Advertisement

ಉದ್ಯೋಗ ಖಾತ್ರಿ ಯೋಜನೆ ವರ; ರೈತನಿಗೆ ಪೇರಲ ಬೆಳೆಯೇ ಎಟಿಎಂ

06:29 PM Jan 31, 2022 | Team Udayavani |

ಹಾವೇರಿ: ಪ್ರತಿ ವರ್ಷ ಮೆಕ್ಕೆಜೋಳ ಬೆಳೆದು ನಷ್ಟ ಅನುಭವಿಸುತ್ತಿದ್ದ ರೈತರೊಬ್ಬರು ಇದೀಗ ಪೇರಲುು ಬೆಳೆದು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಗೋವಿನಜೋಳ ಬೆಳೆದು ನಷ್ಟ ಅನುಭವಿಸುತ್ತಿದ್ದ ಅನ್ನದಾತರಿಗೆ ಉದ್ಯೋಗ ಖಾತ್ರಿ ಯೋಜನೆ ವರವಾಗಿದ್ದು, ಇದೀಗ ತಿಂಗಳಿಗೆ ಉತ್ತಮ ಆದಾಯ ಪಡೆದು ಇತರ ರೈತರಿಗೆ ಮಾದರಿಯಾಗಿದ್ದಾರೆ.

Advertisement

ತಾಲೂಕಿನ ಕೋಳೂರ ಗ್ರಾಮದ ವಿಕಲಚೇತನ ರೈತ ಪುಟ್ಟಪ್ಪ ಕಿತ್ತೂರ ತಮ್ಮ ಜಮೀನಿನಲ್ಲಿ ಪೇರಲು ಬೆಳೆದು ಲಾಭ ಪಡೆಯುತ್ತಿದ್ದಾರೆ. ಮೊದಲು ಗೋವಿನಜೋಳ ಬೆಳೆಯುತ್ತಿದ್ದವರು ಪರ್ಯಾಯವಾಗಿ ಬೇರೆ ಏನಾದರೂ ಬೆಳೆಯಬೇಕು ಎಂದುಕೊಂಡಿದ್ದರು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪೇರಲು ಬೆಳೆಯಲು ಗ್ರಾಪಂ ಮತ್ತು ತೋಟಗಾರಿಕೆ ಇಲಾಖೆ ಸಹಾಯಧನ ನೀಡುತ್ತದೆ ಎಂದು ತಿಳಿದು ಇಲಾಖೆ ಅಧಿಕಾರಿಗಳನ್ನು ಭೇಟಿಯಾದರು. ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಸದ್ಯ ಉತ್ತಮ ಫಸಲಿನೊಂದಿಗೆ ಲಾಭ ಪಡೆಯುತ್ತಿದ್ದಾರೆ.

ಕೋಳೂರ ಗ್ರಾಮದ ರೈತ ಪುಟ್ಟಪ್ಪ ಕಿತ್ತೂರ 3.24 ಎಕರೆ ಜಮೀನು ಹೊಂದಿದ್ದು, ಪ್ರತಿ ವರ್ಷ ಬೆಳೆ ಹಾನಿ ಹಾಗೂ ಬೆಳೆಗಳಿಗೆ ಉತ್ತಮ ದರ ಸಿಗದೇ ಕುಟುಂಬ ನಿರ್ವಹಣೆಗೆ ಪರದಾಡುವಂತಾಗಿತ್ತು. ಒಂದು ದಿನ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಗ್ರಾಮ ಸಭೆಯಿದೆ. ಎಲ್ಲರೂ ಬನ್ನಿ ಎಂದು ಡಂಗೂರ ಸಾರಿದ್ದರು.

ನಂತರ ನಾನು ಗ್ರಾಮ ಸಭೆಗೆ ಹೋಗಿ ಪಿಡಿಒ ಭೇಟಿಯಾದೆ. ಆಗ ಅವರು ವೈಯಕ್ತಿಕ ಕಾಮಗಾರಿಗಳನ್ನು ಮಾಡಿಕೊಳ್ಳುವವರು ಹೆಸರನ್ನು ಬರೆಸಲು ತಿಳಿಸಿದರು. ನಾನು ತೋಟಗಾರಿಕೆ ಇಲಾಖೆಯಿಂದ ಪೇರಲು ಸಸಿ ನೆಡಲು ಹೆಸರು ಬರೆಸಿದೆ. ಆಗ ಉದ್ಯೋಗ ಖಾತ್ರಿ ಯೋಜನೆಯಡಿ ವಿಶೇಷ ಉದ್ಯೋಗ ಚೀಟಿ ಪಡೆದು ಅನುಷ್ಠಾನ ಇಲಾಖೆಯಿಂದ ಕಾಮಗಾರಿ ಆರಂಭಿಸಿದೆ. ಈಗ ಪೇರಲು ಬೆಳೆ ಕೈಹಿಡಿದಿದ್ದು, ಕುಟುಂಬ ನಿರ್ವಹಣೆಗೆ ಆಧಾರವಾಗಿದೆ ಎಂದು ರೈತ ಪುಟ್ಟಪ್ಪ ಖಷಿಯಿಂದ ಹೇಳುತ್ತಾರೆ.

ತಿಂಗಳಿಗೆ 30 ಸಾವಿರ ಆದಾಯ: 3.24 ಎಕರೆ ಪ್ರದೇಶದಲ್ಲಿ ಲಕ್ನೋ-49 ತಳಿಯ 450 ಪೇರಲು ಸಸಿಗಳನ್ನು 18 ಅಡಿ (6 ಮೀಟರ್‌) ಅಂತರದಲ್ಲಿ ಬೆಳೆಯಲಾಗಿದೆ. ತಮ್ಮ ಜಮೀನಿನಲ್ಲಿ ಬೆಳೆದ ಪೇರಲು ಹಣ್ಣುಗಳನ್ನು ಪಕ್ಕದ ಕರ್ಜಗಿ ರೈಲ್ವೆ ಸ್ಟೇಶನ್‌ ಹಾಗೂ ಹಾವೇರಿ ಪೇಟೆಯಲ್ಲಿ ಗಾತ್ರಕ್ಕೆ ಅನುಗುಣವಾಗಿ ಮಾರಾಟ ಮಾಡುವುದರಿಂದ ಆರ್ಥಿಕವಾಗಿ ದಿನಕ್ಕೆ 800 ರಿಂದ 1000 ರೂ. ಆದಾಯ ಗಳಿಸುತ್ತಿದ್ದಾರೆ.

Advertisement

ಅಲ್ಲದೇ, ತೋಟಕ್ಕೆ ಬೇರೆ ಜಿಲ್ಲೆಗಳಿಂದ ವ್ಯಾಪಾರಿಗಳು ಬಂದು ಒಂದು ದರ ನಿಗದಿಗೊಳಿಸಿ ಖರೀದಿಸಿಕೊಂಡು ಹೊಗುತ್ತಾರೆ. ಎಲ್ಲ ಖರ್ಚು-ವೆಚ್ಚ ತೆಗೆದು ತಿಂಗಳಿಗೆ 30 ಸಾವಿರ ರೂ. ಆದಾಯ ಬರುತ್ತಿದ್ದು, ಇಲ್ಲಿಯವರೆಗೆ 1.50 ಲಕ್ಷ ರೂ. ವರೆಗೆ ಲಾಭ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ 3-4 ಲಕ್ಷ ರೂ. ಆದಾಯದ ನೀರಿಕ್ಷೆ ಇದೆ. ಅಲ್ಲದೇ, ಮಿಶ್ರ ಬೆಳೆಯಾಗಿ ಅಲಹಾಬಾದ್‌ ಸಫೇದ ಕೂಡಾ ನಾಟಿ ಮಾಡುವ ಯೋಚನೆ ಹೊಂದಿದ್ದು, ವರ್ಷ ಪೂರ್ತಿ ಪೇರಲು ಹಣ್ಣುಗಳನ್ನು ಮಾರಾಟ ಮಾಡುತ್ತಾ ಜೀವನ ನಡೆಸುತ್ತಿದ್ದೇವೆ ಎಂದು ರೈತ ಪುಟ್ಟಪ್ಪ ತಿಳಿಸಿದರು.

ನರೇಗಾ ಯೋಜನೆಯಡಿ 3.24 ಎಕರೆಯಲ್ಲಿ ಪೇರಲು ಬೆಳೆದಿದ್ದೇನೆ. ಮೊದಲು ಗೋವಿನಜೋಳ ಬೆಳೆಯುತ್ತಿದ್ದೆ. ಆದರೆ, ಪೇರಲುದಲ್ಲಿ ಗೋವಿನಜೋಳ ಬೆಳೆಗಿಂತ ಉತ್ತಮ ಆದಾಯ ಬರುತ್ತಿದೆ. ನಮ್ಮ ಜಮೀನಲ್ಲಿ ಬೆಳೆದಿರುವ ಪೇರಲು ಹಣ್ಣುಗಳು ನಮ್ಮ ಕುಟುಂಬಕ್ಕೆ ಎಟಿಎಂ ಇದ್ದಂತೆ. ನಮಗೆ
ಯಾವಾಗ ಬೇಕೋ ಆವಾಗ ಪೇರಲು ಹಣ್ಣನ್ನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದೇವೆ. ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ನಮಗೆ ಹೆಚ್ಚಿನ ಸಹಕಾರ ನೀಡಿದ್ದಾರೆ.
ಪುಟ್ಟಪ್ಪ ಕಿತ್ತೂರ, ಕೋಳೂರ ಗ್ರಾಮದ ರೈತ

ಯೋಜನೆ ಸದ್ಬಳಕೆ ಹೇಗೆ?
ಉದ್ಯೋಗ ಖಾತ್ರಿ ಯೋಜನೆಯಲ್ಲಿ ರೈತರು ಜಾಬ್‌ ಕಾರ್ಡ್‌ ಹೊಂದಿರಬೇಕು. ಸಣ್ಣ, ಅತಿ ಸಣ್ಣ ರೈತ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಈ ಯೋಜನೆ ಲಾಭ ಸಿಗುತ್ತದೆ. ಈ ಯೋಜನೆಯಲ್ಲಿ ಜೀವನ ಪರ್ಯಂತ 2.50 (ಒಂದೇ ಸಾರಿ) ಲಕ್ಷ ರೂ. ವರೆಗೂ ಲಾಭ ಪಡೆದುಕೊಳ್ಳಬಹುದು.

ರೈತರು ಕೇವಲ ಒಂದೇ ಬೆಳೆ ಬೆಳೆದು ನಷ್ಟ ಅನುಭವಿಸುವ ಬದಲು ನರೇಗಾ ಯೋಜನೆಯಡಿ ಧನಸಹಾಯ ಪಡೆದ ಮಿಶ್ರ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು. ಇದರಿಂದ ಆರ್ಥಿಕವಾಗಿ ಸದೃಢರಾಗಲು ಅನೂಕೂಲವಾಗಲಿದೆ. ತಾಲೂಕಿನ 33 ಗ್ರಾಪಂಗಳ ರೈತರು ಸಹ ಲಾಭ
ಪಡೆದುಕೊಳ್ಳಬೇಕು.
ಇಂತಿಯಾಜ ಜಂಗಪುರಿ, ಹಿರಿಯ
ಸಹಾಯಕ ತೋಟಗಾರಿಕೆ ನಿರ್ದೇಶಕರು, ಹಾವೇರಿ

ವೀರೇಶ ಮಡ್ಲೂರ್‌

Advertisement

Udayavani is now on Telegram. Click here to join our channel and stay updated with the latest news.

Next