ಬೆಂಗಳೂರು: ಸ್ಟಾರ್ಟ್‌ಅಪ್ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಜಾಗತಿಕ ಮಟ್ಟದಲ್ಲಿ ಭಾರತ ಮೂರನೇ ಸ್ಥಾನದಲ್ಲಿದ್ದರೂ ವಾರ್ಷಿಕವಾಗಿ ಶೇ.30ರಿಂದ ಶೇ.35ರಷ್ಟು ಸ್ಟಾರ್ಟ್‌ಅಪ್‌ಗ್ಳು ಆರಂಭವಾದ ಮೂರ್‍ನಾಲ್ಕು ತಿಂಗಳಲ್ಲೇ ಮುಚ್ಚಿಹೋಗುತ್ತಿವೆ ಎಂದು ನ್ಯಾಸ್ಕಾಂ ಮುಖ್ಯಸ್ಥ ರಮಣ್ ರಾಯ್ ತಿಳಿಸಿದ್ದಾರೆ.
ನ್ಯಾಸ್ಕಾಂ ಸಂಸ್ಥೆಯು ನಗರದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಸಮ್ಮೇಳನದ ಭಾಗವಾಗಿ ಗುರುವಾರ “ಇಂಡಿಯನ್ ಸ್ಟಾರ್ಟ್‌ಅಪ್ ಇಕೋಸಿಸ್ಟಮ್- ಟ್ರಾವರ್ಸಿಂಗ್ ದಿ ಮೆಚ್ಯುರಿಟಿ ಸೈಕಲ್’ ವರದಿ ಬಿಡುಗಡೆಗೊಳಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. “ಕೆಲವು ಸಂಕೀರ್ಣ ತೆರಿಗೆ ನಿಯಮಾವಳಿಗಳಿಂದಾಗಿ ಸ್ಟಾರ್ಟ್‌ಅಪ್‌ಗ್ಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಆರ್ಥಿಕ, ತಾಂತ್ರಿಕ ನೆರವು (ಏಂಜೆಲ್ ಕಂಪನಿಗಳ ನೆರವು) ಸಿಗದಂತಾಗಿದೆ’ ಎಂದು ಹೇಳಿದರು.
ದೇಣಿಗೆ ಶೇ.53ಕ್ಕೆ ಇಳಿಕೆ: ಸ್ಟಾರ್ಟ್‌ಅಪ್‌ಗ್ಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಕೆಲ ಸಂಸ್ಥೆಗಳು ಉದಾರವಾಗಿ ದೇಣಿಗೆ, ನೆರವು ನೀಡುತ್ತಿದ್ದವು. ಆದರೆ ಈ ರೀತಿ ದೇಣಿಗೆ ನೀಡುವುದು ಹೂಡಿಕೆಯಲ್ಲದ ಕಾರಣ ಆ ಮೊತ್ತಕ್ಕೆ ಆದಾಯ ತೆರಿಗೆ ಪಾವತಿಸಬೇಕೆಂಬ ವಾದವಿದೆ. ಇದರಿಂದ ನೆರವು ಪಡೆದ ಸ್ಟಾರ್ಟ್‌ಅಪ್ ಸಂಸ್ಥೆಗಳು ಅಭಿವೃದ್ಧಿ ಸಾಧಿಸುವುದಕ್ಕಿಂತ ತೆರಿಗೆ ವ್ಯವಹಾರದತ್ತ ಗಮನ ಹರಿಸುವಂತಾಗಿದೆ. ಇದರಿಂದಾಗಿ ಈ ಹಿಂದೆ ದೇಣಿಗೆ, ನೆರವು ಪ್ರಮಾಣ ಶೇ.83ರಷ್ಟಿದ್ದು, ಸದ್ಯ ಶೇ.53ರಷ್ಟಕ್ಕೆ ಇಳಿಕೆಯಾಗಿದೆ ಎಂದು ಮಾಹಿತಿ ನೀಡಿದರು.
ನ್ಯಾಸ್ಕಾಂ ಅಧ್ಯಕ್ಷ ಆರ್.ಚಂದ್ರಶೇಖರ್ ಮಾತನಾಡಿ, ಶೈಕ್ಷಣಿಕ ಹಂತದಲ್ಲೂ ಸ್ಟಾರ್ಟ್‌ಅಪ್, ಉದ್ಯಮಶೀಲತೆಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗುತ್ತಿದೆ. ಸ್ಟಾರ್ಟ್‌ಅಪ್, ಉದ್ಯಮಶೀಲತೆ ಕುರಿತಂತೆ ಕಾರ್ಯಕ್ರಮ, ಯೋಜನೆ ರೂಪಿಸಬೇಕೆಂಬ ಮನವಿಯೂ ಇದೆ. ಇತ್ತೀಚೆಗೆ ಹಾರ್ಡ್‌ವೇರ್‌ಗೆ ಸಂಬಂಧಪಟ್ಟ ಸಾರ್ಟ್‌ಅಪ್‌ಗ್ಳು ಹೆಚ್ಚಾಗುತ್ತಿದ್ದು, ಭವಿಷ್ಯದಲ್ಲಿ ಉತ್ತಮ ಬೇಡಿಕೆ ಸೃಷ್ಟಿಯಾಗುವ ಭರವಸೆ ಮೂಡಿಸುತ್ತಿದೆ ಎಂದರು.
ವರದಿಯ ಪ್ರಮುಖ ಅಂಶಗಳು: ದೇಶದಲ್ಲಿ ಸದ್ಯ ಸುಮಾರು 5,200 ಸ್ಟಾರ್ಟ್‌ಅಪ್‌ಗ್ಳಿದ್ದು, ಇದರಲ್ಲಿ 1,000ಕ್ಕೂ ಹೆಚ್ಚು ಜನವರಿಯಿಂದೀಚೆಗೆ ಕಾರ್ಯಾರಂಭ ಮಾಡಿವೆ. ಸ್ಟಾರ್ಟ್‌ಅಪ್ ಕ್ಷೇತ್ರ ವರ್ಷದಿಂದ ವರ್ಷಕ್ಕೆ ಶೇ.7ರಷ್ಟು ಬೆಳಗಣಿಗೆ ಕಂಡಿದೆ. ಆರೋಗ್ಯ ಸಂಬಂಧಿ ತಂತ್ರಜ್ಞಾನ ಕ್ಷೇತ್ರದಲ್ಲಿ ಶೇ.28, ಆರ್ಥಿಕ ತಂತ್ರಜ್ಞಾನ ಕುರಿತಂತೆ ಶೇ.31 ಹಾಗೂ ಇ-ಕಾಮರ್ಸ್, ಅಗ್ರೆಗೇಟರ್ ಕ್ಷೇತ್ರದಲ್ಲಿ ಶೇ.13ರಷ್ಟು ಪ್ರಗತಿ ಕಂಡಯಬಂದಿದೆ.
ಸ್ಟಾರ್ಟ್‌ಅಪ್ ಸೃಷ್ಟಿ ಅಥವಾ ಆರಂಭದ ಪ್ರಮಾಣದಲ್ಲಿ ಬೆಂಗಳೂರು, ದೆಹಲಿ ಹಾಗೂ ಮುಂಬೈ ಮುಂಚೂಣಿಯಲ್ಲಿದ್ದು, ದ್ವಿತೀಯ ಮತ್ತು ತೃತೀಯ ಹಂತದ ನಗರಗಳಲ್ಲಿ ಶೇ.20ರಷ್ಟು ಸ್ಟಾರ್ಟ್‌ಅಪ್‌ಗ್ಳು ಆರಂಭವಾಗುತ್ತಿವೆ. ಆರೋಗ್ಯ ವಲಯ, ಶಿಕ್ಷಣ ಮತ್ತು ಆರ್ಥಿಕ ಒಳಗೊಳ್ಳುವಿಕೆ, ಶುದ್ಧ ಇಂಧನ, ಕೃಷಿ ಕ್ಷೇತ್ರದ ಸವಾಲುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ 300ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗ್ಳು ಕಾರ್ಯಪ್ರವೃತ್ತವಾಗಿವೆ. ಅತ್ಯಾಧುನಿಕ ತಂತ್ರಜ್ಞಾನವೆನಿಸಿದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹಾಗೂ ಅನಾಲಿಟಿಕ್ಸ್‌ಗೆ ಸಂಬಂಧಪಟ್ಟ ಸ್ಟಾರ್ಟ್‌ಅಪ್ ಸೃಷ್ಟಿಗೆ ಸಂಬಂಧಿಸಿದ ಪ್ರಗತಿ ಪ್ರಮಾಣ ಕ್ರಮವಾಗಿ ಶೇ.75 ಹಾಗೂ ಶೇ.40ರಷ್ಟು ದಾಖಲಾಗಿರುವುದು ಕಂಡುಬಂದಿದೆ.