Advertisement

ಎಲ್ಲ  ವಿ.ವಿ.ಗಳಲ್ಲಿ  ಉದ್ಯೋಗ, ಕೌಶಲ ಕೇಂದ್ರ

04:39 AM Jan 14, 2019 | |

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಶಿಕ್ಷಣ ಸಂಸ್ಥೆಗಳ ಮಾದರಿಯಲ್ಲೇ ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳಲ್ಲಿ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಕೌಶಲಾಭಿವೃದ್ಧಿ ಕೇಂದ್ರ ತೆರೆಯುವ ಚಿಂತನೆ ಇದ್ದು, ಎಲ್ಲ ವಿ.ವಿ.ಗಳ ಕುಲಪತಿ ಗಳ ಜತೆ ಸಮಾಲೋಚನೆ ನಡೆಸಲಾಗಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಹೇಳಿದರು.

Advertisement

ಅವರು ರವಿವಾರ ಧರ್ಮಸ್ಥಳದಲ್ಲಿ ಶ್ರೀ ಕ್ಷೇತ್ರ ಧ.ಗ್ರಾ.ಅ. ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರ ಮಕ್ಕಳಾದ  10 ಸಾವಿರ ವಿದ್ಯಾರ್ಥಿಗಳಿಗೆ 6.50 ಕೋ.ರೂ. ಸುಜ್ಞಾನ ನಿಧಿ ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದರು.

ಎಲ್ಲ ರಂಗಗಳಲ್ಲಿಯೂ ಅನನ್ಯ  ಸೇವೆ ನೀಡಿರುವ ಕ್ಷೇತ್ರವು ಸರಕಾರಕ್ಕೆ ಆದರ್ಶಪ್ರಾಯವಾದ ಕಾರ್ಯಕ್ರಮ ಗಳನ್ನು ರೂಪಿಸಿದೆ. ಕೃಷಿಯಲ್ಲಿ ಯಂತ್ರೋಪಕರಣ ಬಳಕೆ, ಶುದ್ಧ ಕುಡಿಯುವ ನೀರಿನ ಘಟಕಗಳು, ಕೆರೆಗಳ ಪುನಶ್ಚೇತನದ ಮೂಲಕ ಡಾ| ಹೆಗ್ಗಡೆ ಸಂಜೀವಿನಿಯ ಪಾತ್ರ ನಿರ್ವಹಿಸಿದ್ದಾರೆ ಎಂದರು.

ಮಹಿಳಾ ಸಶಕ್ತೀಕರಣದಲ್ಲಿ ಕ್ರಾಂತಿ ಯನ್ನೇ ನಿರ್ಮಿಸಿರುವ ಹೆಗ್ಗಡೆಯವರು 6 ಲಕ್ಷ ಸ್ವಸಹಾಯ ಸಂಘಗಳ ಸದಸ್ಯರಿಗೆ 8,700 ಕೋ.ರೂ. ಸಾಲ, 1,400 ಕೋ.ರೂ. ಉಳಿತಾಯದ ಮೂಲಕ ಅನನ್ಯ ಕೊಡುಗೆ ಸಲ್ಲಿಸಿದ್ದಾರೆ ಎಂದು ಹೇಳಿದರು.

ಸಾಧನೆ ಅಗತ್ಯ
ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ನಾವು ದೇವರಲ್ಲಿ ಅನುಗ್ರಹ ಹಾಗೂ ಅವಕಾಶಕ್ಕಾಗಿ ಪ್ರಾರ್ಥಿಸುತ್ತಿದ್ದು, ಯಾವುದೇ ಪ್ರಾರ್ಥನೆಯ ಹಿಂದೆ ಸಾಧನೆಯ ಶ್ರಮ ಇರಬೇಕಾಗುತ್ತದೆ. ನಾವು ನಿರ್ದಿಷ್ಟ ಗುರಿಯಿಂದ ಹೆಜ್ಜೆ ಹಾಕಿದಾಗ ದೇವರು ನಮ್ಮನ್ನು ಮುನ್ನಡೆಸುತ್ತಾನೆ ಎಂದರು. ಈ ಬಾರಿ 6.50 ಕೋ.ರೂ. ವಿದ್ಯಾರ್ಥಿ ವೇತನ ವಿತರಿಸಲಾಗಿದ್ದು, 2,700 ಮಂದಿ ಪ್ರಾಂಶುಪಾಲರು ಉತ್ತಮ ಸ್ಪಂದನೆ ನೀಡಿದ್ದಾರೆ ಎಂದರು.

Advertisement

ಸುಜ್ಞಾನ ನಿಧಿ ವೇತನ ಪಡೆದು ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ತಮ್ಮ ಸಂಪಾದನೆಯಲ್ಲಿ ನೀಡಿದ 2 ಲಕ್ಷ ರೂ.ಗಳನ್ನು ಸುಜ್ಞಾನ ನಿಧಿ ವೃದ್ಧಿ ಸಂಘಕ್ಕೆ ಹಸ್ತಾಂತರಿಸಲಾಯಿತು. ವಿಧಾನ ಪರಿಷತ್‌ ಸದಸ್ಯ ಕೆ. ಹರೀಶ್‌ಕುಮಾರ್‌, ಮಂಗಳೂರು ಕೆಪಿಟಿಯ ಪ್ರಾಂಶುಪಾಲ ಮೇ| ವಿಜಯಕುಮಾರ್‌, ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ, ತಾ.ಪಂ. ಸದಸ್ಯೆ ಧನಲಕೀ ಜನಾರ್ದನ್‌, ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷ ಚಂದನ್‌ಪ್ರಸಾದ್‌ ಕಾಮತ್‌ ವೇದಿಕೆಯಲ್ಲಿದ್ದರು. ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್‌. ಮಂಜುನಾಥ್‌ ಸ್ವಾಗತಿಸಿದರು. ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಬಿ. ಜಯರಾಮ ನೆಲ್ಲಿತ್ತಾಯ ವಂದಿಸಿದರು. ತಾಲೂಕು ಯೋಜನಾಧಿಕಾರಿ ಜಯಕರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಪ್ರಯತ್ನವೇ ಮುಖ್ಯ
ಸುಜ್ಞಾನನಿಧಿ ವೃದ್ಧಿ ಸಂಘವನ್ನು ಉದ್ಘಾಟಿಸಿದ ಹೇಮಾವತಿ ವೀ. ಹೆಗ್ಗಡೆ ಮಾತನಾಡಿ, ನಮ್ಮ ಯಾವುದೇ ಸಾಧನೆಗೂ ಶೇ. 2 ಪ್ರತಿಭೆ ಇದ್ದರೆ ಶೇ. 98 ಪ್ರಯತ್ನ ಇರಬೇಕಾಗುತ್ತದೆ. ವಿದ್ಯಾರ್ಥಿಗಳು ಸಾಧನೆಯ ಕನಸು ಕಂಡು ಅದನ್ನು ನನಸಾಗಿಸಬೇಕಾಗಿದ್ದು, ಅದಕ್ಕೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ಸುಜ್ಞಾನ ನಿಧಿ ವಿತರಿಸಲಾಗುತ್ತಿದೆ ಎಂದರು.

ವಿ.ವಿ. ಮಂಜೂರು
ಕ್ಷೇತ್ರದ ಶಿಕ್ಷಣ ಸಂಸ್ಥೆಗೆ ವಿ.ವಿ. ಮಂಜೂರಾತಿ ನೀಡುವುದಕ್ಕೆ ಪ್ರಸ್ತಾವನೆ ಬಂದಿದ್ದು, ಈಗಾಗಲೇ ಅದಕ್ಕೆ ಸರಕಾರ ಮಂಜೂರಾತಿ ಆದೇಶ ನೀಡಿದೆ. ಕುಮಾರಸ್ವಾಮಿ ಸಿಎಂ ಆಗಿದ್ದು, ನಾನು ಉನ್ನತ ಶಿಕ್ಷಣ ಸಚಿವನಾಗಿರುವಾಗ ಈ ಅವಕಾಶ ಸಿಕ್ಕಿರುವುದು ನಮ್ಮ ಪುಣ್ಯವೇ ಸರಿ ಎಂದು ಸಚಿವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next