ಬೆಂಗಳೂರು: ಕನ್ನಡಿಗರಿಗೆ ಉದ್ಯೋಗ ನೀಡುವ ವಿಚಾರಕ್ಕೆ ಸಂಬಂಧಟ್ಟಂತೆ ರಾಜ್ಯ ಸರಕಾರ ಪ್ರತ್ಯೇಕ ನೀತಿ ರೂಪಿಸಿದ್ದು, ಸಣ್ಣ, ಮಧ್ಯಮ ಹಾಗೂ ಬೃಹತ್ ಕೈಗಾರಿಕೆಗಳು ಇನ್ನು ಮುಂದೆ ಬಂಡವಾಳ ಹೂಡಿಕೆ ವಿಸ್ತರಣೆ ಮಾಡುವಾಗ ಹೆಚ್ಚುವರಿ ಉದ್ಯೋಗ ಸೃಷ್ಟಿಯ ಭರವಸೆ ನೀಡುವುದು ಕಡ್ಡಾಯಗೊಳಿಸಲಾಗಿದೆ.
ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 2022 ರಿಂದ 2025ಕ್ಕೆ ಅನ್ವಯವಾಗುವಂತೆ ಈ ನೀತಿ ಜಾರಿಗೆ ತರಲಾಗಿದೆ.
ಕೈಗಾರಿಕೆಗಳನ್ನು ಬಂಡವಾಳ ಹೂಡಿಕೆ ಆಧಾರದ ಮೇಲೆ ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳು ಎಂದು ವರ್ಗೀಕರಿಸಲಾಗಿದೆ.
ಇದನ್ನೂ ಓದಿ:”ಶಿಕಾರಿಪುರಕ್ಕಿನ್ನು ವಿಜಯೇಂದ್ರ”: ಮಹತ್ವದ ಘೋಷಣೆ ಮಾಡಿದ ಯಡಿಯೂರಪ್ಪ
25 ಕೋಟಿಗೆ ಮೇಲ್ಪಟ್ಟ ಮಧ್ಯಮ ಕೈಗಾರಿಕೆಗಳು ಹೆಚ್ಚುವರಿ ಬಂಡವಾಳ ಹೂಡಿಕೆ ಮಾಡುವಾಗ 20 ಹೆಚ್ಚುವರಿ ಉದ್ಯೋಗ ಸೃಷ್ಟಿ ಮಾಡಬೇಕಾಗುತ್ತದೆ. 100 ಕೋಟಿ ರೂ. ಮೇಲ್ಪಟ್ಟ ಕೈಗಾರಿಕೆಗಳು ಹೂಡಿಕೆ ಮಾಡುವಾಗ 35 ಹೊಸ ಹುದ್ದೆ ಸೃಷ್ಟಿ ಮಾಡಬೇಕಾಗುತ್ತದೆ.
ಆದರೆ ಆಗ ಸೃಷ್ಟಿಸುವ ಹೊಸ ಹುದ್ದೆಗಳು ಎ, ಬಿ ದರ್ಜೆಯ ಉದ್ಯೋಗವಾಗಿರಬೇಕು. ಮತ್ತು ಸ್ಥಳೀಯರಿಗೆ ಉದ್ಯೋಗ ನೀಡಬೇಕಾಗುತ್ತದೆ. ಈ ನೀತಿಯನ್ನು ಕೆಐಎಡಿಬಿ ಸಂಸ್ಥೆ ಕಾಲಕಾಲಕ್ಕೆ ಪರಿಶೀಲನೆ ನಡೆಸುತ್ತದೆ.