Advertisement

‘ಬೌದ್ಧಿಕ ಆಸ್ತಿ ಹಕ್ಕು ಕಾಯಿದೆಯಿಂದ ಸಂಶೋಧನೆಗೆ ಪ್ರೋತ್ಸಾಹ’

03:44 PM Apr 07, 2018 | |

ಕೊಡಿಯಾಲಬೈಲ್‌ : ಬೌದ್ಧಿಕ ಆಸ್ತಿ ಹಕ್ಕು ಕಾಯಿದೆಯು ಹೊಸ ಸಂಶೋಧನೆ, ಚಿಂತನೆಗೆ ಪ್ರೋತ್ಸಾಹ ನೀಡುತ್ತದೆ. ಹೊಸ ಆವಿಷ್ಕಾರ ಮಾಡಿದವರನ್ನು ಗುರುತಿಸಲು ಹಾಗೂ ಲಾಭಕ್ಕಾಗಿ ಅದನ್ನು ಬಳಸಿಕೊಳ್ಳಲು ಈ ಕಾಯಿದೆಯು ದಾರಿ ಮಾಡಿಕೊಡುತ್ತದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ರಿಜಿಸ್ಟ್ರಾರ್‌ ಪ್ರೊ| ಸುಬ್ರಹ್ಮಣ್ಯ ಎಡಪಡಿತ್ತಾಯ ಅವರು ಹೇಳಿದರು.

Advertisement

ಶತಮಾನೋತ್ಸವದ ಅಂಗವಾಗಿ ಬೆಸೆಂಟ್‌ ಮಹಿಳಾ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ವತಿಯಿಂದ ಶುಕ್ರವಾರ ‘ಇನ್ನೊವೇರಿಯಸ್‌ 2018’ ಬೌದ್ಧಿಕ ಆಸ್ತಿ ಹಕ್ಕು ವಿಷಯದಲ್ಲಿ ನವೀನ ಪ್ರವೃತ್ತಿಗಳು ಎಂಬ ವಿಚಾರದಲ್ಲಿ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು.

ಹೊಸ ಚಿಂತನೆ
ಬೌದ್ಧಿಕ ಹಕ್ಕು ಕಾಯಿದೆಗಳಿಂದ ಅಮೂರ್ತವಾದ ವಿಷಯಗಳಾದ ಚಿಂತನೆ, ಯೋಚನೆ, ರಾಗ, ಧ್ವನಿ ಇತ್ಯಾದಿಗಳನ್ನು ಮೂರ್ತಗೊಳಿಸಿ ಕಲಾವಿದರಿಗೆ ಅಥವಾ ಹೊಸ ಚಿಂತನೆಯನ್ನು ಹುಟ್ಟು ಹಾಕಿದವರಿಗೆ ಲಾಭವಾಗುವಂತೆ ಮಾಡುತ್ತವೆ. ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳು ಪ್ರಶ್ನೆ ಕೇಳುವಂತೆ ಪ್ರೇರೇಪಿಸಿ ಮುಕ್ತ ವಾತಾವರಣ ಕಲ್ಪಿಸಿದಾಗ ಕುತೂಹಲವೇ ಮುಂದುವರಿದು ನವೀನ ಸಾಧನೆಗಳಿಗೆ ಕಾರಣವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. 

ವಿಮೆನ್ಸ್‌ ನ್ಯಾಷನಲ್‌ ಎಜುಕೇಷನ್‌ ಸೊಸೈಟಿ ಅಧ್ಯಕ್ಷ ಕುಡ್ಪಿ ಜಗದೀಶ್‌ ಶೆಣೈ ಅಧ್ಯಕ್ಷತೆ ವಹಿಸಿದ್ದರು. ರೋಟರ್ಯಾಕ್ಟ್ ಕ್ಲಬ್‌ನ ಅಧ್ಯಕ್ಷ ವಿನೋದ್‌ ಡಿ’ಸೋಜಾ ಮುಖ್ಯ ಅತಿಥಿಯಾಗಿದ್ದರು. ಸಂಚಾಲಕ ದೇವಾನಂದ ಪೈ, ವಿದ್ಯಾರ್ಥಿ ಸಂಯೋಜಕಿ ಅಕ್ಷತಾ ಉಪಸ್ಥಿತರಿದ್ದರು.

ಕೇಂದ್ರ ಅಬಕಾರಿ ಸುಂಕ ವಿಭಾಗದ ಮೇಲ್ವಿಚಾರಕ ರಾಜೇಶ್‌ ಟಿ.ವಿ., ಎಸ್‌ ಡಿಎಂ ಕಾನೂನು ಕಾಲೇಜಿನ ಉಪನ್ಯಾಸಕ ಸಂತೋಷ್‌ ಪ್ರಭು ವಿಚಾರ ಮಂಡಿಸಿದರು. ಕಾರ್ಯಾಗಾರದ ಸಂಯೋಜಕಿ ಅನುಪಾ ಬಾಳಿಗ ಪ್ರಸ್ತಾವನೆಗೈದರು. ಕಾಲೇಜಿನ ಪ್ರಾಂಶುಪಾಲ ಡಾ| ಸತೀಶ್‌ ಕುಮಾರ್‌ ಶೆಟ್ಟಿ ಪಿ. ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ| ಪ್ರವೀಣ್‌ ಕುಮಾರ್‌ ಕೆ. ಸಿ. ವಂದಿಸಿದರು. ಬಳಿಕ ಪ್ರತಿನಿಧಿಗಳಿಂದ ಪ್ರಬಂಧ ಮಂಡನೆ ನಡೆಯಿತು.

Advertisement

ಬೌದ್ಧಿಕ ಆಸ್ತಿಯ ರಕ್ಷಣೆ ಕಾನೂನು
ಹಿರಿಯ ನ್ಯಾಯವಾದಿ ಆಶಾ ನಾಯಕ್‌ ಮಾತನಾಡಿ, ಆಸ್ತಿ ಯಾವುದೇ ಆದರೂ ಕಳ್ಳತನದ ಹೆದರಿಕೆ ಇದ್ದೇ ಇದೆ. ಕೃತಿ ಚೌರ್ಯ ಸುಲಭವಾಗಿರುವ ಈ ತಾಂತ್ರಿಕ ಯುಗದಲ್ಲಿ ಬೌದ್ಧಿಕ ಆಸ್ತಿಯ ರಕ್ಷಣೆಗಾಗಿ ಪರಿಣಾಮಕಾರಿ ಕಾನೂನುಗಳ ರಚನೆಯಾಗಿದೆ. ಅವುಗಳನ್ನು ತಿಳಿದುಕೊಂಡು ತಮ್ಮ ಸ್ವಂತ ಕೃತಿಗಳನ್ನು ಹಾಗೂ ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ರಕ್ಷಿಸಿಕೊಳ್ಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next