Advertisement
ಮುಖ್ಯಮಂತ್ರಿಗಳ ಗೃಹ ಕಚೇರಿ “ಕೃಷ್ಣಾ’ದಲ್ಲಿ ಸೋಮವಾರ ಜನತಾ ದರ್ಶನ ವೇಳೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ವಿಕಲಚೇತನ ಮಾಲತೇಶ್ ತಮ್ಮ ಅಳಲು ತೋಡಿಕೊಂಡರು. ಬಲಗಾಲು ಕಳೆದುಕೊಂಡಿರುವ ಮಾಲತೇಶ್ ಎಂಬಿಎ ವ್ಯಾಸಂಗ ಮಾಡುತ್ತಿದ್ದು, ಉದ್ಯೋಗ ಕೊಡಿಸುವಂತೆ ಮನವಿ ಮಾಡಿದರು.
ಮೂಳೆ ಸಮಸ್ಯೆಯಿಂದ ಬಳಲುತ್ತಿದ್ದ 10 ತಿಂಗಳ ಮಗುವಿನ ಚಿಕಿತ್ಸೆಗೆ ನೆರವಾಗುವಂತೆ ಮೊರೆಯಿಟ್ಟ ದಂಪತಿಗೆ ಮುಖ್ಯಮಂತ್ರಿಗಳು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದರು.
Related Articles
Advertisement
ಖಾಸಗಿ ಆಸ್ಪತ್ರೆಯಲ್ಲಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಿದಾಗ ಅಸ್ಥಿಮಜ್ಜೆ ಕಸಿ ಚಿಕಿತ್ಸೆ ನೀಡಬೇಕಿದ್ದು, 32 ಲಕ್ಷ ರೂ. ವೆಚ್ಚವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಬಡ ಕುಟುಂಬದವರಾದ ತಮಗೆ ಅಷ್ಟು ದುಬಾರಿ ವೆಚ್ಚದ ಚಿಕಿತ್ಸೆ ಕೊಡಿಸಲು ಸಾಧ್ಯವಿಲ್ಲ. ಹಾಗಾಗಿ ನೆರವು ನೀಡಬೇಕು ಎಂದು ದಂಪತಿ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು, ತಕ್ಷಣವೇ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ಕರೆದೊಯ್ಯಿರಿ. ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು.
ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯೊಂದು ಆರ್‌ಟಿಇ ಅಡಿಯಲ್ಲಿ ಬಡ ಮಕ್ಕಳಿಗೆ ಸೀಟು ನೀಡದಿರುವ ಬಗ್ಗೆ ಸಾರ್ವಜನಿಕರೊಬ್ಬರು ಗಮನ ಸೆಳೆದಾಗ ಈ ಬಗ್ಗೆ ಪರಿಶೀಲಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದರು.
ಹೆಬ್ಟಾಳ ಕೆಂಪಾಪುರದಲ್ಲಿ ವಿದ್ಯಾನಿಕೇತನ ಶಾಲೆಯು ಆರ್‌ಟಿಇ ಅಡಿ 33 ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಬೇಕೆಂಬ ಆದೇಶವಿದ್ದರೂ ನೀಡುತ್ತಿಲ್ಲ. ಗುಜರಾತಿ ಭಾಷಾ ಅಲ್ಪಸಂಖ್ಯಾತ ಕೋಟಾದಡಿಯ ಶಿಕ್ಷಣ ಸಂಸ್ಥೆಗೆ ಆರ್‌ಟಿಇ ಅನ್ವಯಿಸುವುದಿಲ್ಲ ಎಂದು ಆಡಳಿತ ಮಂಡಳಿ ಸಬೂಬು ಹೇಳುತ್ತಿದೆ. ಈ ಬಗ್ಗೆ ಇತ್ತೀಚೆಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆಗ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಎಂ.ಲಕ್ಷ್ಮೀನಾರಾಯಣ್ ಅವರು ಮನವಿಯನ್ನು ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಶಾಲೆಗೆ ಸೂಚಿಸಿದ್ದರು. ಈ ಪತ್ರಕ್ಕೂ ಶಾಲೆಯ ಆಡಳಿತ ಮಂಡಳಿ ಬೆಲೆ ನೀಡಿಲ್ಲ ಎಂದು ಮಹದೇವ ರಾವ್ ಹೇಳಿದರು.
ಬಡವರು, ಆರ್ಥಿಕವಾಗಿ ಹಿಂದುಳಿದವರು, ಪರಿಶಿಷ್ಟ ಜಾತಿ, ಪಂಗಡ ಕುಟುಂಬದ ಮಕ್ಕಳಿದ್ದು ಅವರಿಗೆ ಆರ್‌ಟಿಇ ಅಡಿ ಪ್ರವೇಶ ನೀಡಿಲ್ಲ. ಇದನ್ನು ಸೋಮವಾರ ಮತ್ತೂಮ್ಮೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದ್ದು, ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ತಮ್ಮ ನಿವೇಶನ ಒತ್ತುವರಿಯಾಗಿದ್ದು, ಅದನ್ನು ತೆರವುಗೊಳಿಸಬೇಕೆಂದು ನ್ಯಾಯಾಲಯದ ಆದೇಶವಿದ್ದರೂ ತೆರವುಗೊಳಿಸುತ್ತಿಲ್ಲ ಎಂದು ವಯೋವೃದ್ಧೆ ಗಂಗಮ್ಮ, ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ಉಲ್ಲಾಳ ಉಪನಗರದ ಅಂಬೇಡ್ಕರ್ ಕಾಲೋನಿಯ 9ನೇ ಅಡ್ಡರಸ್ತೆಯಲ್ಲಿ 30 ಹಾಗೂ 40 ಚದರ ಅಡಿ ವಿಸ್ತೀರ್ಣದ ನಿವೇಶನವಿದೆ. ಒಂದು ಬದಿ ರಮೇಶ್ ಎಂಬುವರು ಎಂಟು ಅಡಿ, ಇನ್ನೊಂದೆಡೆ ದೊರೆಸ್ವಾಮಿ ಎಂಬುವರು ನಾಲ್ಕು ಅಡಿ ಒತ್ತುವರಿ ಮಾಡಿದ್ದಾರೆ. ಈ ಬಗ್ಗೆ ದೂರು ನೀಡಿದಾಗ ತಹಶೀಲ್ದಾರ್ ಸರ್ವೇ ನಡೆಸಿ ಒತ್ತುವರಿಯನ್ನು ದೃಢಪಡಿಸಿದ್ದರು. ನಂತರ ನ್ಯಾಯಾಲಯ ಸಹ ಒತ್ತುವರಿ ತೆರವುಗೊಳಿಸಲು ಸೂಚಿಸಿತ್ತು. ಇದೀಗ ತಹಶೀಲ್ದಾರ್ ಬದಲಾಗಿದ್ದು, ಮತ್ತೆ ಸಮಸ್ಯೆ ತಲೆದೋರಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದ್ದು, ಪರಿಶೀಲಿಸಿ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ ಎಂದು ಗಂಗಮ್ಮ ಹೇಳಿದರು.
ಆತ್ಮೀಯತೆ ತೋರಿದ ಸಿಎಂತಾಯಿ ಅಂಧರಾಗಿದ್ದು, ಬಾಡಿಗೆ ಮನೆಯಲ್ಲಿ ನೆಲೆಸಿರುವ ತಮಗೆ ನೆರವಾಗಬೇಕು ಎಂದು ಕೊಡಿಗೇಹಳ್ಳಿಯ ಬಾಲಕನೊಬ್ಬ ತಾಯಿಯೊಂದಿಗೆ ಜನತಾ ದರ್ಶನಕ್ಕೆ ಬಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಬಾಲಕರನ್ನು ಆಲಿಂಗಿಸಿ ಆತ್ಮೀಯತೆ ತೋರಿದರು. ಬಳಿಕ ತಮಗೆ ನೆರವು ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ತಾಯಿ ತಿಳಿಸಿದರು.