ಧಾರವಾಡ: ಎಸ್ಸೆಸ್ಸೆಲ್ಸಿಯಲ್ಲಿ ಶೇ. 90ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಶೇಷ ತಾರಾ ಪ್ರತಿಷ್ಠಾನ ವತಿಯಿಂದ ಪ್ರೋತ್ಸಾಹಧನ ಹಾಗೂ ಪ್ರಮಾಣಪತ್ರ ವಿತರಣಾ ಸಮಾರಂಭವನ್ನು ಇಲ್ಲಿಯ ಕಲ್ಯಾಣನಗರದ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಉತ್ತರ ಕನ್ನಡ, ಧಾರವಾಡ, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ಒಟ್ಟು 36 ವಿದ್ಯಾರ್ಥಿನಿಯರು ಹಾಗೂ ಮೂವರು ವಿದ್ಯಾರ್ಥಿಗಳಿಗೆ ತಲಾ 5,000 ರೂ. ಹಾಗೂ ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ ಇಬ್ಬರು ವಿದ್ಯಾರ್ಥಿಗಳಿಗೆ ತಲಾ 20,000 ರೂ. ಪ್ರೋತ್ಸಾಹಧನ ಹಾಗೂ ಪ್ರಮಾಣಪತ್ರ ನೀಡಿ ಪುರಸ್ಕರಿಸಲಾಯಿತು.
ಮನೋವೈದ್ಯ ಡಾ| ಆನಂದ ಪಾಂಡುರಂಗಿ ಮಾತನಾಡಿ, ಡಾ| ರೇಣುಕಾ ಕುಚಿನಾಡ ಅವರು ತಮ್ಮ ತಂದೆ-ತಾಯಿ ಹೆಸರಿನಲ್ಲಿ ಪ್ರತಿವರ್ಷ ಗ್ರಾಮೀಣ ಪ್ರದೇಶದ ಪ್ರತಿಭಾವಂತ ಹೆಣ್ಣು ಮಕ್ಕಳನ್ನು ಗುರುತಿಸಿ, ಅವರ ಮುಂದಿನ ಕಲಿಕೆಗೆ ಅನುಕೂಲವಾಗಲು ತಮ್ಮ ನಿವೃತ್ತಿ ವೇತನದಿಂದ 2-3 ಲಕ್ಷ ರೂ. ಖರ್ಚು ಮಾಡುತ್ತಿರುವುದು ನಿಜಕ್ಕೂ ಅಭಿನಂದನಾರ್ಹ ಎಂದರು.
ಕ್ಲಾಸಿಕ್ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಲಕ್ಷ್ಮಣ ಉಪ್ಪಾರ ಮಾತನಾಡಿ, ವಿದ್ಯಾರ್ಥಿಗಳು ಸಾಧನೆಯ ಕನಸು ಕಾಣಬೇಕು. ವಿದ್ಯಾರ್ಥಿ ಜೀವನ ಸುಂದರ ಬದುಕು ಕಟ್ಟಲು ಸಿಕ್ಕ ಒಂದು ಸುವರ್ಣಾವಕಾಶ. ಈ ಅವಕಾಶವನ್ನು ಬಳಸಿಕೊಳ್ಳದೆ ಹೋದರೆ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಹೇಳಿದರು. ಪ್ರತಿಷ್ಠಾನದ ಅಧ್ಯಕ್ಷ ಡಾ| ರೇಣುಕಾ ಕುಚಿನಾಡ ಅಧ್ಯಕ್ಷತೆ ವಹಿಸಿದ್ದರು. ಕೆ.ಎಚ್. ನಾಯಕ ಪ್ರಾಸ್ತಾವಿಕ ಮಾತನಾಡಿದರು. ಪ್ರಫುಲ್ಲಾ ನಾಯಕ, ವಿವೇಕ ನಾಡಕರ್ಣಿ, ನಿವೃತ್ತ ವಲಯ ಅರಣ್ಯಾಧಿಕಾರಿ ನರೇಂದ್ರ ಹಿತ್ತಲಮಕ್ಕಿ, ನಿವೃತ್ತ ಆರ್‌ಟಿಒ ನಿತ್ಯಾನಂದ ಹಿತ್ತಲಮಕ್ಕಿ, ಉದ್ದಿಮೆದಾರ ಬಿ.ಎಸ್. ಗಾಂವಕರ, ಆರ್.ಬಿ. ನಾಯಕ ಇದ್ದರು. ಸುಭಾಶ್ಚಂದ್ರ ಜಾಧವ ಸ್ವಾಗತಿಸಿದರು. ಜ್ಯೋತಿ ತುಳಜಪ್ಪನವರ ನಿರೂಪಿಸಿದರು. ಪ್ರಕಾಶ ತುರಮರಿ ವಂದಿಸಿದರು.