ಲಕ್ಷಾಂತರ ಜನರ ಬದುಕಿನ ಮೇಲೆ ನೇರವಾಗಿ ಪರಿಣಾಮ ಬೀರುವ ಯೋಜನೆಯನ್ನು ಜಾರಿಗೊಳಿಸುವಾಗ ಎಲ್ಲ ಆಯಾಮಗಳಿಂದಲೂ ಅಧ್ಯಯನ ಮಾಡಬೇಕು ಎನ್ನುವುದಕ್ಕೆ ಕೂಪನ್ ಪದ್ಧತಿಯ ವೈಫಲ್ಯ ಪಾಠವಾಗಬೇಕು.
ಪಡಿತರ ಸಾಮಗ್ರಿ ಸೋರಿಕೆ ತಡೆಯುವ ಸಲುವಾಗಿ ಜಾರಿಗೆ ತರಲಾಗಿದ್ದ ಕೂಪನ್ ವ್ಯವಸ್ಥೆಯ ರದ್ದತಿ ಅಕ್ರಮ ತಡೆಗೆ ಕೈಗೊಂಡಿದ್ದ ಕ್ರಮದ ದಯನೀಯ ವೈಫಲ್ಯಕ್ಕೆ ಯೋಗ್ಯ ಉದಾಹರಣೆ. ಅನ್ನಭಾಗ್ಯ ಯೋಜನೆಯಡಿ ಪಡಿತರ ಪಡೆಯಲು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರು ಅತ್ಯುತ್ಸಾಹದಿಂದ ಪ್ರಾರಂಭಿಸಿದ್ದ ಕೂಪನ್ ಪದ್ಧತಿಯ ಉದ್ದೇಶವೇನೋ ಚೆನ್ನಾಗಿಯೇ ಇತ್ತು. ಆದರೆ ಜಾರಿಯಲ್ಲಾಗಿರುವ ಲೋಪಗಳಿಂದಾಗಿ ವಿಫಲಗೊಂಡಿದೆ. ಈ ಪದ್ಧತಿ ಆರಂಭದಿಂದಲೇ ಗೊಂದಲದ ಗೂಡಾಗಿತ್ತು. ಜನರಿಗಾಗುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಪದೇ ಪದೇ ನಿಯಮಗಳನ್ನು ಬದಲಾಯಿಸಿದರೂ ಈ ಪದ್ಧತಿಯಲ್ಲಿ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚಾಗಿತ್ತು. ಫ್ರಾಂಚೈಸಿ ಗಳಿಗೆ ಹೋಗಿ ಕ್ಯೂ ನಿಂತು ಕೂಪನ್ ಪಡೆಯುವುದು, ಬಳಿಕ ಅದನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ತೋರಿಸಿ ಪಡಿತರ ಪಡೆಯುವ ಕ್ರಮದಿಂದ ಜನರು ಹೈರಾಣಾಗಿದ್ದರು.
ಸಮರ್ಪಕವಾಗಿ ಜಾರಿ ಮಾಡಿದ್ದರೆ ಅಕ್ರಮ ಮತ್ತು ಸೋರಿಕೆಯನ್ನು ಪರಿಣಾಮಧಿಕಾರಿಯಾಗಿ ತಡೆಯಲು ಸಾಧ್ಯವಿದ್ದ ಕೂಪನ್ ಪದ್ಧತಿಯಲ್ಲಿ ಸರಕಾರ ಆರಂಭದಲ್ಲೇ ಎಡವಟ್ಟು ಮಾಡಿಕೊಂಡಿತು. ಮೊದಲಾಗಿ ಕೂಪನ್ ಪದ್ಧತಿಯ ಬಗ್ಗೆ ಜನರಲ್ಲಿ ಅರಿವು ಉಂಟು ಮಾಡುವ ಪ್ರಯತ್ನವನ್ನೇ ಮಾಡಿರಲಿಲ್ಲ. ಪ್ರತಿ ತಿಂಗಳು ಕೂಪನ್‌ಗಾಗಿ ಓಡಾಡುವುದು ಕಷ್ಟ ಎಂದರಿವಾದ ಕೂಡಲೇ ಎರಡು ತಿಂಗಳ ಕೂಪನ್ ಒಮ್ಮೆಲೇ ಕೊಡುವ ನಿಯಮ ಜಾರಿಗೆ ಬಂತು. ಅನಂತರ ಒಮ್ಮೆಗೆ ಮೂರು ತಿಂಗಳ ಕೂಪನ್ ಎಂದಾಯಿತು. ಕೂಪನ್ ಇದ್ದರೆ ಯಾವ ನ್ಯಾಯ ಬೆಲೆ ಅಂಗಡಿಯಲ್ಲಿ ಬೇಕಾದರೂ ಪಡಿತರ ಸಿಗುತ್ತದೆ ಎಂಬ ಇನ್ನೊಂದು ನಿಯಮ ಬಂತು. ಪದೇ ಪದೇ ನಿಯಮಗಳು ಬದಲಾದ ಕಾರಣ ನಿಯಮಗಳೇ ಅರ್ಥವಾಗದಂತಾಯಿತು. ಜನರು ಬಿಡಿ, ಸ್ವತಃ ನ್ಯಾಯಬೆಲೆ ಅಂಗಡಿಯವರೇ ನಿಯಮಗಳಿಂದ ಕಕ್ಕಾಬಿಕ್ಕಿಯಾದರು. ಕೂಪನ್ ಪದ್ಧತಿ ಘೋರವಾಗಿ ವಿಫಲವಾಗಲು ಇದೂ ಒಂದು ಕಾರಣ.
ಹಾಸನ ಜಿಲ್ಲೆಯಲ್ಲಿ ಪ್ರಾಯೋಗಿಕ ನೆಲೆಯಲ್ಲಿ ಕೂಪನ್ ಪದ್ಧತಿ ಜಾರಿಗೆ ತಂದಾಗ ಅದರ ಸಾಧಕಬಾಧಕಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿದ್ದರೆ ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಪ್ರಯೋಗವನ್ನೇ ಯಶಸ್ಸು ಎಂದು ತಪ್ಪು ತಿಳಿದ ಸರಕಾರ ಯಾವುದೇ ಪೂರ್ವ ತಯಾರಿ ಮಾಡದೆ ಅವಸರದಲ್ಲಿ ರಾಜ್ಯವ್ಯಾಪಿ ಜಾರಿಗೊಳಿಸಿದ್ದು ಗೊಂದಲಕ್ಕೆ ಕಾರಣ.
ಅಕ್ರಮವನ್ನು ತಡೆಯಲು ಜಾರಿಗೆ ತಂದ ಕ್ರಮವನ್ನೇ ಕಾಳಸಂತೆಕೋರರು ಮತ್ತು ಸಮಾಜ ದ್ರೋಹಿಗಳು ಹೈಜಾಕ್ ಮಾಡಿದ್ದು ಕೂಪನ್ ಪದ್ಧತಿಯ ಇನ್ನೊಂದು ದುರಂತ. ಚಿತ್ರದುರ್ಗ ಸೇರಿದಂತೆ ಮೂರು ಜಿಲ್ಲೆಗಳಲ್ಲಿ ನಕಲಿ ಕೂಪನ್‌ಗಳನ್ನು ಮುದ್ರಿಸಿ ಟನ್‌ಗಟ್ಟಲೆ ಪಡಿತರ ಸಾಮಾಗ್ರಿಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿರುವ ಹಗರಣ ಇತ್ತೀಚೆಗೆ ಬೆಳಕಿಗೆ ಬಂದ ಬಳಿಕ ಕೂಪನ್ ಪದ್ಧತಿ ಮುಂದುವರಿಕೆಯಲ್ಲಿ ಯಾವುದೇ ಅರ್ಥವಿಲ್ಲ ಎಂದು ಸರಕಾರಕ್ಕೆ ಅರಿವಾಗಿತ್ತು. ಹೀಗಾಗಿ ಗುರುವಾರ ಸದನದಲ್ಲಿ ವಿಪಕ್ಷ ಕೂಪನ್ ಪದ್ಧತಿಯ ಸಮಸ್ಯೆಗಳನ್ನು ಪ್ರಸ್ತಾವಿಸಿದ ಕೂಡಲೇ ಆಹಾರ ಸಚಿವರು ಕೂಪನ್ ರದ್ದುಪಡಿಸುವ ನಿರ್ಧಾರ ಘೋಷಿಸಿದರು.ಅಂದರೆ ಕೂಪನ್ ಪದ್ಧತಿ ವಿಫಲವಾಗಿದೆ ಎಂಬ ವಾಸ್ತವ ಸಚಿವರಿಗೆ ಮೊದಲೇ ಗೊತ್ತಿತ್ತು. ಅದನ್ನು ರದ್ದು ಪಡಿಸಲು ಸೂಕ್ತವಾದ ಅವಕಾಶವೊಂದನ್ನು ಎದುರು ನೋಡುತ್ತಿತ್ತು ಅಷ್ಟೆ.
ಇನ್ನು ಮುಂದೆ ಬಯೋಮೆಟ್ರಿಕ್ ಆಧರಿಸಿ ಪಡಿತರ ವಿತರಿಸುವ ಪದ್ಧತಿ ಮುಂದುವರಿಯಲಿದೆ. ಸರಿಯಾಗಿ ಜಾರಿಗೊಳಿಸಿದರೆ ಅಕ್ರಮ ತಡೆಯಲು ಬಯೋಮೆಟ್ರಿಕ್ ವ್ಯವಸ್ಥೆಯೇ ಸಾಕು. ಗುಜರಾತಿನಲ್ಲಿ 7 ವರ್ಷಗಳ ಹಿಂದೆಯೇ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ಬಂದಿದ್ದು, ಪಡಿತರ ಸೋರಿಕೆ ನಿಯಂತ್ರಣದಲ್ಲಿ ತಕ್ಕಮಟ್ಟಿಗೆ ಸಫಲವಾಗಿದೆ. ಆದರೆ ಪಡಿತರ ಸೋರಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿದ ಹಿರಿಮೆ ಛತ್ತೀಸ್‌ಗಢ ಸರಕಾರಕ್ಕೆ ಸಲ್ಲಬೇಕು. ಉಳಿದ ರಾಜ್ಯಗಳಲ್ಲಿ ಪಡಿತರ ಸೋರಿಕೆ ಶೇ. 30ರಿಂದ 40ರಷ್ಟಿದ್ದರೆ ಛತ್ತೀಸ್‌ಗಢದಲ್ಲಿ ಶೇ.9 ಮಾತ್ರ ಇದೆ. ಪಡಿತರ ಅಂಗಡಿಗಳನ್ನು ಖಾಸಗಿಯವರ ಹಿಡಿತದಿಂದ ಬಿಡಿಸಿ ಸಹಕಾರಿ ಸಂಸ್ಥೆಗಳಿಗೆ ನೀಡಿರುವುದರಿಂದ ಇದು ಸಾಧ್ಯವಾಗಿದೆ. ಅಂತೆಯೇ ತೂಕದಲ್ಲಾಗುವ ವಂಚನೆಯನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪಡಿತರ ಅಕ್ರಮಗಳನ್ನು ತಡೆಯಲು ದಿನಕ್ಕೊಂದು ಕಾನೂನು ತರುವುದಕ್ಕಿಂತ ಇಂತಹ ಕೆಲವು ಮಾದರಿಗಳನ್ನು ಅಧ್ಯಯನ ಮಾಡಿ ನೋಡಬಹುದಲ್ಲ?