ಬೆಂಗಳೂರು: ಮಂಗಳವಾರ ರಾಜ್ಯದಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ 14 ಲೋಕಸಭೆ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ.
ಬಹಿರಂಗ ಪ್ರಚಾರಕ್ಕೆ ಅಂತಿಮ ದಿನವಾದ ರವಿವಾರ ಸಂಜೆ 6 ಗಂಟೆಯವರೆಗೆ ಕಾಂಗ್ರೆಸ್- ಜೆಡಿಎಸ್, ಬಿಜೆಪಿಯ ಘಟಾನುಘಟಿ ನಾಯಕರು ತಮ್ಮ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿ ಮತದಾರನ ಮನವೊಲಿಕೆಯ ಅಂತಿಮ ಪ್ರಯತ್ನ ನಡೆಸಿದರು.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಪ್ರಚಾರ ಸಭೆ ನಡೆಸಿದರು. ಸಿದ್ದರಾಮಯ್ಯ ಬೆಳಗಾವಿ ಮತ್ತು ಬಾಗಲಕೋಟೆ ಕ್ಷೇತ್ರಗಳಲ್ಲಿ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡಿದ್ದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರಾಯಚೂರು ಕ್ಷೇತ್ರದಲ್ಲಿ ಪ್ರಚಾರದಲ್ಲಿ ಭಾಗಿಯಾಗಿದ್ದರು.
ಕಲಬುರಗಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್, ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಕೆ.ಎಸ್. ಈಶ್ವರಪ್ಪ, ಚಿಕ್ಕೋಡಿಯಲ್ಲಿ ಶೋಭಾ ಕರಂದ್ಲಾಜೆ, ಬೆಳಗಾವಿಯಲ್ಲಿ ಅರವಿಂದ ಲಿಂಬಾವಳಿ, ಬಾಗಲಕೋಟೆಯಲ್ಲಿ ಗೋವಿಂದ ಕಾರಜೋಳ, ವಿಜಯಪುರದಲ್ಲಿ ತೇಜಸ್ವಿ ಸೂರ್ಯ, ಬಳ್ಳಾರಿಯಲ್ಲಿ ಡಿ.ವಿ. ಸದಾನಂದ ಗೌಡ, ಶ್ರೀರಾಮುಲು ಹುಬ್ಬಳ್ಳಿಯಲ್ಲಿ, ಧಾರವಾಡದಲ್ಲಿ ಜಗದೀಶ್ ಶೆಟ್ಟರ್ ರೋಡ್ ಶೋ ನಡೆಸಿ ಮತ ಯಾಚನೆ ನಡೆಸಿದರು. ಸಂಜೆ ಆರು ಗಂಟೆಗೆ ಬಹಿರಂಗ ಪ್ರಚಾರ ಮುಕ್ತಾಯವಾಗುತ್ತಿದ್ದಂತೆ ಪ್ರಚಾರದಲ್ಲಿ ನಿರತರಾಗಿದ್ದ ನಾಯಕರು ಕ್ಷೇತ್ರ ಬಿಟ್ಟು ರಾಜಧಾನಿಯತ್ತ ಮುಖ ಮಾಡಿದರು.