Advertisement

ಬರಿದಾದ ಮಲಪ್ರಭೆ

12:41 PM Apr 28, 2019 | Suhan S |

ಹುನಗುಂದ: ಕೃಷ್ಣೆ, ಮಲಪ್ರಭೆ, ಘಟಪ್ರಭೆ ನದಿಗಳ ಸಂಗಮವಾದರೂ ತಾಲೂಕಿನಲ್ಲಿ ಕುಡಿಯುವ ನೀರಿಗಾಗಿ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ನಿಜ, ಹುನಗುಂದ ತಾಲೂಕಿನಲ್ಲಿ ಎರಡು ನದಿಗಳು ಹರಿದಿವೆ. ತಾಲೂಕಿನ ಗಡಿಗುಂಟ ಕೃಷ್ಣೆ ಹರಿದರೆ, ಹತ್ತಾರು ಹಳ್ಳಿಗಳಲ್ಲಿ ಹಾಯ್ದು ಕೂಡಲಸಂಗಮದಲ್ಲಿ ಕೃಷ್ಣೆಯೊಂದಿಗೆ ಮಲಪ್ರಭೆ ಲೀನವಾಗುತ್ತಾಳೆ. ಇನ್ನು ಬೀಳಗಿ ತಾಲೂಕಿನ ಚಿಕ್ಕಸಂಗಮದಲ್ಲೇ, ಕೃಷ್ಣೆಯೊಂದಿಗೆ ಘಟಪ್ರಭೆ ಕೂಡಿ, ಕೂಡಲಸಂಗಮಕ್ಕೆ ಬಂದು, ಮೂರು ನದಿಗಳು ಕೃಷ್ಣೆಯಾಗಿ ಮುಂದೆ ಸಾಗುತ್ತವೆ. ತ್ರಿವೇಣಿ ಸಂಗಮ ಎಂಬ ಖ್ಯಾತಿ ತಾಲೂಕಿಗಿದ್ದರೂ ಇಲ್ಲಿನ ಕುಡಿಯುವ ನೀರಿನ ಸಮಸ್ಯೆ ನೀಗಿಲ್ಲ.

ತಾಲೂಕಿನ ಹಡಗಲಿ ಬಳಿ ಮಲಪ್ರಭಾ ನದಿಯ ಒಡಲಲ್ಲಿ ಇರುವ ಹಡಗಲಿ ಬ್ಯಾರೇಜ್‌, ಹತ್ತಾರು ಹಳ್ಳಿಯ ಜನ-ಜಾನುವಾರುಗಳ ಕುಡಿಯುವ ನೀರಿನ ದಾಹ ನೀಗಿಸುವ ಜೀವಜಲ. ಆದರೆ, ಈ ಬ್ಯಾರೇಜ್‌ ಕಳೆದ ಹಲವು ತಿಂಗಳಿಂದ ಬರಿದಾಗಿದ್ದು, ಜನ-ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಬಂದೋದಗಿದೆ.

ತಾಲೂಕಿನಲ್ಲಿ ಸತತ ಮೂರು ನಾಲ್ಕು ವರ್ಷಗಳಿಂದ ಸರಿಯಾಗಿ ಮಳೆಯಾಗದೇ ಬರಗಾಲ ಆವರಿಸಿದ್ದು. ಬರದ ಛಾಯೆ ಈ ವರ್ಷವೂ ಮುಂದುವರಿದಿದೆ. ಇದರಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

ಪ್ರತಿ ವರ್ಷ ಮಾರ್ಚ್‌ ತಿಂಗಳವರೆಗೆ ನದಿಯ ನೀರು ರೈತರಿಗೆ ಲಭ್ಯವಿರುತ್ತಿತ್ತು. ಆದರೆ ಕಳೆದ ಮೂರು ವರ್ಷಗಳಿಂದ ನದಿಯ ನೀರು ಜನವರಿ ತಿಂಗಳಲ್ಲಿಯೇ ಬರಿದಾಗುತ್ತಿರುವುದರಿಂದ ನದಿ ಪಾತ್ರದ ಜನ ಜಾನುವಾರುಗಳಿಗೆ ಕುಡಿಯಲು ಒಂದು ತೊಟ್ಟು ನೀರು ಸಿಗದೇ ನೀರಿಗಾಗಿ ಹಲವಾರು ಬಾರಿ ಈ ನದಿಯ ಎಡದಂಡೆ ಮತ್ತು ಬಲದಂಡೆಯ ರೈತರು ನವಿಲು ತೀರ್ಥ ಜಲಾಶಯದಿಂದ ನೀರು ಬಿಡುವಂತೆ ಒತ್ತಾಯಿಸಿ ತಾಲೂಕಾಡಳಿತ ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಒಂದು ಹನಿ ನೀರು ಬಿಡುತ್ತಿಲ್ಲ ಎಂಬ ಆಕ್ರೋಶ ಜನರಿಂದ ಕೇಳಿ ಬರುತ್ತಿದೆ.

Advertisement

ಮಲಪ್ರಭೆ ನದಿಗೆ ಶಾಶ್ವತ ಪರಿಹಾರಕ್ಕಾಗಿ ಮಹದಾಯಿ ನದಿಯ ನೀರು ಕಳಸಾ ಬಂಡೂರಿ ನಾಲೆಯ ಮೂಲಕ ಮಲಪ್ರಭೆ ನದಿಗೆ ಜೋಡಿಸಿದರೆ ಉತ್ತರ ಕರ್ನಾಟಕದ 4 ಜಿಲ್ಲೆಯ 11 ತಾಲೂಕಿನ ಜನರು ನೀರಿನ ಬರ ಇಲ್ಲದಂತಾಗುತ್ತದೆ. ಇಲ್ಲಿನ ರೈತರು ಹತ್ತು ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಯಾವದೇ ಸರ್ಕಾರ ಮತ್ತು ಜನಪ್ರತಿನಿಧಿಗಳು ಕಣ್ಣು ತೆರೆಯದಿರುವುದು ದುರಂತದ ಸಂಗತಿ ಎಂದು ಜನ ಬೇಸರದಿಂದ ನುಡಿಯುತ್ತಾರೆ.

ಹಡಗಲಿ ಬ್ಯಾರೇಜ್‌ ಖಾಲಿ ಖಾಲಿ: ಬೇಸಿಗೆ ಆರಂಭವಾಗುತ್ತಿದ್ದಂತೆ ನೆತ್ತಿ ಸುಡುವ ಬಿಸಿಲಿನ ತಾಪ ಒಂದೆಡೆಯಾದರೇ ಇನ್ನೊಂದೆಡೆ ನೀರಿನ ಮೂಲಗಳಾದ ನದಿ, ಹಳ್ಳ, ಕೊಳ್ಳಗಳು ಬತ್ತಿ ಬರಿದಾಗಿ ಜಲಮೂಲ ಹುಡುಕುವ ಸ್ಥಿತಿ ಎದುರಾಗಿದೆ. ಮಲಪ್ರಭಾ ನದಿ ಪಾತ್ರದಲ್ಲಿ ಸುಮಾರು 25 ಬ್ಯಾರೇಜ್‌ಗಳಿದ್ದು, ಹುನಗುಂದ ತಾಲೂಕಿನಲ್ಲೇ 6 ಬ್ಯಾರೇಜ್‌ಗಳಿವೆ. ಅದರಲ್ಲಿ ಹಡಗಲಿ ಬ್ಯಾರೇಜ್‌ ಪ್ರಮುಖವಾಗಿದೆ.

ಈ ಬ್ಯಾರೇಜ್‌ಗೆ ನೀರು ತುಂಬಿದರೇ ಇಲ್ಲಿನ ಹತ್ತಕ್ಕೂ ಹೆಚ್ಚು ಗ್ರಾಮದ ಜನರ ಕುಡಿಯುವ ನೀರಿಗೆ ಅನೂಕೂಲವಾಗುತ್ತ್ತದೆ. ಆದರೆ ಈ ಬ್ಯಾರೇಜ್‌ ಖಾಲಿಯಾಗಿ ನಾಲ್ಕೈದು ತಿಂಗಳು ಗತಿಸಿದರೂ ಒಂದು ತೊಟ್ಟು ನೀರು ಬಂದಿಲ್ಲ. ಕಳೆದ ಜನವರಿ ತಿಂಗಳಲ್ಲಿ ಮಾಜಿ ಸಿ.ಎಂ ಸಿದ್ದರಾಮಯ್ಯನವರ ಹೇಳಿದಾಗ 0.75 ಟಿಎಂಸಿ ನೀರನ್ನು ಮಲಪ್ರಭೆಗೆ ಹರಿಸಲಾಯಿತು. ಆದರೆ ಆ ನೀರು, ಬಾದಾಮಿ ತಾಲೂಕಿನ ಎಲ್ಲ ಬ್ಯಾರೇಜ್‌ಗಳು ತುಂಬಿದ ನಂತರ ತಡೆ ಹಿಡಿಯಲಾಯಿತು. ಇದರಿಂದ ಹನಿ ನೀರು ಸಹ ಹುನಗುಂದ ತಾಲೂಕಿಗೆ ತಲುಪಲಿಲ್ಲ. ಇದರಿಂದ ತಾಲೂಕಿನ 6 ಬ್ಯಾರೇಜ್‌ಗಳು ನೀರು ಇಲ್ಲದೇ ಖಾಲಿ ಖಾಲಿಯಾಗಿವೆ. ಇದರಿಂದ ಈ ಭಾಗದ 23 ಗ್ರಾಮಗಳ ಜನರು ನೀರಿಗಾಗಿ ಪರಿತಪಿಸುವ ಪರಿಸ್ಥಿತಿ ಇದೆ. ಇದು ಬಾದಾಮಿ ತಾಲೂಕಿಗೆ ಪ್ರಾಶಸ್ತ್ಯ ನೀಡಿ ಹುನಗುಂದ ತಾಲೂಕನ್ನು ಕಡೆಗಣಿಸಲಾಗಿದೆ ಆರೋಪ ಕೇಳಿ ಬರುತ್ತಿದೆ.

•ಮಲ್ಲಿಕಾರ್ಜುನ ಬಂಡರಗಲ್ಲ

Advertisement

Udayavani is now on Telegram. Click here to join our channel and stay updated with the latest news.

Next