ವಯಸ್ಸಾದವರ ಕುರಿತಾಗಿ ಒಂದು ಗಾದೆಯಿದೆ- ಊರು ಹೋಗು ಅನ್ನುತ್ತೆ, ಕಾಡು ಬಾ ಅನ್ನುತ್ತೆ ಅಂತ. ಆದರೆ, ಬೆಂಗಳೂರಿನಲ್ಲಿ ಇರುವ ನನ್ನಂಥ ವಯಸ್ಸಾದವರನ್ನು ಯಾವ ಕಾಡೂ ಕರೆಯುವುದಿಲ್ಲ. ಗಿಜಿಗುಡುವ ಈ ಊರಿನಲ್ಲಿ ನನಗೆ ನೆಮ್ಮದಿ ನೀಡುವ ಸಂಗತಿಗಳು ಎರಡೇ-ಬೆಳಗ್ಗೆ ಮತ್ತು ಸಂಜೆಯ ವಾಕಿಂಗ್.
ನನ್ನ ಅದೃಷ್ಟಕ್ಕೆ ಮನೆಯ ಪಕ್ಕದಲ್ಲೇ ಪಾರ್ಕ್ ಇದೆ. ಮಹಾನಗರದ ಮಟ್ಟಿಗೆ ವಿಶಾಲ ಅನ್ನಬಹುದಾದ ಪಾರ್ಕ್ ಅದು. ಎರಡು ವರ್ಷಗಳ ಹಿಂದೆ ಉದ್ಯಾನದೊಳಗೆ ಜಿಮ್ ಸಲಕರಣೆಗಳನ್ನು ಅಳವಡಿಸಿ, ಕುಳಿತುಕೊಳ್ಳಲು ಆಸನಗಳನ್ನು ನಿರ್ಮಿಸಿದ್ದಾರೆ. ಅಷ್ಟೆಲ್ಲ ಕಾಮಗಾರಿ ನಡೆದ ಮೇಲೆ ನಮ್ಮ ಪಾರ್ಕ್‌ನ ಜನಪ್ರಿಯತೆ ಹೆಚ್ಚಿ, ಸಂಜೆ ಹೊತ್ತು ಜನಜಂಗುಳಿ ಉಂಟಾಗುತ್ತದೆ. ಅವರಲ್ಲಿ ಹಲವರು ನನಗೆ ಪರಿಚಯವಾಗಿದ್ದಾರೆ. ಸುತ್ತಮುತ್ತ ಐದಾರು ಬೀದಿಯ ಹೆಂಗಸರು ಗೆಳತಿಯರಾಗಿದ್ದಾರೆ. ನಾವೆಲ್ಲಾ ಪ್ರತಿದಿನವೂ ಒಂದೇ ಸಮಯಕ್ಕೆ ವಾಕಿಂಗ್‌ಗೆ ಬರುತ್ತೇವೆ. ಎರಡ್ಮೂರು ಬಾರಿ ಪಾರ್ಕ್ ಅನ್ನು ಸುತ್ತಿ, ಅಲ್ಲೇ ಕಲ್ಲಿನಬೆಂಚಿನ ಮೇಲೆ ಕುಳಿತು ಲೋಕಾಭಿರಾಮವಾಗಿ ಹರಟುತ್ತೇವೆ.
ಎಲ್ಲರೂ “ಸೀನಿಯರ್ ಸಿಟಿಝನ್’ ಎಂದು ಕರೆಸಿಕೊಳ್ಳುವ ವಯಸ್ಸಿನವ್ರೇ ಆಗಿರುವುದರಿಂದ, ವಾಕಿಂಗ್ ಮುಗಿಸಿ ಮನೆಗೆ ಹೋಗುವ ಧಾವಂತ ಹೆಚ್ಚಿನವರಿಗೆ ಇರುವುದಿಲ್ಲ. ಕೆಲವರಿಗೆ ಮನೆಯಲ್ಲಿ ಚಿನ್ನದಂಥ ಸೊಸೆಯಿದ್ದಾಳೆ. ಎಲ್ಲ ಕೆಲಸವನ್ನೂ ತಾನೇ ನಿಭಾಯಿಸಿಕೊಂಡು ಹೋಗುವುದರಿಂದ, ವಾಕಿಂಗ್‌ಗೆ ಬಂದಿರುವ ಅತ್ತೆಗೆ ಯಾವ ಚಿಂತೆಯೂ ಇರುವುದಿಲ್ಲ. ಇನ್ನೂ ಕೆಲವರಿಗೆ ಮನೆಯಲ್ಲಿ ಘಟವಾಣಿ ಸೊಸೆಯಿದ್ದಾಳೆ. ಅಡುಗೆ ಕೆಲಸದಲ್ಲಿ, ಮಕ್ಕಳನ್ನು ಶಾಲೆಗೆ ರೆಡಿ ಮಾಡುವಲ್ಲಿ ಅತ್ತೆಯೂ ಸಹಕರಿಸಲಿ ಎಂದು ಆಕೆ ಬಯಸುತ್ತಾಳೆ. ನಾನ್ಯಾಕೆ ಬೇಗ ಮನೆಗೆ ಹೋಗಿ ಸೊಸೆಯ ಕೈಗೆ ಸಿಕ್ಕಿಹಾಕಿಕೊಳ್ಳಬೇಕು? ಅಂತ ಅತ್ತೆಯೂ ಆರಾಮಾಗಿ ಪಾರ್ಕ್‌ನ ಬೆಂಚನ್ನೇ ನೆಚ್ಚಿಕೊಳ್ಳುತ್ತಾಳೆ. (ಈ ಎಲ್ಲ ವಿಷಯಗಳೂ ಪಾರ್ಕಿನ ಕಟ್ಟೆಪುರಾಣದಲ್ಲಿ ಸ್ವತಃ ಅತ್ತೆಯಂದಿರೇ ಹೇಳಿರುವಂಥದ್ದು) ಹೀಗಾಗಿ, ಬೆಳಗ್ಗೆ ಆರೂವರೆಗೆ ಪಾರ್ಕ್‌ಗೆ ಬರುವ ನಾವು, ಗಂಟೆ ಎಂಟಾದ ಮೇಲೆಯೇ ಮನೆಯ ಕಡೆ ಹೆಜ್ಜೆ ಹಾಕುವುದು.
ನಮ್ಮ ಈ ಪಾರ್ಕ್ ಗೆಳತಿಯರ ಕೂಟದಲ್ಲಿ ಬೇರೆ ಬೇರೆ ಬಗೆಯ ಸದಸ್ಯರಿದ್ದಾರೆ. ಮಕ್ಕಳ, ವೈದ್ಯರ ಒತ್ತಾಯಕ್ಕೆ ಪಾರ್ಕ್‌ಗೆ ಬಂದು, ವಾಕಿಂಗ್ ಮಾಡದೆ ಕುಳಿತೇ ಕಾಲ ಹಾಕುವವರು, ಸೊಸೆಯಂದಿರನ್ನು ಬೈಯಲು, ಗಾಸಿಪ್ ಮಾತನಾಡಲೆಂದೇ ಬರುವವರು, ಹಿಂದಿನ ದಿನ ನೋಡಿದ ಧಾರಾವಾಹಿ ಬಗ್ಗೆಯೇ ಮಾತಾಡುವವರು, ತಮ್ಮ ಒಡವೆ, ಸೀರೆಗಳ ಬಗ್ಗೆ ಕೊಚ್ಚಿ ಕೊಳ್ಳುವವರು, ಮೊಮ್ಮಕ್ಕಳ ಗುಣಗಾನ ಮಾಡಲೆಂದೇ ಬರುವವರು, ತಾವು ಆಗಷ್ಟೇ ಕಲಿತ ಮೊಬೈಲು, ಸೋಶಿಯಲ್ ಮೀಡಿಯಾ ಜ್ಞಾನ ಪ್ರದರ್ಶಿಸುವವರು, ಅಯ್ಯೋ ವಯಸ್ಸಾಯ್ತು ಬಿಡಿ ಅಂತ ಹಲುಬುವವರು, ಉತ್ಸಾಹದ ಬುಗ್ಗೆಗಳಂತೆ ನಲಿಯುವವರು, ರಾಜಕೀಯ ಮಾತನಾಡುವವರು… ಹೀಗೆ, ನಮ್ಮ ಗುಂಪಿನಲ್ಲಿ ವೈವಿಧ್ಯಮಯ ಜನರಿದ್ದಾರೆ. ಒಟ್ಟಿನಲ್ಲಿ ನಾನು ಪಾರ್ಕ್‌ಗೆ ಹೋಗುವುದು ಈ ಗೆಳತಿಯರನ್ನು ಭೇಟಿ ಮಾಡುವುದಕ್ಕೇ ಹೊರತು, ವಾಕಿಂಗ್ ಎಂಬುದು ನೆಪ ಮಾತ್ರ.
ನನ್ನ ಪಾರ್ಕ್ ಪುರಾಣವನ್ನು ಓದಿದಿರಲ್ಲ? ಈಗ ಮೇಲಿನ ವಾಕ್ಯಗಳನ್ನೆಲ್ಲ “ಭೂತಕಾಲ’ದಲ್ಲಿ ಇನ್ನೊಮ್ಮೆ ಓದಿಕೊಳ್ಳಿ! ಯಾಕೆ ಗೊತ್ತಾ, ಕೋವಿಡ್ ಕಾರಣದಿಂದ, ಪಾರ್ಕ್ ಎಂಬ ಖುಷಿಯೂ ಕೈ ತಪ್ಪಿ ಹೋಗಿದೆ. ಪಾರ್ಕಿನ ಬೆಂಚುಗಳು ಖಾಲಿ ಹೊಡೆಯುತ್ತಿವೆ. ಸೋಂಕಿನ ಭಯದಿಂದಾಗಿ ನಾನಷ್ಟೇ ಅಲ್ಲ, ಗೆಳತಿಯರ್ಯಾರೂ ಪಾರ್ಕ್ ಕಡೆಗೆ ಸುಳಿಯುತ್ತಿಲ್ಲ. ಹಿರಿಯರಿಗೆ ಸೋಂಕಿನ ಅಪಾಯ ಹೆಚ್ಚಿರುವುದರಿಂದ ಮನೆಗಳಲ್ಲೂ ನಮ್ಮನ್ನು ಹೊರಗೆ ಕಳಿಸುವುದಿಲ್ಲ. ಅದೃಷ್ಟವಿದ್ದವರು ತಮ್ಮ ಮನೆಯ ತಾರಸಿ ಮೇಲೆ ಓಡಾಡಿಕೊಳ್ಳುತ್ತಾರೆ. ಇಕ್ಕಟ್ಟಿನ ಅಪಾರ್ಟ್‌ಮೆಂಟ್‌ಗಳಲ್ಲಿ ಇರುವವರಿಗೆ ಆ ಭಾಗ್ಯವೂ ಇಲ್ಲ. ವಾರಕ್ಕೊಮ್ಮೆ ಧೈರ್ಯ ಮಾಡಿ ಪಾರ್ಕ್‌ಗೆ ಬಂದರೂ ಪರಿಚಿತ ಮುಖಗಳು ಕಾಣುವುದಿಲ್ಲ. ಕಾಣಿಸಿದರೂ, ಸ್ನೇಹದ ನಗು ಮಾಸ್ಕ್ ನೊಳಗೆ ಮರೆಯಾಗಿ ಬಿಡುತ್ತದೆ. ಮೊದಲಿನಂತೆ ಕಟ್ಟೆಯ ಮೇಲೆ ಒತ್ತೂತ್ತಾಗಿ ಕುಳಿತು ನಕ್ಕಿದ್ದು, ನಿಟ್ಟುಸಿರುಬಿಟ್ಟಿದ್ದು, ಯಾವುದೋ ಕಾಲದ ಘಟನೆಯೇನೋ ಎನ್ನುವಂತೆ ಕಣ್ಮುಂದೆ ಬರುತ್ತದೆ. ಮುಂದೆ ಎಲ್ಲವೂ ಮೊದಲಿನಂತೆ ಆಗುವುದೋ, ಇಲ್ಲವೋ ಎಂಬ ಭಯ ಕಾಡುತ್ತದೆ.
-ಸೀತಾಲಕ್ಷ್ಮಿ