ಸಾಮಾನ್ಯವಾಗಿ ಶುಕ್ರವಾರ ಎಂದರೆ ಸಿನಿಪ್ರಿಯರು ಖುಷಿ ಪಡುವ ದಿನ. ಕೆ.ಜಿ. ರಸ್ತೆಯಲ್ಲಿ ಪಟಾಕಿ ಸದ್ದು ಕೇಳುವ ದಿನ, ಸ್ಟಾರ್‌ಗಳಿಗೆ ಮತ್ತೂಂದು ಸಿನಿಮಾವಾದರೆ, ಹೊಸಬರಿಗೆ ಅದೃಷ್ಟ ಪರೀಕ್ಷೆಯ ದಿನ ಶುಕ್ರವಾರ. ಆದರೆ, ಈ ವಾರ ಕೆ.ಜಿ.ರಸ್ತೆಯಲ್ಲಿ ಅವ್ಯಾವುದು ಇರೋದಿಲ್ಲ. ಹೌದು, ಪ್ರತಿ ಶುಕ್ರವಾರ ಒಂದಲ್ಲ, ಒಂದು ಒಂದು ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಾ ಅದೃಷ್ಟ ಪರೀಕ್ಷೆಮಾಡಿಕೊಳ್ಳುತ್ತಿದ್ದವು. ಆದರೆ, ಈ ವಾರ ಯಾವುದೇ ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ.
ಹಾಗಾಗಿ, ಕೆ.ಜಿ.ರಸ್ತೆಯಲ್ಲಿ ಈ ಶುಕ್ರವಾರ ಯಾವುದೇ ಹೊಸ ಸಿನಿಮಾಗಳ ಸದ್ದು ಕೇಳಿಸಲ್ಲ. ಕೆಲವು ಶುಕ್ರವಾರಗಳಂದು ಸಿನಿಮಾ ಬಿಡುಗಡೆಯಾಗದಿರುವುದು ಹೊಸದೇನಲ್ಲ ಅಥವಾ ಪ್ರತೀ ವಾರ ಸಿನಿಮಾ ಬಿಡುಗಡೆ ಆಗಬೇಕು ಅಂತಲೂ ಏನಿಲ್ಲ. ಆದರೆ, ಇತ್ತೀಚೆಗೆ ಈ ತರಹ ಯಾವುದೇ ಸಿನಿಮಾ ಬಿಡುಗಡೆಯಾಗದೇ ಇದ್ದಿದ್ದು ಕಡಿಮೆಯೇ. ಆದರೆ, ಈ ವಾರ ಯಾವ ಸಿನಿಮಾಗಳು ಬಾರದೇ ಇರಲು ಕಾರಣ ಬಿಡುಗಡೆಯಾಗುತ್ತಿರುವ ದೊಡ್ಡ ಸಿನಿಮಾಗಳು.
ಸದ್ಯ ಬಿಡುಗಡೆಯಾಗಿರುವ ಒಂದಷ್ಟು ಸಿನಿಮಾಗಳು ಚಿತ್ರಮಂದಿರದಲ್ಲಿ ಗಟ್ಟಿಯಾಗಿ ನೆಲೆನಿಂತಿವೆ. ಹಾಗಾಗಿ, ಚಿತ್ರತಂಡದವರಿಗೆ ಬಯಸಿದ ಚಿತ್ರಮಂದಿರಗಳು ಸಿಗುತ್ತಿಲ್ಲ. ಇದು ಒಂದು ಕಾರಣವಾದರೆ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಯಲ್ಲಿ ಬರುತ್ತಿರುವ ದೊಡ್ಡ ಸಿನಿಮಾಗಳು. ಮುಖ್ಯವಾಗಿ ಮುಂದಿನ ವಾರ ಅಂದರೆ ಸೆ.29ಕ್ಕೆ ದರ್ಶನ್ ಅವರ “ತಾರಕ್’ ಚಿತ್ರ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
ಈ ವಾರ ಬಿಡುಗಡೆಯಾದರೆ ಮುಂದಿನ ವಾರದ ಹೊತ್ತಿಗೆ ಥಿಯೇಟರ್‌ಗಳು ಕೈ ತಪ್ಪುವ ಜೊತೆಗೆ ದೊಡ್ಡ ಸಿನಿಮಾದ ಹೊಡೆತವನ್ನು ಎದುರಿಸಬೇಕಾಗುತ್ತದೆ ಎಂಬ ಭಯ ಕೂಡಾ ಈ ವಾರ ಚಿತ್ರ ಬಿಡುಗಡೆ ಮಾಡದಿರಲು ಒಂದು ಕಾರಣ. ದಸರೆ ರಜೆ ಇರುವುದರಿಂದ ಸಹಜವಾಗಿಯೇ ಪ್ರೇಕ್ಷಕರ ಚಿತ್ತ ಸ್ಟಾರ್ ಸಿನಿಮಾಗಳತ್ತ ಇರುತ್ತದೆ. ಹೀಗಿರುವಾಗ ಕೈ ಸುಟ್ಟುಕೊಳ್ಳೋದು ಬೇಡ ಎಂದು ಕೆಲ ಚಿತ್ರತಂಡಗಳು ನಿರ್ಧರಿಸಿವೆ.
ಇದು ಒಂದು ಕಾರಣವಾದರೆ ಪರಭಾಷೆಗಳಲ್ಲೂ ದೊಡ್ಡ ಸಿನಿಮಾಗಳು ಈ ವಾರ ಹಾಗೂ ಮುಂದಿನ ವಾರ ಬಿಡುಗಡೆಯಾಗುತ್ತಿದೆ. ಜೊತೆಗೆ ಮಳೆಯ ಆರ್ಭಟ ಕೂಡಾ ಜೋರಾಗಿದೆ. ಹಬ್ಬದ ಸೀಸನ್ ಆದ್ದರಿಂದ ರಜೆ ಹಾಕಿ ವೆಕೇಶನ್ ಹೋಗುವ ಭೀತಿ ಬೇರೆ. ಇವೆಲ್ಲದರ ನಡುವೆ ಸಿಕ್ಕಿ ತೊಂದರೆ ಅನುಭವಿಸೋದು ಬೇಡ ಎಂಬ ಕಾರಣಕ್ಕೆ ಈ ವಾರ ಯಾವ ಸಿನಿಮಾಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿಲ್ಲ.
ಮುಂದಿನ ವಾರ “ತಾರಕ್’ ಒಂದೇ: ಈ ವಾರದ್ದು ಈ ಕಥೆಯಾದರೆ, ಮುಂದಿನ ವಾರ ಒಂದೇ ಒಂದು ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. ಸದ್ಯದ ಪರಿಸ್ಥಿತಿಯಲ್ಲಿ ಹೇಳುವುದಾದರೆ, ದರ್ಶನ್ ಅಭಿನಯದ “ತಾರಕ್’, ಸೆ. 29ಕ್ಕೆ ಬಿಡುಗಡೆಯಾಗುತ್ತಿರುವ ಏಕೈಕ ಕನ್ನಡ ಚಿತ್ರ. ಅದಲ್ಲದೆ ಮಹೇಶ್ ಬಾಬು ಅಭಿನಯದ “ಸ್ಪೈಡರ್’ ಸಹ ಅಂದೇ ಬಿಡುಗಡೆಯಾಗುತ್ತಿದೆ. ಈ ಎರಡು ದೊಡ್ಡ ಚಿತ್ರಗಳು ಬರುತ್ತಿರುವುದರಿಂದ, ಸಹಜವಾಗಿಯೇ ರಿಸ್ಕ್ ಬೇಡ ಎಂದು ಹಲವರು ನಿರ್ಧರಿಸಿದಂತಿದೆ.
ಈ ಮಧ್ಯೆ, ಸುದೀಪ್ ವಿಶೇಷ ಪಾತ್ರದಲ್ಲಿ ನಟಿಸಿರುವ “ರಾಜು ಕನ್ನಡ ಮೀಡಿಯಂ’ ಚಿತ್ರ ಕೂಡಾ ಸೆ.29ಕ್ಕೆ ಬಿಡುಗಡೆಯಾಗುತ್ತದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹಬ್ಬಿತ್ತು. ಆದರೆ, “ರಾಜು ಕನ್ನಡ ಮೀಡಿಯಂ’ ನಿರ್ಮಾಪಕ ಸುರೇಶ್ ಹೇಳುವಂತೆ, ಬಿಡುಗಡೆಯ ದಿನಾಂಕ ಇನ್ನೂ ಅಂತಿಮವಾಗಿಲ್ಲ. ಚಿತ್ರವು 29ಕ್ಕಂತೂ ಬಿಡುಗಡೆಯಾಗುತ್ತಿಲ್ಲ. ಆ ಬಗ್ಗೆ ಯೋಚಿಸಿ, ಸದ್ಯದಲ್ಲೇ ದಿನಾಂಕ ಪ್ರಕಟಿಸುವುದಾಗಿ ಅವರು ಹೇಳುತ್ತಾರೆ.