Advertisement

ಸದೃಢ ಶಿಕ್ಷಣ ಸಂಸ್ಥೆಯಿಂದ ನಾಗರಿಕರ ಸಬಲೀಕರಣ: ಸಚಿವ ಅಶ್ವತ್ಥನಾರಾಯಣ

03:07 PM Jul 11, 2022 | Team Udayavani |

ತಿಪಟೂರು: ನಾಗರಿಕರು ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ ಕೊಡುಗೆ ನೀಡಬೇಕು. ಹೀಗಾದಾಗ ಶಿಕ್ಷಣ ಸಂಸ್ಥೆಗಳು ಗುಣಮಟ್ಟದಲ್ಲಿ ಮೇಲ್ದರ್ಜೆಗೇರುವ ಜೊತೆಗೆ ನಾಗರಿಕರ ಸಬಲೀಕರಣವೂ ಸಾಧ್ಯವಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು.

Advertisement

ತುಮಕೂರು ವಿಶ್ವವಿದ್ಯಾನಿಲಯದ ತಿಪಟೂರು ಸ್ನಾತಕೋತ್ತರ ಕೇಂದ್ರ ‘ಕಲ್ಪಸಿರಿ’ಯ ನಿರ್ಮಾಣಕ್ಕೆ ಹತ್ತಿರದ ರಂಗಾಪುರದಲ್ಲಿ ಸೋಮವಾರ ಭೂಮಿಪೂಜೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಇಪ್ಪತ್ತೊಂದನೇ ಶತಮಾನವು ಜ್ಞಾನಾಧಾರಿತ ಸಮಾಜವಾಗಿದೆ. ಇಂತಹ ಶಿಕ್ಷಣ ಸಂಸ್ಥೆಗಳು ಸುಸ್ಥಿರವಾಗಿರಬೇಕೆಂದರೆ ಗುಣಮಟ್ಟ ಮುಖ್ಯ. ಇಂತಹ ಕೇಂದ್ರಗಳು ಸ್ಥಳೀಯವಾಗಿ ಪ್ರತಿಭೆಯನ್ನು ಉತ್ತೇಜಿಸುವ ಜೊತೆಗೆ ಇಡೀ ದೇಶದೆಲ್ಲೆಡೆಯ ಪ್ರತಿಭೆಗಳನ್ನು ಇಲ್ಲಿಗೆ ಸೆಳೆಯುವ ರೀತಿಯಲ್ಲಿ ಬೆಳೆಯಬೇಕು. ಇದು ಸಾಧ್ಯವಾದಾಗ, ವೈವಿಧ್ಯತೆಯನ್ನು ಉಳಿಸಿಕೊಂಡು ನಮ್ಮತನದ ಛಾಪನ್ನು ಒತ್ತಿದಂತಾಗುತ್ತದೆ ಎಂದರು.

ಯಾವ ಜಾಗದಲ್ಲಿ ಗುಣಮಟ್ಟದ ಶಿಕ್ಷಣ ಇರುತ್ತದೋ ಅದು ಸಮೃದ್ಧತೆಯ ತಾಣವಾಗುತ್ತದೆ. ಇಲ್ಲಿ 16 ಎಕರೆ ಕ್ಯಾಂಪಸ್ ತಲೆಯೆತ್ತಲಿದ್ದು,  ಎಂ.ಕಾಂ, ಎಂಸಿಎ ಕೋರ್ಸ್ ಗಳು ಇರಲಿವೆ. ಜಿಲ್ಲೆಯ ಬಿದರೆಕಟ್ಟೆಯಲ್ಲಿ 44 ಕೋಟಿ ವೆಚ್ಚದಲ್ಲಿ ಹೊಸ ಕ್ಯಾಂಪಸ್ ನಿರ್ಮಾಣ ಕಾರ್ಯ ನಡೆದಿದೆ. ಸಿರಾದಲ್ಲಿ ಪಿ.ಜಿ. ಕೇಂದ್ರ ಕಾರ್ಯಾಚರಿಸುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ತುಮಕೂರು ವಿ.ವಿ.ಯಲ್ಲಿ ಸಾಕಷ್ಟು ಅಭಿವೃದ್ಧಿ ಆಗುತ್ತಿದೆ, ಒಟ್ಟು 70 ಎಕರೆ ವಿಸ್ತೀರ್ಣದಲ್ಲಿರುವ ತುಮಕೂರು ವಿ.ವಿ.ಯು ಈಗ ನ್ಯಾಕ್ ಬಿ+ ಶ್ರೇಣಿಯಲ್ಲಿದ್ದು, ಎ+ ಶ್ರೇಣಿಗೆ ಏರಬೇಕು. ಅದೇ ರೀತಿ ಎನ್.ಐ.ಆರ್.ಎಫ್. ಶ್ರೇಯಾಂಕದಲ್ಲಿ ಈಗ 150ರಿಂದ 200ರ ಒಳಗಿದ್ದು, ಇದು ಇನ್ನಷ್ಟು ಮೇಲಕ್ಕೆ ಬರಬೇಕು. ಒಟ್ಟಾರೆ ತುಮಕೂರು ವಿ.ವಿ. ದೇಶದ ಎಲ್ಲಾ ಭಾಗದವರೂ ಓದಲು ಬಯಸುವಂತಹ ಶೈಕ್ಷಣಿಕ ತಾಣವಾಗಬೇಕು ಎಂದು ಆಶಿಸಿದರು.

ಸದ್ಯ ತಾಂತ್ರಿಕತೆಯು ಶಿಕ್ಷಣದ ಅವಕಾಶಗಳನ್ನು ಹೆಚ್ಚಿಸುತ್ತಿದೆ. ಈಗ ರಾಜ್ಯದ ಯಾವುದೇ ಗ್ರಾಮದ ವಿದ್ಯಾರ್ಥಿ ಯುಯುಸಿಎಂಎಸ್ ಬಳಸಿ ತಾನಿರುವ ಸ್ಥಳದಿಂದ ರಾಜ್ಯದ ಯಾವುದೇ ಕಾಲೇಜಿಗೆ ಬೇಕಾದರೂ ಅರ್ಜಿ ಹಾಕಬಹುದು. ವಿದ್ಯಾರ್ಥಿಗಳ ಅಂಕಪಟ್ಟಿ ಸೇರಿದಂತೆ 43 ವರ್ಷಗಳ ಶೈಕ್ಷಣಿಕ ದಾಖಲೆಗಳು ಡಿಜಿ ಲಾಕರ್ ನಲ್ಲಿರುವುದರಿಂದ ಕುಳಿತ ಜಾಗದಿಂದಲೇ ಶೈಕ್ಷಣಿಕ ದಾಖಲಾತಿಗಳನ್ನು ಅರ್ಜಿಗೆ ಲಗತ್ತಿಸಬಹುದು ಎಂದು ವಿವರಿಸಿದರು.

Advertisement

ಇದನ್ನೂ ಓದಿ:ನೂತನ ಸಂಸತ್ ಭವನ; 6.5 ಮೀಟರ್ ಎತ್ತರದ ಬೃಹತ್ ರಾಷ್ಟ್ರ ಲಾಂಛನ ಅನಾವರಣಗೊಳಿಸಿದ ಪ್ರಧಾನಿ ಮೋದಿ

ಸರ್ಕಾರವು 22 ವರ್ಷಗಳ ನಂತರ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹೊಸ ಕಾಯ್ದೆ ಜಾರಿಗೊಳಿಸುವ ಉದ್ದೇಶ ಹೊಂದಿದೆ. ಇದಕ್ಕೆ ಮುಂಚೆ 2000ನೇ ಇಸವಿಯಲ್ಲಿ ಕರ್ನಾಟಕ ಸ್ಟೇಟ್ ಯೂನಿವರ್ಸಿಟಿ ಕಾಯ್ದೆ ತರಲಾಗಿತ್ತು. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಎಲ್ಎಂಎಸ್ (ಲರ್ನಿಂಗ್ ಮ್ಯಾನೇಜ್ ಮೆಂಟ್) ಸಿಸ್ಟಂ, ಸ್ಮಾರ್ಟ್ ಕ್ಲ್ಯಾಸ್ ರೂಮ್ ಸೇರಿದಂತೆ ಹಲವು ಉಪಕ್ರಮಗಳಿಗೆ ಚಾಲನೆ ಕೊಡಲಾಗಿದೆ. ಯಾವುದೇ ಕಾಲೇಜಿನಲ್ಲಿ ಬೋಧಕರ ಕೊರತೆ ಇಲ್ಲದಂತೆ ನೋಡಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

ಸಚಿವರು ಇದಕ್ಕೂ ಮುನ್ನ ತಿಪಟೂರು ಪಟ್ಟಣದಲ್ಲಿ ಪದವಿ ಕಾಲೇಜಿಗೆ ಭೇಟಿ ಕೊಟ್ಟು, ಅಲ್ಲಿ ನಿರ್ಮಾಣ ಹಂತದಲ್ಲಿರುವ ಕಾಲೇಜು ಕಟ್ಟಡವನ್ನು ಪರಿಶೀಲಿಸಿ, ಆಗಿರುವ ಪ್ರಗತಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next