ಬೆಂಗಳೂರು: ಸಾಗರ ಕಾಂಗ್ರೆಸ್ ಶಾಸಕರ ವಿರುದ್ಧ ಸರಕಾರಿ ಅಧಿಕಾರಿಯೊಬ್ಬರಿಗೆ ಕಿರುಕುಳ ನೀಡಿದ ಗಂಭೀರ ಆರೋಪ ಕೇಳಿಬಂದಿದೆ. ಕೆಪಿಟಿಸಿಎಲ್ ಸಹಾಯಕ ಎಂಜಿನಿಯರ್ ಒಬ್ಬರು ಹೈಕೋರ್ಟ್ ನ್ಯಾಯಮೂರ್ತಿಗಳ ಮುಂದೆ ಈ ಆರೋಪ ಮಾಡಿದ್ದಾರೆ. ಅಲ್ಲದೆ, “ಸ್ಥಳೀಯ ಡಿವೈಎಸ್ಪಿ ನನ್ನನ್ನು ಎನ್‌ಕೌಂಟರ್ ಮಾಡುವುದಾಗಿ ಹೇಳಿದ್ದಾರೆ. ನನಗೆ ಭಯ ಆಗುತ್ತಿದೆ. ನಾನು ಹೊರಗಡೆ ಹೋಗುವುದಿಲ್ಲ, ಕೋರ್ಟ್ ಹಾಲ್‌ನಲ್ಲೇ ಇರು ತ್ತೇನೆ, ದಯವಿಟ್ಟು ನನ್ನನ್ನು ಕಾಪಾಡಿ, ನನಗೆ ರಕ್ಷಣೆ ಕೊಡಿ’ ಎಂದು ನ್ಯಾಯಮೂರ್ತಿಗಳ ಮುಂದೆ ಕೈಮುಗಿದು ಕಣ್ಣೀರು ಹಾಕಿದ ಪ್ರಸಂಗ ಹೈಕೋರ್ಟ್‌ನಲ್ಲಿ ಮಂಗಳವಾರ ನಡೆಯಿತು.
ಇದಕ್ಕೆ ಆಘಾತ ವ್ಯಕ್ತಪಡಿಸಿದ ನ್ಯಾ| ಎಂ. ನಾಗಪ್ರಸನ್ನ, ಎಂಜಿನಿಯರ್ ಆರೋಪ, ಹೇಳುತ್ತಿರುವ ವಿಷಯ ನಿಜವೇ ಆಗಿದ್ದಲ್ಲಿ ಕೋರ್ಟ್ ಗಂಭೀರ ವಾಗಿ ಪರಿಗಣಿಸಲಿದೆ. ಪೊಲೀ ಸರು ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.
ಬಳಿಕ ಪ್ರಕರಣವನ್ನು ಬುಧವಾರ ವಿಚಾರಣೆ ನಡೆಸುವುದಾಗಿ ಹೇಳಿದರು.
ನ್ಯಾ| ನಾಗಪ್ರಸನ್ನ ಅವರು ಬೆಳಗಿನ ಕಲಾಪ ಮುಗಿಸಿ ತೆರಳುತ್ತಿರುವಾಗ, ಕೈ ಮುಗಿದು ಕಣ್ಣೀರು ಹಾಕುತ್ತ ನ್ಯಾಯಪೀಠದ ಮುಂದೆ ಬಂದ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಪಿಟಿಸಿಎಲ್ ಸಹಾಯಕ ಎಂಜಿನಿಯರ್ ಎಂ.ಜಿ. ಶಾಂತಕುಮಾರ ಸ್ವಾಮಿ, “ನನಗೆ ವಿವಾಹ ನಿಶ್ಚಯವಾಗಿ ರದ್ದಾಗಿತ್ತು. ಅನಂತರ ಸುಳ್ಳು ಪ್ರಕರಣ ದಾಖಲಿಸಿ, ನನ್ನಿಂದ ಹಣ ಪಡೆಯಲು ಸ್ಥಳೀಯ ಕಾಂಗ್ರೆಸ್ ಶಾಸಕರು ಮತ್ತು ಪೊಲೀಸರು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅದನ್ನು ರೆಕಾರ್ಡ್ ಮಾಡಿ ಲೋಕಾಯುಕ್ತಕ್ಕೆ ದೂರು ನೀಡಿದ್ದೆ. ಲೋಕಾಯುಕ್ತಕ್ಕೆ ದೂರು ನೀಡಿದ್ದೀಯಾ ಎಂದು ಸಾಗರದಲ್ಲಿ ಇರಲು ನನ್ನನ್ನು ಬಿಡುತ್ತಿಲ್ಲ. ನಾನು ಅಲ್ಲಿಂದ ಬೆಂಗಳೂರಿಗೆ ವರ್ಗಾವಣೆ ಕೋರುತ್ತಿದ್ದೇನೆ. ಅದೂ ಆಗಿಲ್ಲ, ಹಾಗಾಗಿ ನನಗೆ ರಕ್ಷಣೆ ನೀಡಬೇಕು’ ಎಂದು ಕೋರಿದರು.
ಅಲ್ಲದೆ, ಸಾಗರದಲ್ಲಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣಗಳ ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯು ಜು. 22ರಂದು ಹೈಕೋರ್ಟ್‌ನಲ್ಲಿ ನಿಮ್ಮ ನ್ಯಾಯಪೀಠದ ಮುಂದೆಯೇ ನಡೆದಿತ್ತು. ಈ ಪ್ರಕರಣಗಳಲ್ಲಿ ವಿಚಾರಣೆಯಲ್ಲಿ ಖುದ್ದಾಗಿ ಭಾಗಿಯಾಗಿದ್ದು, ವಕೀಲರನ್ನು ನೇಮಿಸಿಕೊಳ್ಳುವುದಾಗಿ ತಿಳಿಸಿದ್ದರಿಂದ, ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶವನ್ನು ತಾವು ನೀಡಿದ್ದೀರಿ. ಹೈಕೋರ್ಟ್ ವಿಚಾರಣೆಯ ಯೂಟ್ಯೂಬ್ ಲೈವ್ ಸ್ಟ್ರೀಮ್ ವೀಡಿಯೊ ಆಧರಿಸಿ, ತತ್‌ಕ್ಷಣವೇ ಸುಳ್ಳು ಗಾಂಜಾ ಪ್ರಕರಣದಲ್ಲಿ ನನ್ನನ್ನು ಬಂಧಿಸಿ ಶಿವಮೊಗ್ಗ ಜೈಲಿಗೆ ಕಳುಹಿಸಿದ್ದಾರೆ ಎಂದು ವಿವರಿಸಿದರು.
ಥಳಿಸಿದ ಡಿವೈ ಎಸ್‌ಪಿ: ಆರೋಪ
ಹೈಕೋರ್ಟ್‌ನಲ್ಲಿ ಪೊಲೀಸರ ಬಗ್ಗೆ ದೂರುತ್ತೀಯಾ ಎಂದು ಸಾಗರದ ಡಿವೈಎಸ್‌ಪಿ ನನ್ನನ್ನು ಥಳಿಸಿದ್ದಾರೆ. ಗಾಂಜಾ ಪ್ರಕರಣದ ಜತೆಗೆ ತತ್‌ಕ್ಷಣ ಬೇರೆ ಬೇರೆ ಸೆಕ್ಷನ್ ಹಾಕಿದ್ದಾರೆ. ಎನ್‌ಕೌಂಟರ್ ಮಾಡಲಾಗುವುದು ಎಂದು ಹೇಳಿದ್ದಾರೆ. ರೌಡಿಶೀಟರ್ ತೆರೆಯಲಾಗುವುದು ಎಂದು ಬೆದರಿಕೆಯೊಡ್ಡಿದ್ದಾರೆ. ಮೊಬೈಲ್ ಮತ್ತು ಪರ್ಸ್ ಕಸಿದುಕೊಂಡಿದ್ದಾರೆ ಎಂದು ಹೇಳಿ ಕಣ್ಣೀರು ಹಾಕಿದರು.
ಆಗ ನ್ಯಾಯಮೂರ್ತಿಗಳು, ನೀವು ಹೇಳಿರುವುದೆಲ್ಲವನ್ನೂ ರೆಕಾರ್ಡ್ ಮಾಡಲಾಗುತ್ತದೆ. ಡಿವೈಎಸ್‌ಪಿ ಈ ರೀತಿ ನಡೆದುಕೊಂಡಿದ್ದರೆ ಖಂಡಿತ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಹೆಚ್ಚುವರಿ ಸರಕಾರಿ ವಿಶೇಷ ಅಭಿಯೋಜಕ ಬಿ.ಎನ್. ಜಗದೀಶ್ ಅವರಿಗೆ, “ನೋಡಿ, ಇಂಥ ಕೃತ್ಯದಿಂದ ಹಿಂದೆ ಸರಿಯುವಂತೆ ಡಿವೈಎಸ್‌ಪಿಗೆ ತಿಳಿಸಿ, ಅರ್ಜಿದಾರರಿಗೆ ಯಾವುದೇ ರೀತಿಯ ಕಿರುಕುಳ ನೀಡುವಂತಿಲ್ಲ. ಇಲ್ಲವಾದರೆ ಅವರನ್ನು ನ್ಯಾಯಾಲಯಕ್ಕೆ ಕರೆಯಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಜತೆಗೆ, “ಅರ್ಜಿದಾರರಿಗೆ ನೀವು ಹೆದರಬೇಡಿ, ನಾವು ಇದ್ದೇವೆ, ನಿಮಗೆ ಎಲ್ಲ ರೀತಿಯ ಭದ್ರತೆ ನೀಡಲಾಗುವುದು, ನಾಳೆ ನಿಮ್ಮ ಪ್ರಕರಣ ವಿಚಾರಣೆ ನಡೆಸಲಾಗುವುದು’ ಎಂದು ನ್ಯಾಯಪೀಠ ಹೇಳಿತು.