ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ವಾರ್ಷಿಕ ಅಮರನಾಥ ಯಾತ್ರೆಯ ಮಾರ್ಗದ ಬಳಿ ಶುಕ್ರವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಸಂಘಟನೆಯ ಸ್ವಯಂಘೋಷಿತ ಕಮಾಂಡರ್ ಸೇರಿದಂತೆ ಮೂವರು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರು ಹತರಾಗಿದ್ದಾರೆ.
ಅನಂತನಾಗ್‌ನ ಪಹಲ್ಗಾಮ್‌ನಲ್ಲಿರುವ ಶ್ರೀಚಂದ್ ಟಾಪ್ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ
ಅಡಗಿದ್ದ ಭಯೋತ್ಪಾದಕರು ಭದ್ರತಾ ಪಡೆಗಳತ್ತ ಗುಂಡು ಹಾರಿಸಿದ ನಂತರ ಶೋಧ ಕಾರ್ಯಾಚರಣೆ ಎನ್‌ಕೌಂಟರ್ ಆಗಿ ಮಾರ್ಪಟ್ಟಿದೆ ಎಂದು ಅವರು ಹೇಳಿದರು. ಪ್ರತೀಕಾರವಾಗಿ ಮೂವರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಹತ್ಯೆಗೀಡಾದ ಭಯೋತ್ಪಾದಕರು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದವರು ಎಂದು ಅವರು ಹೇಳಿದರು.
ಇದನ್ನೂ ಓದಿ:ಕೋವಿಡ್ ಹೆಚ್ಚಳ: ಹ್ಯಾಂಗ್‌ಝೌನ ಏಷ್ಯನ್ ಕ್ರೀಡಾಕೂಟ ಮುಂದೂಡಿಕೆ
ಕಾಶ್ಮೀರದ ಇನ್ಸ್‌ಪೆಕ್ಟರ್-ಜನರಲ್ ಆಫ್ ಪೋಲೀಸ್ (ಐಜಿಪಿ), ವಿಜಯ್ ಕುಮಾರ್ ಅವರು ಹತ್ಯೆಗೀಡಾದ ಉಗ್ರರಲ್ಲಿ ಒಬ್ಬರನ್ನು ಅತ್ಯಂತ ಹಳೆಯ ಭಯೋತ್ಪಾದಕರಲ್ಲಿ ಒಬ್ಬನಾದ ಅಶ್ರಫ್ ಮೋಲ್ವಿ ಎಂದು ಗುರುತಿಸಿದ್ದಾರೆ. ಅಮರನಾಥ ಯಾತ್ರೆ ಮಾರ್ಗದಲ್ಲಿನ ಕಾರ್ಯಾಚರಣೆಯು ಭದ್ರತಾ ಪಡೆಗಳಿಗೆ ಒಂದು ದೊಡ್ಡ ಯಶಸ್ಸು ಎಂದು ಕುಮಾರ್ ಹೇಳಿದರು.