ಧಾರವಾಡ: ನೆರೆ ಪರಿಹಾರ ಅನುದಾನ ಹಾಗೂ ಕಾಮಗಾರಿಗಳಲ್ಲಿ ಜಿಪಂ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಜಿಲ್ಲಾಡಳಿತ ಹಾಗೂ ಜಿಪಂ ಅಧಿಕಾರಿಗಳ ವಿರುದ್ಧ ಜಿಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಅಹೋರಾತ್ರಿ ಧರಣಿ ಶುಕ್ರವಾರ ಅಂತ್ಯಗೊಂಡಿದೆ.
ಜಿಪಂ ಕಚೇರಿಯ ಪ್ರವೇಶ ದ್ವಾರದ ಬಳಿ ಡಿ. 23ರಿಂದ ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ ಹಾಗೂ ಉಪಾಧ್ಯಕ್ಷ ಶಿವಾನಂದ ಕರಿಗಾರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಅಹೋರಾತ್ರಿ ಧರಣಿಯು ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ ಅವರ ಭರವಸೆಯಿಂದ ಸಮಾಪ್ತಿಗೊಂಡಿತು.
ಧರಣಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಎಸ್.ಆರ್. ಪಾಟೀಲ, ಬರಗಾಲ, ಅತಿವೃಷ್ಟಿ ಸಂದರ್ಭದಲ್ಲಿ ಪಕ್ಷಬೇಧ ಮರೆತು ಜನರ ಹಿತದೃಷ್ಟಿಯಿಂದ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು. ಆದರೆ, ಬಿಜೆಪಿ ಮಾತ್ರ ದ್ವೇಷದ ರಾಜಕಾರಣ ಮಾಡುತ್ತಿದೆ.ನಿತ್ಯ ಜನರ ಮಧ್ಯೆ ಇರುವ ಜಿಪಂ ಸದಸ್ಯರನ್ನು ಅಧಿಕಾರಿಗಳು ಕಡೆಗಣಿಸುವುದು ಸರಿಯಲ್ಲ. ಮನೆ ಬಿದ್ದಿರುವ ಕುರಿತು ನಡೆದ ಸಮೀಕ್ಷೆಯಲ್ಲಿ ಅನ್ಯಾಯವಾಗಿದ್ದು, ಉಂಟಾಗಿರುವ ಲೋಪದೋಷಗಳನ್ನು ಸರಿಪಡಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೂ ಮಾತನಾಡುತ್ತೇನೆ. ಜಿಪಂ ಸದಸ್ಯರಿಗೆ ಆಗಿರುವ ಅನ್ಯಾಯ ಕುರಿತು ಮೇಲ್ಮನೆಯಲ್ಲಿ ಚರ್ಚಿಸುವೆ. ಹೀಗಾಗಿ ಧರಣಿ ವಾಪಸ್ ತೆಗೆದುಕೊಳ್ಳುವಂತೆ ಹೇಳಿದರು. ಇದಕ್ಕೆ ಒಪ್ಪಿ ಜಿಪಂ ಸದಸ್ಯರು ಧರಣಿ ಹಿಂಪಡೆದರು.
ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಸಚಿವ ಆಲ್ಕೋಡ್ ಹನುಮಂತಪ್ಪ, ಜಿಪಂ ಸದಸ್ಯರಾದ ಉಮೇಶ ಹೆಬಸೂರು, ಜಗದೀಶ ಉಪ್ಪಿನ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ ಪಾಟೀಲ, ಹು-ಧಾ ಮಹಾನಗರ ಕಾಂಗ್ರೆಸ್ ಅಧ್ಯಕ್ಷ ಅಲ್ತಾಪ್ ಹಳ್ಳೂರ, ಮಹಿಳಾ ಅಧ್ಯಕ್ಷೆ ಶಾಂತಮ್ಮ ಗುಜ್ಜಳ ಇನ್ನಿತರರಿದ್ದರು.