದ್ದೇವೆ.
ಆರ್‌.ಆರ್‌. ಚವ್ಹಾಣ,
 ವಲಯ ಅರಣ್ಯ ಅಧಿಕಾರಿ

ನಮ್ಮ ಗ್ರಾಮದ ನಾಲ್ಕು ರೈತರ 25 ಕುರಿಗಳನ್ನು ಯವುದೋ ಅನಾಮಧೇಯ ಪ್ರಾಣಿ ಬಂದು ಕಚ್ಚಿ ಕೊಂದಿದೆ. ಅರಣ್ಯ ಇಲಾಖೆಯವರು ಬಂದು ಫೋಟೊ ತೆಗೆದುಕೊಂಡು ಹೋಗಿದ್ದಾರೆ. ಪಶು ವೈದ್ಯರ ದೃಢೀೕಕರಣ ನೀಡುವಂತೆ ಹೇಳಿದ್ದಾರೆ. ಮೂರು ದಿನ ಪಶು ಆಸ್ಪತ್ರೆಗೆ ಹೋದರೂ ವೈದ್ಯರೇ ಸಿಕ್ಕಿಲ್ಲ. ಹೀಗಾಗಿ ನಮಗೆ ಇನ್ನೂ ಪರಿಹಾರವೂ ಬಂದಿಲ್ಲ.
ಘೇನೂ ರಾಠೊಡ,
 ಕುರಿಗಾಹಿ, ಇಂಗಳಗಿ

Advertisement

Udayavani is now on Telegram. Click here to join our channel and stay updated with the latest news.

Next