ಅಮೆರಿಕದ 46ನೇ ಅಧ್ಯಕ್ಷರಾಗಿ ಡೆಮಾಕ್ರಟಿಕ್ ನಾಯಕ ಜೋ ಬೈಡೆನ್ ಅಧಿಕಾರ ವಹಿಸಿಕೊಂಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ರಿಪಬ್ಲಿಕನ್ ಪಕ್ಷದ ನೀತಿಗಳಿಗೆ ಸಾಕ್ಷಿಯಾದ ಜಗತ್ತು, ಈಗ ಡೆಮಾಕ್ರಾಟ್‌ಗಳ ಆಡಳಿತ ಹೇಗಿರಲಿದೆಯೋ ಎಂದು ಕುತೂಹಲ ತಾಳಿವೆ. ಬೈಡೆನ್ ಸರ್ಕಾರದ ವಿದೇಶಾಂಗ ನೀತಿ ತಮ್ಮೆಡೆಗೆ ಹೇಗಿರಬಹುದು ಎಂದು ಪ್ರತಿಯೊಂದು ದೇಶವೂ ಲೆಕ್ಕಾಚಾರ ಹಾಕತೊಡಗಿವೆ. ಆದರೆ, ಅವೆಲ್ಲದಕ್ಕೂ ಮುನ್ನ ಬೈಡೆನ್ ಅಮೆರಿಕದ ವಿಷಯದಲ್ಲಿ ಟ್ರಂಪ್ ತಂದಿದ್ದ ಕೆಲವು ಪ್ರಮುಖ ನೀತಿಗಳನ್ನು ಬದಲಿಸಲೇಬೇಕು ಎಂದು ಪಣತೊಟ್ಟಂತಿದೆ.
ಈ ಕಾರಣಕ್ಕಾಗಿ, ಆಡಳಿತದ ಮೊದಲ ದಿನವೇ ಅವರು ಪ್ಯಾರಿಸ್ ಒಪ್ಪಂದದಲ್ಲಿ ಅಮೆರಿಕದ ಮರುಸೇರ್ಪಡೆ, ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಸಂಬಂಧ ಸುಧಾರಣೆ, ವಿವಿಧ ಮುಸ್ಲಿಂ ರಾಷ್ಟ್ರಗಳ ನಾಗರಿಕರ ಮೇಲಿನ ನಿರ್ಬಂಧ ತೆರವು ಹಾಗೂ ಮುಖ್ಯವಾಗಿ ಅಮೆರಿಕ-ಮೆಕ್ಸಿಕೋ ಗಡಿಯಲ್ಲಿ ನಿರ್ಮಾಣವಾಗುತ್ತಿರುವ ಟ್ರಂಪ್‌ರ ಮಹತ್ವಾಕಾಂಕ್ಷೆಯ ಗೋಡೆ ನಿರ್ಮಾಣ ಕಾರ್ಯವನ್ನು ನಿಲ್ಲಿಸಲು ಆದೇಶಿಸುವ ಮೂಲಕ ಹಲವು ಪ್ರಮುಖ ಬದಲಾವಣೆಗೆ ನಾಂದಿ ಹಾಡಲಿದ್ದಾರೆ. ಒಟ್ಟಾರೆಯಾಗಿ ಆರಂಭಿಕ ಸಮಯದಲ್ಲೇ 17ಕ್ಕೂ ಹೆಚ್ಚು ನೀತಿಗಳನ್ನು ಬದಲಿಸಲಿರುವುದು ಖಚಿತ ಎನ್ನಲಾಗುತ್ತಿದೆ.
ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದದ್ದು ವಲಸಿಗರ ವಿರುದ್ಧ ಸಮರ ಸಾರಿ ಹಾಗೂ ಅಮೆರಿಕನ್ನರಿಗೇ ಆದ್ಯತೆ ಎಂಬ ಭರವಸೆಗಳ ಮೂಲಕ. ಮುಂದೆ ಅವರು ಎಚ್1ಬಿ ವೀಸಾ ರದ್ದತಿಯಂಥ ಕ್ರಮಕ್ಕೆ ಮುಂದಾದರು. ಇನ್ನು 2017ರಲ್ಲಂತೂ 7 ಮುಸ್ಲಿಂ ರಾಷ್ಟ್ರಗಳ ನಾಗರಿಕರಿಗೆ ಅಮೆರಿಕದ ಪ್ರವೇಶವನ್ನು ನಿರ್ಬಂಧಿಸಿ ಆದೇಶ ಹೊರಡಿಸಿದರು. ಗಮನಾರ್ಹ ಸಂಗತಿಯೆಂದರೆ ಈ ಆದೇಶಗಳಿಗೆ ಅಂದು ಅಮೆರಿಕದಲ್ಲಿ ಗುಣಾತ್ಮಕ ಪ್ರತಿಕ್ರಿಯೆಯೇ ದೊರೆತಿತ್ತು. ಹೀಗಾಗಿ, ಬೈಡೆನ್ ಸರ್ಕಾರ ಈ ನಿರ್ಬಂಧವನ್ನು ತೆರವುಗೊಳಿಸುವುದಕ್ಕೆ ಯಾವ ರೀತಿಯ ಪ್ರತಿಕ್ರಿಯೆ ಬರುತ್ತದೋ ತಿಳಿಯದು. ಆದರೆ ತನ್ನ ಮತವರ್ಗದ ಮನಕ್ಕೆ ಹಿಡಿಸುವಂಥ ನೀತಿಯನ್ನೇ ಅವರು ತರುತ್ತಿದ್ದಾರೆ ಎನ್ನುವುದು ನಿಶ್ಚಿತ. ಮೆಕ್ಸಿಕೋ ಗಡಿಯುದ್ದಕ್ಕೂ ಗೋಡೆ ನಿರ್ಮಿಸುವ ಟ್ರಂಪ್ ನಿರ್ಣಯದ ಹಿಂದೆ, ಅಮೆರಿಕಕ್ಕೆ ಮೆಕ್ಸಿಕನ್ನರು ಅಕ್ರಮವಾಗಿ ನುಸುಳುತ್ತಿದ್ದಾರೆ ಎನ್ನುವ ಸಂಗತಿಯೇ ಕಾರಣವಾಗಿತ್ತು. ಈ ಸಮಸ್ಯೆ ನಿಜವೇ ಆದರೂ, ಗೋಡೆ ನಿರ್ಮಾಣ ಅತ್ಯಂತ ಅವೈಜ್ಞಾನಿಕ ಹಾಗೂ ಅನಗತ್ಯವಾಗಿ ಲಕ್ಷಾಂತರ ಕೋಟಿ ರೂ.ಗಳನ್ನು ಪೋಲು ಮಾಡುವ ಕೆಲಸ ಎಂದು ಪರಿಣತರು ಹೇಳುತ್ತಲೇ ಬಂದರು. ಅಲ್ಲದೇ ಗೋಡೆ ನಿರ್ಮಿಸುವುದರಿಂದ ಅಕ್ರಮ ವಲಸೆ ನಿಲ್ಲುವುದಿಲ್ಲ, ಅದನ್ನು ತಡೆಯುವುದಕ್ಕೆ ಅನ್ಯಮಾರ್ಗಗಳಿವೆ ಎನ್ನುವುದು ಡೆಮಾಕ್ರಾಟ್‌ಗಳ ವಾದ. ಹೀಗಾಗಿ ಈಗ ಗೋಡೆ ನಿರ್ಮಾಣದ ಕಥೆಯೂ ಕೊನೆಯಾಗಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ಯಾರಿಸ್ ಹವಾಮಾನ ಒಪ್ಪಂದದಲ್ಲಿ ಅಮೆರಿಕವನ್ನು ಮತ್ತೆ ಸೇರ್ಪಡೆಗೊಳಿಸಲು ನಿರ್ಧರಿಸಿರುವುದು ಜಾಣ ನಡೆ. ಹವಾಮಾನ ವೈಪರೀತ್ಯದ ವಿಚಾರದಲ್ಲಿ ಜವಾಬ್ದಾರಿ ವಹಿಸಿಕೊಳ್ಳುವುದಿಲ್ಲ ಎಂದು ಅಮೆರಿಕದಂಥ ರಾಷ್ಟ್ರವೇ ಹಿಂದೆ ಸರಿದ ಕಾರಣ, ಉಳಿದ ರಾಷ್ಟ್ರಗಳೂ ಅದೇ ಧೋರಣೆ ತಾಳುವ ಅಪಾಯವಿದ್ದೇ ಇತ್ತು. ಇನ್ನು ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಟ್ರಂಪ್‌ರ ಜಗಳವೂ ಉತ್ತುಂಗಕ್ಕೇರಿದ್ದು ಕಾರಣ, ಆ ಸಂಸ್ಥೆಯಿಂದ ಅಮೆರಿಕ ಅಂತರ ಕಾಯ್ದುಕೊಳ್ಳಲು, ನಿಧಿ ನೀಡುವಿಕೆಯನ್ನು ನಿಲ್ಲಿಸಲು ಯೋಚಿಸುತ್ತಿತ್ತು. ಆದರೆ, ಈ ವಿಚಾರದಲ್ಲೂ ಬೈಡೆನ್ ವ್ಯತಿರಿಕ್ತ ಯೋಚನೆ ಹೊಂದಿದ್ದಾರೆ. ಆದರೂ ಡಬ್ಲ್ಯುಎಚ್‌ಒ ಚೀನದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎನ್ನುವ ಅಂಶವನ್ನು ಅವರ ಸರಕಾರ ಅವಗಣಿಸಲೇಬಾರದು.