Advertisement

ಅಂಗನವಾಡಿ ಕಾರ್ಯಕರ್ತೆಯರ ಧರಣಿ ಅಂತ್ಯ

06:41 AM Feb 06, 2019 | |

ಬೆಂಗಳೂರು: ಕಾರ್ಮಿಕ ಕಾಯ್ದೆಯನ್ನು ಜಾರಿಗೊಳಿಸಿ ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತೆಯರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಅಹೋರಾತ್ರಿ ಧರಣಿಯನ್ನು ಮಂಗಳವಾರ ಹಿಂಪಡೆಯಲಾಗಿದೆ.

Advertisement

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಡಾ ಬಿ.ಜಯಮಾಲ ಅವರ ಭರವಸೆ ಹಿನ್ನೆಲೆಯಲ್ಲಿ ಧರಣಿಯನ್ನು ಹಿಂಪಡೆಯಲಾಗಿದೆ. ತಮ್ಮ ಬೇಡಿಕೆಗಳನ್ನು ಆಲಿಸಿ, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೀಗಾಗಿ ಸಂಘಟನೆಯ ಎಲ್ಲ ಸದಸ್ಯರೊಂದಿಗೆ ಚರ್ಚಿಸಿ ಧರಣಿ ಕೈಬಿಡಲಾಗಿದೆ. ಬಜೆಟ್‌ನಲ್ಲಿ ಭರವಸೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಧರಣಿ ಮುಂದುವರಿಸುವುದರ ಜತೆಗೆ, ಕಾನೂನು ಹೋರಾಟ ನಡೆಸಲಾಗುವುದು ಸಂಘದ ರಾಜ್ಯಾಧ್ಯಕ್ಷೆ ಬಿ.ಆರ್‌.ಜಯಲಕ್ಷ್ಮೀ ಎಚ್ಚರಿಕೆ ನೀಡಿದರು.

ವಿಧಾನಸೌಧ ಮುತ್ತಿಗೆ ಎಚ್ಚರಿಕೆ: ಸೋಮವಾರ ಧರಣಿ ಆರಂಭಿಸಿದ್ದ ಕಾರ್ಯಕರ್ತೆಯರು ಇಲಾಖೆಯ ಸಚಿವರು ಅಥವಾ ಮುಖ್ಯಮಂತ್ರಿಗಳು ಸ್ಥಳಕ್ಕೆ ಆಗಮಿಸಲೇಬೇಕು ಎಂದು ಪಟ್ಟು ಹಿಡಿದಿದ್ದರು. ಇಲಾಖೆಯ ಅಧಿಕಾರಿಗಳನ್ನು ಹೊರತು ಪಡಿಸಿ ಬೇರೆ ಯಾರು ಪ್ರತಿಭಟನಾ ಸ್ಥಳದ ಕಡೆ ಸುಳಿಯಲಿಲ್ಲ. ಹೀಗಾಗಿ ಅಹೋರಾತ್ರಿ ಧರಣಿ ನಡೆಸಿದರು. ಮಂಗಳವಾರ ಬೆಳಗ್ಗೆ ವಿಧಾನಸೌಧ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ್ದರು. 

ಸಚಿವೆ ಜಯಮಾಲ ಭರವಸೆ: ಸ್ಥಳಕ್ಕೆ ದೌಡಾಯಿಸಿದ ಸಚಿವೆ ಜಯಮಾಲಾ, ಕಾರ್ಯಕರ್ತೆಯರ ಮನವಿ ಆಲಿಸಿದರು. ಬೇಡಿಕೆ ಪತ್ರ ಸ್ವೀಕರಿಸಿ ಬಜೆಟ್‌ನಲ್ಲಿ ಈಡೇರಿಸುವ ಭರವಸೆ ನೀಡಿದರು. ಬಳಿಕ ಮಾತನಾಡಿದ ಅವರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ರಾಜ್ಯದ ಹೆಣ್ಣು ಮಕ್ಕಳನ್ನು ರಕ್ಷಿಸುವ ಹೊಣೆ ಹೊತ್ತಿದ್ದಾರೆ. ಹೀಗಾಗಿ ನಾನು ಒಬ್ಬ ಸ್ತ್ರೀಯಾಗಿ ನಿಮ್ಮ ಪರವಾಗಿದ್ದೇನೆ. ಸರ್ಕಾರ ನಿಮ್ಮ ಬಗ್ಗೆ ಅಪಾರವಾದ ಕಾಳಜಿ ಹೊಂದಿದೆ. ಬಜೆಟ್‌ನಲ್ಲಿ ಬೇಡಿಕೆ ಈಡೇರಿಸಲು ಬದ್ಧವಾಗಿದೆ ಎಂದರು.

ರಾಜ್ಯದಲ್ಲಿ ಸುಮಾರು 65 ಸಾವಿರ ಅಂಗನವಾಡಿ ಕೇಂದ್ರಗಳಿವೆ. ಅಂಗನವಾಡಿ ಕಾರ್ಯಕರ್ತೆಯರು ಗರ್ಭಿಣಿಯರಿಗೆ ವೈದ್ಯರ ಮಾದರಿಯಲ್ಲಿ ಸೇವೆ ಮಾಡುತ್ತಿದ್ದಾರೆ. ಮಾತೃಪೂರ್ಣ ಯೋಜನೆ ಯಶಸ್ವಿಯಾಗಲು ಅಂಗನವಾಡಿ ಕಾರ್ಯಕರ್ತೆಯರ ಶ್ರಮವೇ ಕಾರಣ. ಕೆಲ ಅಂಗನವಾಡಿಗಳಲ್ಲಿ ಮೂಲಸೌಕರ್ಯಗಳ ಕೊರತೆ ಇರುವ ಬಗ್ಗೆ ಗಮನಕ್ಕೆ ಬಂದಿದೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಭರವಸೆ ನೀಡಿದರು.

Advertisement

ಆರೋಪ: ಕೇಂದ್ರ ಸರ್ಕಾರ ಮೊದಲಿನಿಂದಲೂ ಅಂಗನವಾಡಿ ಕಾರ್ಯಕರ್ತೆಯರ ಮೂಗಿಗೆಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಹಲವು ಯೋಜನೆಗಳನ್ನು ರೂಪಿಸಿ, ಅನುಷ್ಠಾನದ ಹೊಣೆಯನ್ನು ರಾಜ್ಯ ಸರ್ಕಾರಕ್ಕೆ ವಹಿಸುತ್ತಿದೆ. ಜತೆಗೆ ಸಕಾಲಕ್ಕೆ ಅನುದಾನ ಕೂಡ ಬಿಡುಗಡೆ ಮಾಡುವುದಿಲ್ಲ ಎಂದು ಆರೋಪಿಸಿದರು.

ಅಂಗನವಾಡಿ ಕಾರ್ಯಕರ್ತೆಯರಿಗೆ ಆಶ್ವಾಸನೆ: ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ ಐದು ಸಾವಿರ ರೂ. ಪಿಂಚಣಿ ನೀಡಬೇಕೆಂಬ ಬೇಡಿಕೆಯಿದೆ. ಹೀಗಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ. ಮಿನಿ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಲು ಚಾಲನೆ ನೀಡಲಾಗಿದೆ. ಹತ್ತು ವರ್ಷಗಳ ಕಾಲ ದುಡಿದ ಕಾರ್ಯಕರ್ತೆಯರನ್ನು ಕಾಯಂಗೊಳಿಸುವ ವಿಚಾರ ಸಂಬಂಧ ಸರ್ಕಾರದೊಂದಿಗೆ ಚರ್ಚಿಸಲಿದ್ದೇನೆ ಎಂದು ಸಚಿವೆ ಜಯಮಾಲಾ ಆಶ್ವಾಸನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next