Advertisement

ಮಹಿಳೆಯರ ಆತ್ಮಜಾಗೃತಿಯಾಗದ ಹೊರತು ಸಬಲೀಕರಣ ಅಸಾಧ್ಯ

01:28 PM Mar 27, 2017 | Team Udayavani |

ಧಾರವಾಡ: ಮಹಿಳೆಯರ ಆತ್ಮಜಾಗೃತಿ ಹಾಗೂ ಶಕ್ತಿಯ ಜಾಗೃತಿ ಆಗದ ಹೊರತು ಸಮಾಜದಲ್ಲಿ ಮಹಿಳಾ ಸಬಲೀಕರಣ ಸಾಧ್ಯವಿಲ್ಲ ಎಂದು ಸಾಹಿತಿ ಡಾ| ಶಾಂತಾ ಇಮ್ರಾಪುರ ಹೇಳಿದರು. ನಗರದ ಕಸಾಪ ಆವರಣದಲ್ಲಿ ಹಮ್ಮಿಕೊಂಡಿದ್ದ 11ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ರವಿವಾರದ “ಮಹಿಳೆ: ಸಶಕ್ತಿಕರಣದ ಹಾದಿಯಲ್ಲಿ’ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

Advertisement

ಹೆಣ್ಣು ಮಕ್ಕಳಿಗೆ ದೈವಿ ಸ್ವರೂಪದಲ್ಲಿ ಆರಾಧಿಸಿರುವ ನಮ್ಮ ಸಂಸ್ಕೃತಿಯಲ್ಲಿ ಧಾರ್ಮಿಕ ನಂಬಿಕೆ, ಕಟ್ಟುಪಾಡುಗಳ ಮೂಲಕ ಮಹಿಳೆಯರನ್ನು ಕಟ್ಟಿ ಹಾಕುವ ಕೆಲಸ ಅನಾದಿ ಕಾಲದಿಂದಲೂ ಸಾಗಿ ಬಂದಿದೆ. ಇದಕ್ಕೆ ಬದುಕಿನ ವೈರುಧ್ಯಗಳೇ ಕಾರಣ. ಈ ಬದುಕಿನ ಆಲೋಚನೆಗಳಲ್ಲಿನ ವೈರುಧ್ಯಗಳು ಸಮಾಜದ ಈ ಸಂಘರ್ಷಗಳಿಗೆ ಕಾರಣವಾಗಿದೆ. 

ಹೀಗಾಗಿ ಮಹಿಳೆಯರಲ್ಲಿ ಆತ್ಮಜಾಗೃತಿ, ಶಕ್ತಿಯ ಸಂಚಲನ ಆಗದ ಹೊರತು ಸಮಾಜದಲ್ಲಿ ಬದಲಾವಣೆ ಬರದು ಎಂದರು. ಸ್ತ್ರೀಯರಲ್ಲಿ ಆತ್ಮಜಾಗೃತಿ ಆಗಬೇಕು. ಆತ್ಮಸ್ಥೈರ್ಯದಿಂದ  ಪ್ರತಿಯೊಬ್ಬ ಮಹಿಳೆ ಬದುಕಿನ ಪ್ರೀತಿ ಮೂಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮಹಿಳೆಯರಲ್ಲಿ ಸಾಮಾಜಿಕ ಪ್ರಜ್ಞೆ, ಸೂಕ್ಷ್ಮಸಾಮಾಜಿಕ ಸಂವೇದನೆ ಜಾಗೃತಿಗೊಳಿಸಬೇಕು. 

ಒಂದು ಸಮುದಾಯದ ಸ್ತ್ರೀ ಇನ್ನೊಂದು ಸಮುದಾಯದ ದೇವರ ನಾಮಸ್ಮರಣೆ ಮಾಡಿದರೆ ಆ ಸಮುದಾಯ ಬಹಿಷ್ಕಾರ ಹಾಕುವುದು ಸಲ್ಲ. ಜಾತಿ-ಧರ್ಮದ ಹೆಸರಿನಲ್ಲಿ ಮಹಿಳೆಯರನ್ನು ಕಟ್ಟಿ ಹಾಕಲಾಗುತ್ತಿದೆ. ಹೀಗಾಗಿ ವಿದ್ಯೆ ಮಾನಸಿಕ, ಬೌದ್ಧಿಕ, ವೈಚಾರಿಕವಾಗಿ ಸಶಕ್ತಿಕರಣಗೊಳಿಸಬೇಕಿದೆ ಎಂದರು.

ಮಂಡ್ಯದ ಸಾಹಿತಿ ಡಾ|ವಿಜಯಾ ಸಬರದ ಮಾತನಾಡಿ, ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಶೇ.50 ಮೀಸಲಾತಿ ಬೇಕಿದೆ. ಇದಕ್ಕಾಗಿ ಆಗ್ರಹಿಸಿದರೂ ರಾಜಕೀಯ ಪಕ್ಷಗಳು ಮೌನ ವಹಿಸುತ್ತಿವೆ. ಶರಣರ ಕಾಲದಿಂದ ಹಿಡಿದು 20ನೇ ಶತಮಾನದವರೆಗೂ ಮಹಿಳಾ ಸಶಕ್ತಿಕರಣಕ್ಕೆ ಸಾಕಷ್ಟು ಹೋರಾಟ ಮಾಡಿಕೊಂಡು ಬರಲಾಗಿದೆ.

Advertisement

ಆದರೆ, ಇಂದಿಗೂ ಮಹಿಳಾ ಸಶಕ್ತಿಕರಣ ಆಗಿಲ್ಲ. ಮಹಿಳಾ ಸಶಕ್ತಿಕರಣದ ಉದ್ದೇಶ ಪುರುಷ ಸಾಮಾಜಿಕ ವ್ಯವಸ್ಥೆಯ ಹಾದಿಯಲ್ಲಿ ಸಾಗಬೇಕಿಲ್ಲ. ಸದ್ಯದ ಶಿಕ್ಷಣ ಪದ್ಧತಿಯಲ್ಲಿ ಪರ್ಯಾಯ ಶಿಕ್ಷಣದ ಅಗತ್ಯವಿದೆ ಎಂದರು. ಮಹಿಳಾ ಸಂಘಟನೆ ಕುರಿತು ವಿಷಯ ಮಂಡಿಸಿದ ಸಾಧನಾ ಸಂಸ್ಥೆಯ ಮುಖ್ಯಸ್ಥೆ ಡಾ| ಇಸೆಬೆಲ್ಲಾ ಝೇವಿಯರ್‌ ದಾಸ್‌, ಅತ್ಯಾಚಾರ ಆದಾಗ ಕೇವಲ ಹೆಣ್ಣಿನ ಶೀಲ ಮಾತ್ರ ಹಾಳೇ..? ಗಂಡಿನ ಶೀಲಕ್ಕೆ ಬೆಲೆ ಇಲ್ಲವೇ..?

ಅತ್ಯಾಚಾರದಲ್ಲಿ ಗಂಡಿನ ಶೀಲವೂ ಹಾಳಾಗುತ್ತದೆ. ಲಿಂಗ ತಾರತಮ್ಯದ ಹೋಗಲಾಡುವತನಕ ಸಮಾಜದ ಬದಲಾವಣೆ ಸಾಧ್ಯವಿಲ್ಲ. ಹೆಣ್ಣು-ಗಂಡು ಬದುಕಿನ ಜೋಡೆತ್ತಿನ ಚಕ್ರದ ಬಂಡಿ ಸಮಾನಾಗಿಯೇ ಉರುಳಬೇಕು ಎಂದರು. ಸಮ್ಮೇಳನ ಸರ್ವಾಧ್ಯಕ್ಷ ವಿ.ಸಿ.ಐರಸಂಗ, ಕಲಘಟಗಿ ತಾಲೂಕು ಘಟಕದ ಅಧ್ಯಕ್ಷೆ ಅನಿತಾ ಹತ್ತಿ, ಮಲ್ಲಿಕಾರ್ಜುನ ಪುರದನಗೌಡರ, ಈಶ್ವರ ಜವಳಿ, ಆರ್‌.ಎಂ.ಹೊಲ್ತಿಕೋಟಿ ಸೇರಿದಂತೆ ಹಲವರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next