Advertisement

ಕೊನೆಗೂ ವಾಹನ ಸಂಚಾರಕ್ಕೆ ಅನುಮತಿ; ಘನ ವಾಹನಗಳು ಹೋಗುವಂತಿಲ್ಲ

09:48 PM Aug 01, 2019 | Sriram |

ವಿದ್ಯಾನಗರ: ಪೆರ್ಲ-ಬದಿಯಡ್ಕ ಅಂತಾರಾಜ್ಯ ರಸ್ತೆಯ ಕರಿಂಬಿಲದಲ್ಲಿ ಮಣ್ಣು ಕುಸಿತದಿಂದ ಉಂಟಾದ ಸಮಸ್ಯೆಗೆ ಕೊನೆಗೂ ತೆರೆಬಿದ್ದಿದೆ. ಜನಸಾಮಾನ್ಯರು ನಿಟ್ಟುಸಿರು ಬಿಡುವಂತಾಗಿದೆ.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಸಜಿತ್‌ ಬಾಬು ವಾಹನ ಸಂಚಾರಕ್ಕೆ ಅನುಮತಿ ನೀಡಿ ಪ್ರಕಟನೆ ಹೊರಡಿಸಿದ್ದು ಜನರ ಬಹುದಿನಗಳ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ. ರಸ್ತೆ ತೊಂದರೆಗಳಿಂದ ಬಳಲಿದ್ದ ಜನತೆಯ ಕಷ್ಟವನ್ನು ನೋಡಿ ಪರಿಹಾರ ಕಾಣುವ ನಿಟ್ಟಿನಲ್ಲಿ ಈ ಸಭೆಯನ್ನು ಕರೆಯಲಾಗಿತ್ತು. ಗುರುವಾರ ಮಧ್ಯಾಹ್ನದಿಂದಲೇ ವಾಹನ ಸಂಚಾರ ಪುನರಾರಂಭಗೊಂಡಿದೆ. ಈ ಘಟನೆಯ ಬಳಿಕ ಜನಜೀವನ ಅಸ್ತವ್ಯಸ್ತಗೊಂಡಿದ್ದುದು ಮಾತ್ರವಲ್ಲದೆ ವ್ಯಾಪಾರವಿಲ್ಲದೆ‌ ವ್ಯಾಪಾರಿಗಳು, ವಾಹನ ಚಾಲಕರು ಪಾಡುಪಡುವಂತಾಗಿತ್ತು.

ಕಳೆದ ಹತ್ತು ದಿನಗಳಿಂದ ಶಾಲೆಗೆ ಹೋಗಲಾಗದೆ ಕೊರಗುತ್ತಿದ್ದ ವಿದ್ಯಾರ್ಥಿಗಳು, ತಮ್ಮ ದುಡಿಮೆಯ ಮುಕ್ಕಾಲು ಭಾಗ ರಿಕ್ಷಾಕ್ಕೆ ನೀಡಿ ಕಂಗಾಲಾಗಿದ್ದ ಬಡ ಕೂಲಿಯಾಳುಗಳು, ಪೇಟೆಯನ್ನು ಆಶ್ರಯಿಸಿದ್ದ ಕೃಷಿಕರು ಸೇರಿದಂತೆ ಎಲ್ಲರಲ್ಲೂ ಈ ತೀರ್ಮಾನವು ಉಲ್ಲಾಸ ಮೂಡಿಸಿದೆ. ನಿಷೇಧಾಜ್ಞೆ ಮೀರಿ ಕೆಲವು ವಾಹನಗಳು ಈ ದಾರಿಯಾಗಿ ಸಂಚರಿಸುತ್ತಿದ್ದವು. ಇದು ಜನರ ಅಸಮಾಧಾನಕ್ಕೂ ಕಾರಣವಾಗಿತ್ತು.

ಸಮಸ್ಯೆ ಬಗೆಹರಿಸಲು ಬೇಡಿಕೆಯೊಂದಿಗೆ ಬಿಜೆಪಿ ಪ್ರತಿಭಟನೆ ನಡೆಸಿತ್ತು. ವ್ಯಾಪಾರಿ ವ್ಯವಸಾಯಿ ಸಂಘ ಮತ್ತಿತರ ಸಂಘಟನೆಗಳೂ ತಮ್ಮ ಬೇಡಿಕೆ ಮುಂದಿಡುವ ಮೂಲಕ ಬೆಂಬಲ ನೀಡಿದ್ದರು, ಮಾತ್ರವಲ್ಲದೆ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಸಮಿತಿಯನ್ನೂ ರೂಪಿಸಲಾಗಿದೆ.

ವಾಹನ ಸಂಚಾರಕ್ಕೆ ಕೆಲವು ನಿಬಂಧನೆಗಳನ್ನು ಹೇರಲಾಗಿದ್ದು ಈ ಮಾರ್ಗವಾಗಿ ಸಂಚರಿಸುವ ಎಲ್ಲ ವಾಹನಗಳೂ ಖಡ್ಡಾಯವಾಗಿ ಅವುಗಳನ್ನು ಪಾಲಿಸುವಂತೆ ಕೋರಲಾಗಿದೆ. ಲೆಕ್ಕಕ್ಕಿಂತ ಹೆಚ್ಚು ಪ್ರಯಾಣಿಕರಿರುವ ಬಸ್ಸುಗಳು ನಿಂತು ಪ್ರಯಾಣಿಸುವ ಪ್ರಯಾಣಿಕರನ್ನು ಕರಿಂಬಿಲದ ಒಂದು ಬದಿಯಲ್ಲಿ ಇಳಿಸಿ ಮುಂದೆ ಸಾಗಬೇಕು. ಈ ಪ್ರಯಾಣಿಕರು ಕಾಲ್ನಡಿಗೆಯ ಮೂಲಕ ಸಾಗಿ ಕರಿಂಬಿಲದ ಇನ್ನೊಂದು ಬದಿಯಿಂದ ಅದೇ ಬಸ್ಸನ್ನು ಏರಿದ ಮೇಲೆ ಬಸ್ಸು ಮುಂದಕ್ಕೆ ಚಲಿಸಲಿದೆ. ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ಮಾತ್ರವೇ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಹೆಚ್ಚು ಭಾರಹೊತ್ತ ಗೂಡ್ಸ್‌ ಕ್ಯಾರಿಯರ್‌ ಮೊದಲಾದುವುಗಳ ಸಂಚಾರಕ್ಕೆ ಅನುಮತಿಯಿಲ್ಲ. ರಾತ್ರಿ ಪುತ್ತೂರಿನಿಂದ ಕಾಸರಗೋಡಿಗೆ ಬರುವ ಕೆಸ್ಸಾರ್ಟಿಸಿ ಬಸ್ಸಿಗೆ ಮಾತ್ರವೇ ಈ ಮಾರ್ಗವಾಗಿ ಸಂಚರಿಸುವ ಅನುಮತಿ ನೀಡಲಾಗಿದೆ. ಉಳಿದಂತೆ ಎಲ್ಲ ವಾಹನಗಳ ರಾತ್ರಿ ಸಂಚಾರ ನಿಷೇಧಿಸಲಾಗಿದೆ.

Advertisement

ಎಕ್ಸಿಕ್ಯೂಟಿವ್‌ ಎಂಜಿನಿಯರರ ಕಚೇರಿಯಲ್ಲಿ ನಡೆದ ಮಾತುಕತೆಯ ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಶಾಸಕ ಎನ್‌.ಎ. ನೆಲ್ಲಿಕುನ್ನು, ಜಿ.ಪಂ. ಅಧ್ಯಕ್ಷ, ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಶ್ರೀಕಾಂತ್‌, ಬದಿಯಡ್ಕ ಪಂ. ಮಾಜಿ ಅಧ್ಯಕ್ಷ ಮಾಹಿನ್‌ ಕೇಳ್ಳೋಟ್‌, ಬಸ್‌ ಓನರ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಗಿರೀಶ್‌, ಶ್ಯಾಮ್‌ ಪ್ರಸಾದ್‌ ಮಾನ್ಯ, ಕುಂಜಾರು ಮೊಹಮ್ಮದ್‌, ಚಂದ್ರಹಾಸ ರೈ, ಅವಿನಾಶ್‌ ರೈ ಬದಿಯಡ್ಕ, ಅನ್ವರ್‌ ಓಝೋನ್‌, ಬಾಲಕೃಷ್ಣ, ವಿಶ್ವನಾಥ ಪ್ರಭು, ಪುಷ್ಪಾವತಿ, ಲಕ್ಷ್ಮೀನಾರಾಯಣ ಪೈ, ಕೇರಳ ಕಾಂಗೇಸಿನ ಜೀವನ್‌ ಥೋಮಸ್‌, ಸಿಪಿಎಂನ ಜಗನ್ನಾಥ ರೈ, ಬದ್ರು ಮಾಸ್ಟರ್‌, ಜೆಡಿಎಸ್‌ನ ಕರುಣಾಕರ ಮಾಸ್ಟರ್‌ ಬದಿಯಡ್ಕ ಸೇರಿದಂತೆ ವಿವಿಧ ರಾಜಕೀಯ ಮುಖಂಡರು, ನೇತಾರರು ಉಪಸ್ಥಿತರಿದ್ದರು.

ಪರಿಸ್ಥಿತಿ ಅವಲೋಕನ
ಇಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ, ಭೂಗರ್ಭ ಶಾಸ್ತ್ರಜ್ಞರು ಹಾಗೂ ಎಂಜಿನಿಯರುಗಳ ಬಳಿ ಚರ್ಚಿಸಿ ಪೆರ್ಲ-ಬದಿಯಡ್ಕ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಆದರೆ ಘನವಾಹನಗಳು ಹೋಗದಂತೆ ತಡೆಯಲಾಗು ವುದು. ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಎದುರಾಗದಿದ್ದಲ್ಲಿ ರಾತ್ರಿ ವೇಳೆಯೂ ವಾಹನ ಸಂಚಾರಕ್ಕೆ ಅನುಮತಿ ನೀಡುವ ಕುರಿತು ತೀರ್ಮಾನಿಸಲಾಗುವುದು.
-ಡಾ|ಸಜಿತ್‌ಬಾಬು,
ಜಿಲ್ಲಾಧಿಕಾರಿ.

ದೊಡ್ಡ ಸಮಸ್ಯೆ ದೂರ
ಜನರ ಸಂಕಷ್ಟಗಳನ್ನು ಕಂಡು ಆದಷ್ಟು ಬೇಗ ಪರಿಹಾರ ಒದಗಿಸುವ ಪ್ರಯತ್ನದ ಫಲವಾಗಿ ಇಂದು ರಸ್ತೆಯ ಮೂಲಕ ವಾಹನ ಸಂಚಾರಕ್ಕೆ ಅನುಮತಿ ಲಭಿಸಿದೆ. ಜನರ ಬಹುದೊಡ್ಡ ಸಮಸ್ಯೆ ದೂರವಾಗಿ ಇಂದಿನಿಂದ ನೆಮ್ಮದಿಯಾಗಿ ಸಂಚರಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಇದಕ್ಕಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು.
-ಎನ್‌.ಎ. ನೆಲ್ಲಿಕುನ್ನು,
ಕಾಸರಗೋಡು ಶಾಸಕರು.

Advertisement

Udayavani is now on Telegram. Click here to join our channel and stay updated with the latest news.

Next