Advertisement

ಇಂಧನ ಕ್ಷೇತ್ರದ ಉದ್ಯಮಗಳಿಗೆ ಉತ್ತೇಜನ: ಸಿಎಂ ಬಸವರಾಜ ಬೊಮ್ಮಾಯಿ

12:17 AM Aug 24, 2022 | Team Udayavani |

ದೊಡ್ಡಬಳ್ಳಾಪುರ: ದೇಶದ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸಿರುವ ಇಂಧನ ಕ್ಷೇತ್ರದಲ್ಲಿ ನೂತನ ತಂತ್ರಜ್ಞಾನಗಳ ಬೆಳವಣಿಗೆ ಅಗತ್ಯ ಎಂದು ಹೇಳಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ನಿಟ್ಟಿನಲ್ಲಿ ಇಂಧನ ಕ್ಷೇತ್ರದಲ್ಲಿನ ಉದ್ಯಮಗಳನ್ನು ಉತ್ತೇಜಿಸಲಾಗುತ್ತಿದೆ ಎಂದು ಹೇಳಿದ್ದಾರೆ.

Advertisement

ತಾಲೂಕಿನ ತಮ್ಮಶೆಟ್ಟಿಹಳ್ಳಿಯಲ್ಲಿ ಹಿಟಾಚಿ ಎನರ್ಜಿ ಪವರ್‌ ಕ್ವಾಲಿಟಿ ಉತ್ಪನ್ನಗಳ ತಯಾರಿಕ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ಇಂಧನ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಇಂದು ಇಂಧನ ಕ್ಷೇತ್ರದ ಸವಾಲು ಎದುರಿಸಿ, ಒಂದು ದೇಶ ಒಂದು ಗ್ರಿಡ್‌ ಎಂಬ ಪ್ರಧಾನಿ ಆಶಯ ಸಾಕಾರ ಮಾಡಬೇಕಿದೆ.

ಕೆಲವು ವರ್ಷಗಳ ಹಿಂದೆ ಗ್ರಿಡ್‌ ವ್ಯವಸ್ಥೆ ಸರಿಯಿಲ್ಲದೆ, ಉತ್ತರ ಭಾರತದಿಂದ ದಕ್ಷಿಣ ಭಾರತಕ್ಕೆ ವಿದ್ಯುತ್‌ ಹರಿಸುವುದು ಕಷ್ಟವಾಗಿತ್ತು. ಆದರೆ, ಈಗ ಪ್ರಧಾನಿಯವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪವರ್‌ ಬಳಕೆ ಮಾಡುವ ಕುರಿತಾದ ದೂರದೃಷ್ಟಿ ಹೊಂದಿದ್ದು, ಇದಕ್ಕೆ ಪೂರಕ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.

ಆರ್ಥಿಕತೆಗೆ ಇಂಬು
ಶೇ. 50ಕ್ಕೂ ಹೆಚ್ಚು ನವೀಕರಿಸಬಹುದಾದ ಇಂಧನವನ್ನು ರಾಜ್ಯ ಉತ್ಪಾದಿಸುತ್ತಿದೆ. ಇಂಧನ ಸಂಗ್ರಹಕ್ಕೆ ಆದ್ಯತೆ ನೀಡಬೇಕಿದ್ದು, ಈ ಸವಾಲುಗಳು ನಮ್ನನ್ನು ಹೊಸ ತಂತ್ರಜ್ಞಾನ ಅಳವಡಿಕೆಗೆ ಪ್ರೇರೇಪಿಸುತ್ತಿವೆ. ಸಂಶೋಧನೆ ಮತ್ತು ಅಭಿವೃದ್ಧಿಯ ತಂತ್ರಜ್ಞಾನ ಶಕ್ತಿಗಳು ಒಂದಾದರೆ ದೇಶ, ರಾಜ್ಯದ ಆರ್ಥಿಕತೆಗೆ ಇಂಬು ನೀಡುತ್ತದೆ ಎಂದು ಹೇಳಿದರು.

Advertisement

ನ. 2ರಿಂದ ಹೂಡಿಕೆದಾರರ ಸಮಾವೇಶ
ಕೈಗಾರಿಕೆ ಸಚಿವ ಮುರುಗೇಶ್‌ ನಿರಾಣಿ ಮಾತನಾಡಿ, ಗುಣಮಟ್ಟದ ಜಪಾನೀಸ್‌ ಇಂಡಸ್ಟ್ರಿಯಲ್‌ ಟೌನ್‌ ಶಿಪ್‌ ನಿರ್ಮಾಣ ಮಾಡಲಾಗುತ್ತಿದೆ. 15 ಸಾವಿರ ಎಕರೆಯನ್ನು ಕೈಗಾರಿಕಾ ಪ್ರದೇಶಾಭಿವೃದ್ಧಿಗೆ ಗುರುತಿಸಲಾಗಿದೆ. ನ. 2ರಿಂದ 4ರ ವರೆಗೆ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದ್ದು, ರಾಜ್ಯದಲ್ಲಿ ಬಂಡವಾಳ ಹೂಡಲು ವಿವಿಧ ಕಂಪೆನಿಗಳನ್ನು ಆಹ್ವಾನಿಸಲಾಗಿದೆ. ಇದಕ್ಕೆ ಎಲ್ಲ ರೀತಿಯ ಕೈಗಾರಿಕಾ ವಲಯದವರು ಕೈಜೋಡಿಸಬೇಕಿದೆ ಎಂದು ಹೇಳಿದರು.

ಹಿಟಾಚಿ ಕಂಪನಿ ಸಿಇಒ ಕ್ಲಾಡಿಯೋ ಫಾಚಿನ್‌ ಮಾತನಾಡಿದರು. ಶಾಸಕ ಟಿ. ವೆಂಕಟರಮಣಯ್ಯ, ಹಿಟಾಚಿ ಕಂಪೆನಿ ಸಿಇಒ ಎನ್‌. ವೇಣು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ ಉಪಸ್ಥಿತರಿದ್ದರು.

ಕರ್ನಾಟಕ ಈಗ ವಿದ್ಯುತ್‌ನಲ್ಲಿ ಸ್ವಾವಲಂಬಿಯಾಗುತ್ತಿದೆ. ಆರೋಗ್ಯ ಕ್ಷೇತ್ರದಲ್ಲೂ ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಮೂಲ ಸೌಲಭ್ಯ ನೀಡಲಾಗುತ್ತಿದೆ. ಬೆಂಗಳೂರು ವಲಯದಲ್ಲಿ ಕೌಶಲ ಹೊಂದಿರುವ ಉದ್ಯೋಗಿಗಳಿದ್ದು, ಕಂಪೆನಿಗಳು ಹೆಚ್ಚು ಕಾರ್ಖಾನೆಗಳನ್ನು ಸ್ಥಾಪಿಸಬೇಕು.
– ಡಾ| ಕೆ. ಸುಧಾಕರ್‌, ಆರೋಗ್ಯ ಸಚಿವ

 

Advertisement

Udayavani is now on Telegram. Click here to join our channel and stay updated with the latest news.

Next