Advertisement

ಸಿದ್ಧನಕೊಳ್ಳಮಠದಿಂದ ಚಿತ್ರರಂಗಕ್ಕೆ ಪ್ರೋತ್ಸಾಹ

02:57 PM Nov 16, 2021 | Team Udayavani |

ಇಳಕಲ್ಲ: ಉತ್ತರ ಕರ್ನಾಟಕದಲ್ಲಿ ಕಲೆ ಹಾಗೂ ಕಲಾವಿದರನ್ನು ಗೌರವಿಸುತ್ತಿರುವ ಅನೇಕ ಮಠಗಳು ಇದ್ದರೂ ಸಿನಿಮಾರಂಗವನ್ನು ಪ್ರೋತ್ಸಾಹಿಸಿ ಬೆಳಸುವ ಏಕೈಕ ಮಠ ನಿರಂತರ ದಾಸೋಹದ ಸುಕ್ಷೇತ್ರ ಸಿದ್ಧನಕೊಳ್ಳ ಮಠ ಎಂದು ಡಾ| ಶಿವಕುಮಾರ ಸ್ವಾಮೀಜಿ ಹೇಳಿದರು.

Advertisement

ನಗರದ ಅನುಭವ ಮಂಟಪದಲ್ಲಿ ಶಿವಾನುಮ ಪ್ರೊಡಕ್ಸನ್ಸ್‌ ಹಮ್ಮಿಕೊಂಡಿದ್ದ ಶಕ್ತಿಸೂರ್ಯ ಸಿನಿಮಾ ಭಿತ್ತಿ ಚಿತ್ರಗಳ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಸಿನಿಮಾಗಳಿಂದ ಈ ಸಮಾಜವನ್ನು ಸುಧಾರಿಸುವ ಒಂದು ಸಣ್ಣ ಪ್ರಯತ್ನವಿದು. ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಪ್ರತಿಭಾನ್ವಿತ ಕಲಾವಿದರಿದ್ದಾರೆ. ಆದರೆ, ಅವರಿಗೆ ಒಂದು ಉತ್ತಮ ವೇದಿಕೆ ಅವಶ್ಯಕತೆಯಿದ್ದು, ಆ ಕಾರ್ಯವನ್ನು ನಮ್ಮ ಶ್ರೀಮಠ ಮಾಡುತ್ತಿದೆ ಹೊರತು ನಮಗೆ ಯಾವ ಸಿನಿಮಾದ ಗೀಳು ಇಲ್ಲ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಇಳಕಲ್ಲ-ಚಿತ್ತರಗಿ ಸಂಸ್ಥಾನಮಠದ ಗುರು ಮಹಾಂತ ಶ್ರೀ ಮಾತನಾಡಿದ ಅವರು, ಚಿತ್ರರಂಗ ದೊಡ್ಡ ಉದ್ದಿಮೆಯಾಗಿ ಬೆಳೆದಿದೆ. ಸಿನಿಮಾರಂಗಕ್ಕೆ ಇಡೀ ಸಮಾಜವನ್ನೇ ಪರಿವರ್ತನೆಗೊಳಿಸುವ ಮಹಾನ್‌ ಶಕ್ತಿ ಇದೆ. ಚಿತ್ರನಟ-ನಟಿಯರಿಗೆ ಇರುವಷ್ಟು ಅಭಿಮಾನಿಗಳು ಯಾವ ಮಠಾಧೀಶರಿಗೂ ಕೂಡಾ ಇಲ್ಲ ಎಂದರು.

ಸಿನಿಮಾ ರಂಗವನ್ನು ಉತ್ತರ ಕರ್ನಾಟಕದಲ್ಲಿ ಪ್ರೋತ್ಸಾಹಿಸಿ ಬೆಳೆಸುವುದಕ್ಕಾಗಿ ಸಿದ್ದನಕೊಳ್ಳದ ಶ್ರೀಮಠ ಉತ್ತರ ಕರ್ನಾಟಕ ಚಿತ್ರರಂಗ ವಾಣಿಜ್ಯಮಂಡಳಿಯನ್ನು ಸ್ಥಾಪಿಸಿ ಇಲ್ಲಿಯ ಕಲಾವಿದರಿಗೆ ಅವಕಾಶ ನೀಡುತ್ತಿರುವುದು ಶ್ಲಾಘನೀಯ. ಮೌನೇಶ ಬಡಿಗೇರ ಅವರ ನಿರ್ದೇಶನದ ಶಕ್ತಿಸೂರ್ಯ ಸಿನಿಮಾ ಯಶಸ್ವಿಯಾಗಲಿ. ಉತ್ತರ ಕರ್ನಾಟಕದ ಹೆಚ್ಚು ಕಲಾವಿದರು ಸಿನಿಮಾರಂಗದಲ್ಲಿ ಹೆಸರು ಗಳಿಸಲಿ ಎಂದು ಆಶೀರ್ವದಿಸಿದರು. ನಗರಸಭೆ ಸದಸ್ಯ ಲಕ್ಷ್ಮಣ ಗುರಂ ಶಕ್ತಿಸೂರ್ಯ ಸಿನಿಮಾದ ಭಿತ್ತಿ ಚಿತ್ರ ಬಿಡುಗಡೆಗೊಳಿಸಿದರು.

ನಗರದ ವಿಜಯಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಬಸವರಾಜ ಗವಿಮಠ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ನಗರದ ಶಾಲಾ ಮಕ್ಕಳು ತಯಾರಿಸಿದ ಕ್ಯಾಟ್‌ಲಾಗ್‌ನ್ನು ಶ್ರೀಗಳು, ಗಣ್ಯರು ಪ್ರದರ್ಶಿಸಿ ಮಕ್ಕಳಿಗೆ ಶುಭಾಶಯ ಹೇಳಿದರು. ರಂಗಕಲಾವಿದ ಮಹಾಂತೇಶ ಗಜೇಂದ್ರಗಡ, ಶಿಲ್ಪಿ ಕಲಾವಿದ ಚಿದಾನಂದ ಸಾಕ್ರೆ, ಕೆಎಸ್‌ಐ ಸಂಸ್ಥಾಪಕ ಚಲನಚಿತ್ರ ನಿರ್ದೇಶಕ ಉಮೇಶ ಪುರಾಣಿಕಮಠ, ಆಶಾದೀಪ ಅಂಗವಿಕಲರ ಸೇವಾ ಸಂಸ್ಥೆಯ ಸಂಸ್ಥಾಪಕ ರಘು ಹುಬ್ಬಳ್ಳಿ, ವಿಷ್ಣು ಸೇನಾ ಸಂಘಟನೆ ಜಿಲ್ಲಾಧ್ಯಕ್ಷ ಚಂದ್ರು ಅಪ್ಪಾಜಿ, ಪಿ.ದೀಕ್ಷಿತ ಫೌಂಡೇಶನ್‌ ನಿರ್ಮಾಪಕ ಹಾಗೂ ಚಲನಚಿತ್ರ ನಟ ಪ್ರವೀಣ ಪತ್ರಿ, ಕನ್ನಡ ಫಿಲಂಫೇರ್‌ ಅಧ್ಯಕ್ಷ ಬಸವರಾಜ ಕೊಪ್ಪಳ, ಕಲಾ ನಿರ್ದೇಶಕ ಹಾಗೂ ಚಲನಚಿತ್ರ ನಟ ವರೇಶ ಐಹೊಳೆ ಉಪಸ್ಥಿರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next