ಕೊಪ್ಪಳ: ಗ್ರಾಮೀಣ ಜನರಿಗೆ ಸಮರ್ಪಕ ಉದ್ಯೋಗ ಖಾತ್ರಿ ಕೆಲಸ ಕೊಡಬೇಕಾದ ಗ್ರಾಪಂಗಳೇ ಲಕ್ಷ ಲಕ್ಷ ಹಣ ಲೂಟಿ ಮಾಡಿವೆ. ಜಿಲ್ಲೆಯ 32 ಗ್ರಾಪಂಗಳಿಂದ ಕಳೆದ 5 ವರ್ಷಗಳಲ್ಲಿ ಬರೊಬ್ಬರಿ 1,74,14,977 ರೂ. ಅಕ್ರಮ ಎಸಗಿದ್ದು, ಜಿಲ್ಲಾ ಓಂಬುಡ್ಸಮನ್ ವರದಿಯಿಂದ ಬೆಳಕಿಗೆ ಬಂದಿದೆ. ಅಕ್ರಮ ಹಣ ವಸೂಲಾತಿಗೆ ಶಿಫಾರಸು ಮಾಡಿದ್ದರೂ ಜಿಪಂ ಸಿಇಒ ಅವರು ಈ ವರೆಗೂ ಕೇವಲ 6,58,424 ರೂ. ವಸೂಲಿ ಮಾಡಿದ್ದು ದುರಂತವೇ ಸರಿ.
ಹೌದು. ಈ ಹಿಂದಿನ ಯುಪಿಎ ಸರ್ಕಾರದಲ್ಲಿ ರಾಷ್ಟ್ರೀಯ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಆರಂಭಿಸಿದೆ. ಪ್ರತಿ ವರ್ಷ ನೂರು ಮಾನವ ದಿನಗಳನ್ನು ಸೃಜನೆ ಮಾಡಿ ಒಂದು ಕುಟುಂಬಕ್ಕೆ ನೂರು ದಿನದ ಕೆಲಸ ಕೊಡುತ್ತಿದೆ. ಜನರಿಗೆ ದುಡಿಮೆ ಸಿಗದೇ ಹೋದಾಗ ಗ್ರಾಪಂ ಮೂಲಕ ನಮೂನೆ-6ರ ಅರ್ಜಿ ಕೊಟ್ಟು ಉದ್ಯೋಗ ಪಡೆಯಬಹುದು. ಅದಕ್ಕೆ ತಕ್ಕಂತೆ ಕೂಲಿ ನಿಗ ದಿ ಮಾಡಿದೆ. ಇತ್ತೀಚೆಗೆ 7 ದಿನಕ್ಕೆ ಕೂಲಿ ಹಣ ಪಾವತಿಗೆ ಕ್ರಮ ಕೈಗೊಂಡಿದೆ.
ಆದರೆ, ಜನರಿಗೆ ಕೂಲಿ ಕೊಡುವ ಹೆಸರಲ್ಲಿ ಹಾಗೂ ಕೆಲಸ ಮಾಡಿದ್ದೇವೆ ಎಂದು ಬೋಗಸ್ ಬಿಲ್ ಸೃಷ್ಟಿ ಮಾಡಿರುವುದು ವ್ಯಾಪಕವಾಗಿ ಕೇಳಿ ಬಂದ ಹಿನ್ನೆಲೆಯಲ್ಲಿ ನರೇಗಾ ಅಕ್ರಮ ನಡೆದರೆ ಅದರ ತನಿಖೆಗೆ ಹಿರಿಯ ವಕೀಲರ ನೇತೃತ್ವದ ಓಂಬುಡ್ಸಮನ್ ಹುದ್ದೆ ಸೃಜಿಸಿ ನೇಮಕ ಮಾಡಿ ಅಕ್ರಮ ಬಯಲಿಗೆಳೆಯಲು ಸರ್ಕಾರ ನಿರ್ಧರಿಸಿತ್ತು.
ಕಳೆದ ಐದು ವರ್ಷದಲ್ಲಿ ಜಿಲ್ಲಾ ಓಂಬುಡ್ಸಮನ್ ಗಳು ಜಿಲ್ಲೆಯಲ್ಲಿ ಬರೊಬ್ಬರಿ 1,74,14,977 ರೂ. ಅಕ್ರಮ ನಡೆದಿರುವ ಬಗ್ಗೆ ತನಿಖೆ ಮಾಡಿವೆ. 32 ಗ್ರಾಪಂಗಳಲ್ಲಿ ಈ ಅಕ್ರಮ ನಡೆದಿದ್ದು, ಓಂಬುಡ್ಸ್ ಮನ್ ಕಚೇರಿಗೆ ಬಂದ 130 ದೂರುಗಳಲ್ಲಿ 112 ದೂರುಗಳನ್ನು ವಿಚಾರಣೆ ಮಾಡಿ, ತನಿಖೆ ನಡೆಸಿ ವಿಲೇವಾರಿ ಮಾಡಿ ಅವ್ಯವಹಾರದ ಬಗ್ಗೆ ಪತ್ತೆ ಮಾಡಿವೆ. ಹಲವು ಗ್ರಾಪಂಗಳು ಕಳಪೆ ಕೆಲಸ ಮಾಡಿ ಹಣ ಗುಳುಂ ಮಾಡಿದ್ದರೆ, ಇನ್ನು ಕೆಲವು ಬೋಗಸ್ ಬಿಲ್ ಸೃಷ್ಟಿಸಿವೆ. ವಿಶೇಷವಾಗಿ ಗ್ರಾಪಂ ಅಧ್ಯಕ್ಷ, ಪಿಡಿಒ, ತಾಂತ್ರಿಕ ಸಹಾಯಕ, ಸಂಯೋಜಕ, ಕಿರಿಯ ಇಂಜನಿಯರ್ ಸೇರಿದಂತೆ ತಾಲೂಕು ಹಂತದ ಅಧಿಕಾರಿಗಳು ಭಾಗಿಯಾಗಿದ್ದಾರೆ.
ವಸೂಲಿ 6.58 ಲಕ್ಷ ರೂ.: ಓಂಬುಡ್ಸ್‌ಮನ್‌ಗಳು ನರೇಗಾ ಅವ್ಯವಹಾರದಲ್ಲಿ ನ್ಯಾಯಾಧೀಶರಂತೆ ಕಾರ್ಯ ನಿರ್ವಹಿಸುತ್ತಿದ್ದು, ಇವರು ನೇರ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ. ಜೊತೆಗೆ ಜಿಪಂ ಸಿಇಒ ಅವರಿಗೆ ಗ್ರಾಪಂಗಳು ಅವ್ಯವಹಾರ ನಡೆಸಿದ ಬಗ್ಗೆ ದಾಖಲೆ ಸಮೇತ ವರದಿ ಸಲ್ಲಿಸಿ, ಹಣ ದುರ್ಬಳಕೆ ಮಾಡಿಕೊಂಡ ವ್ಯಕ್ತಿಗಳಿಂದ ಪುನಃ ವಸೂಲಿಗೆ ಶಿಫಾರಸ್ಸು ಮಾಡಲಿವೆ. ಜಿಪಂ ಸಿಇಒ ಅವರು ಕೇವಲ 6,58,424 ರೂ. ವಸೂಲಿ ಮಾಡಿದ್ದಾರೆ. ಸಿಇಒ ಅವರು ಹಣ ದುರ್ಬಳಕೆ ಮಾಡಿಕೊಂಡವರಿಂದ ವಸೂಲಿ ಮಾಡಿ ಓಂಬುಡ್ಸಮನ್‌ಗಳಿಗೆ ಪ್ರತಿ 2 ತಿಂಗಳಿಗೆ ವರದಿ ಕೊಡಬೇಕಿದೆ. ಆದರೆ ಅದ್ಯಾವ ಕೆಲಸವೂ ಸಮರ್ಪಕ ನಡೆಯುತ್ತಿಲ್ಲ. ಇನ್ನೂ ಕೆಲವು ಗ್ರಾಪಂಗಳು ಅಕ್ರಮ ನಡೆದಿಲ್ಲವೆಂದು ರಾಜ್ಯ ಓಂಬುಡ್ಸಮನ್ ಕಚೇರಿಗೆ ಮೇಲ್ಮನವಿ ಸಲ್ಲಿಸಿವೆ.
ಇಷ್ಟೆಲ್ಲ ಅವ್ಯವಹಾರ ನಡೆದರೂ ಅಧಿಕಾರಿಗಳ ಮೇಲೆ, ಅಧ್ಯಕ್ಷರ ಮೇಲೆ ಯಾವುದೇ ಕ್ರಮ ಆಗದೇ ಇರುವುದು ನಿಜಕ್ಕೂ ಬೇಸರದ ಸಂಗತಿ. ಸರ್ಕಾರದ ಹಣ ದುರ್ಬಳಕೆಯಾಗಿದೆ ಎಂದು ವರದಿ ಕೊಟ್ಟರೂ ಕ್ರಮವಿಲ್ಲವೆಂದರೆ ಮುಂದೇನು ಗತಿ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.
ವಸೂಲಾತಿಗೆ ಶಿಫಾರಸು ಮಾಡಿರುವ ಹಣ ಹಾಗೂ ಗ್ರಾಪಂ ಗೌರಿಪುರ ಗ್ರಾಪಂ-32,872 ರೂ., ಗುಳದಳ್ಳಿ-ಬೂದಗುಂಪಾ-2,09,415 ರೂ., ಮುದೇನೂರು-93,720 ರೂ., ಹಾಸಗಲ್-1,16,591 ರೂ., ತಾಳಕೇರಿ-ಗಾಣದಾಳ-6,64,825 ರೂ., ಚಿಕ್ಕಜಂತಗಲ್- 1,47,810 ರೂ., ಕರಮುಡಿ-1,86,547 ರೂ., ವೆಂಕಟಗಿರಿ-1,69,957 ರೂ., ಹೊಸಕೇರಾ-1,69,957 ರೂ. ಹಾಗೂ 31,474 ರೂ., ಮಂಡಲಗೇರಿ-28,611 ರೂ., ಹಿರೇಅರಳಿಹಳ್ಳಿ-72,899 ರೂ., ಸುಳೇಕಲ್ -64,700 ರೂ., ಆನೆಗೊಂದಿ-5,13,229 ರೂ., ಮುಧೋಳ-1,00,865 ರೂ., ಶಿರಗುಂಪಿ-3,16,531 ರೂ., ಬೆನ್ನೂರು-1,51,008 ರೂ., ಮರ್ಲಾನಹಳ್ಳಿ-1,57,448 ರೂ, ಬೆನಕಾಳ-1,05,376 ರೂ., ಗೌರಿಪುರ-1,33,582 ರೂ, ಅಡವಿಬಾವಿ-10,28,665 ರೂ., ನವಲಿ-2,17,940, ಚಿಕ್ಕಬೊಮ್ಮನಾಳ-24,817, ಮೈಲಾಪುರ-8,07,091, ಕೊರಡಕೇರಾ-11,19,766, ಹಿರೇಮನ್ನಾಪುರ-54,30,272, ಕೆಸರಟ್ಟಿ-ಹೇರೂರು-5,60,586, ಅಡವಿಬಾವಿ-ಹೊಸಳ್ಳಿ-47,262, ಹಣವಾಳ-5,38,160, ಸುಳೆಕಲ್-ಕಲಕೇರಿ-7,62,414, ಕರಡೋಣ-5,11,905, ಹೇರೂರು-ಗೋನಾಳ-4,14,725, ಚಿಕ್ಕ ಜಂತಕಲ್ -26,53,914 ರೂ. ಸೇರಿದಂತೆ ಒಟ್ಟು 1,74,14,977 ರೂ. ಅವ್ಯವಹಾರ ನಡೆದಿದ್ದು ವಸೂಲಾತಿ ಮಾಡಬೇಕಿದೆ.
ದತ್ತು ಕಮ್ಮಾರ